ತುಮಕೂರು :

      ಹೇಮಾವತಿ ತುಮಕೂರು ಶಾಖಾ ನಾಲೆಯ 75.5 ಕಿ.ಮೀ ನಾಲೆಯನ್ನು 475 ಕೋಟಿ. ರೂಗಳಲ್ಲಿ ಆಧುನೀಕರಣದಿಂದ, ಈ ಭಾಗದ ಎಲ್ಲಾ ಜನರ ಬಹು ದಿನಗಳ ಕನಸು ನನಸಾಗಿದೆ. ಇದರಿಂದ ಎಲ್ಲಾ ಕೆರೆಗಳಿಗೆ ಶೀಘ್ರ ನೀರು ತುಂಬಿಸುವುದರಿಂದ ಕುಡಿಯುವ ನೀರು ಸರಬರಾಜು ಆಗಲಿದೆ ಎಂದು ಕಾನೂನು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ತಿಳಿಸಿದರು.

      ಅವರು ಇಂದು ಬೆಳಗರಹಳ್ಳಿಯಲ್ಲಿ ನಾಲೆಯ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಹೇಮಾವತಿಯಿಂದ 24.83 ಟಿ.ಎಂ.ಸಿ ನೀರನ್ನು ನಾಲೆಗಳ ಮೂಲಕ ಹರಿಸಿ ಕೆರೆಗಳನ್ನು ತುಂಬಿಸುವುದರಿಂದ ಈ ಭಾಗದ ಜನರಿಗೆ ಕುಡಿಯುವ ನೀರು ಸರಬರಾಜು, ರೈತರಿಗೆ ಬೆಳೆ ಬೆಳೆಯಲು ಅನುಕೂಲ ಆಗುವುದರ ಜೊತೆಗೆ ಅಂತರ್ಜಲ ಹೆಚ್ಚಾಗಲಿದೆ, ನಾಲೆಯಿಂದ ವ್ಯರ್ಥವಾಗಿ ಹರಿದು ಹೋಗುತ್ತಿದ್ದ, ನೀರನ್ನು ಉಳಿಸಿ ಸದ್ಭಳಕೆ ಮಾಡಿಕೊಳ್ಳಲು ಈ ಯೋಜನೆ ಅತ್ಯವಶ್ಯಕವಾಗಿತ್ತು ಎಂದು ಅವರು ಹೇಳಿದರು.
ಈ ಯೋಜನೆ ನವಿಲೆಯಿಂದ ಮುದ್ಲಾಪುರ, ವಯ, ಯಡಗರಹಳ್ಳಿ, ಈಚನೂರು, ಅರಳಗುಪ್ಪೆ, ಕುಂದೂರು, ಅಮ್ಮಸಂದ್ರ, ಸಂಪಿಗೆವರೆಗೆ ನಾಲೆ ಆಧುನೀಕರಣ ನಡೆಯಲಿದೆ.

      ಕರ್ನಾಟಕ ಮಾನ್ಯ ಮುಖ್ಯಮಂತ್ರಿಗಳು ಈ ಯೋಜನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡುವುದರ ಜೊತೆಗೆ 475 ಕೋಟಿ.ರೂ ನೀಡುವುದರಿಂದ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಕಾವೇರಿ ನೀರಾವರಿ ನಿಗಮದಿಂದ ಈ ಕಾಮಗಾರಿಯನ್ನು ಇನ್ನು 3-4 ತಿಂಗಳಲ್ಲಿ ಪೂರ್ಣಗೊಳಿಸಿಕೊಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

        ಕಾಮಗಾರಿಯಲ್ಲಿ ಯಾವುದೇ ರೀತಿಯ ಕಳಪೆಯಾಗದಂತೆ ಗುಣಮಟ್ಟ ಕಾಪಾಡಿಕೊಳ್ಳಬೇಕು. ಮಾನವೀಯತೆಗಿಂತ ದೊಡ್ಡದಾದ ಕಾನೂನು ಯಾವುದು ಇರುವುದಿಲ್ಲ. ಇದನ್ನು ಅರಿತು ಈ ಭಾಗದ ರೈತರ ಸಣ್ಣ-ಪುಟ್ಟ ಬೇಡಿಕೆಗಳನ್ನು ಈಡೇರಿಸುವಂತೆ ಯೋಜನೆಯ ಪ್ರಯೋಜನವಾಗುವಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು.

      ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸದ ಜಿ.ಎಸ್.ಬಸವರಾಜು ಅವರು ಮಾತನಾಡಿ, ಹೇಮಾವತಿಯಿಂದ ಈ ಭಾಗಕ್ಕೆ ಬರುವ ಸಂಪೂರ್ಣ ನೀರನ್ನು ನಾಲೆಯಿಂದ ಹರಿಸಿ, ಮಳೆಗಾಲದಲ್ಲಿ ಕೆರೆಗಳನ್ನು ತುಂಬಿಸುವುದರಿಂದ ರೈತರಿಗೆ ವರ್ಷದ ಪೂರ್ತಿ ನೀರು ಸಿಗುವುದು. ನೀರಿನ ಸದ್ಭಳಕೆ ಮಾಡಿಕೊಂಡು ಮಿತವಾಗಿ ನೀರನ್ನು ಬಳಸಿ ಹೆಚ್ಚಿನ ಬೆಳೆ ಬೆಳೆಯಬೇಕೆಂದು ಅವರು ಸಲಹೆ ಮಾಡಿದರು.

      ಮುಂದುವರೆದು ಮಾತನಾಡಿ, ಪ್ರಧಾನ ಮಂತ್ರಿಯವರ ಕೃಷಿ ಸಿಂಚಾಯಿ ಯೋಜನೆಯಿಂದ ಹನಿ ನೀರಾವರಿ, ಸ್ರ್ಪಿಂಕ್ಲರ್ ಮೂಲಕ ಬೆಳೆಗಳಿಗೆ ಅಗತ್ಯವಿರುವಷ್ಟು ನೀರನ್ನು ಮಾತ್ರ ಉಪಯೋಗಿಸಿಕೊಂಡು, ಉತ್ತಮ ಬೆಳೆ ಬೆಳೆಯುವಂತೆ, ಬೇರೆಯವರಿಗೂ ಕೂಡ ನೀರು ಸರಬರಾಜು ಆಗುವಂತೆ ಸಹಕರಿಸುವಂತೆ ಅವರು ಮನವಿ ಮಾಡಿದರು. ಸಮುದ್ರಕ್ಕೆ ವ್ಯರ್ಥವಾಗಿ ಸೇರುತ್ತಿರುವ ಶುದ್ಧ ನೀರನ್ನು ತಡೆದು ಬೆಂಗಳೂರು ಮತ್ತು ಮೈಸೂರು ನಗರಗಳಿಗೆ ನೀರನ್ನು ಪೂರೈಸಬಹುದಾಗಿದೆ ಎಂದು ಅವರು ಹೇಳಿದರು.

      ಕೇಂದ್ರ ಸರ್ಕಾರದಿಂದ ನೀರಾವರಿಗಾಗಿ ಇನ್ನೂ ಅನುದಾನವನ್ನು ಎಂ.ಪಿ.ಪಿ ಯೋಜನೆಯಡಿಯಲ್ಲಿ ತರಬಹುದಾಗಿದೆ. ಅದಕ್ಕೆ ಎಲ್ಲಾ ಜನಪ್ರತಿನಿಧಿಗಳು ಮತ್ತು ಸ್ಥಳೀಯರ ಸಹಕಾರ ನೀಡುವಂತೆ ಅವರು ಕರೆ ನೀಡಿದರು. ಹೇಮಾವತಿ, ನೇತ್ರಾವತಿ, ಎತ್ತಿನಹೊಳೆ, ಕುಮಾರಧಾರ ಯೋಜನೆಯಿಂದ ಜಿಲ್ಲೆಯಲ್ಲಿ ಇನ್ನು ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಅವಕಾಶವಿದೆ ಎಂದು ಅವರು ತಿಳಿಸಿದರು.

       ಸಮಾರಂಭದ ಅಧ್ಯಕ್ಷತೆವಹಿಸಿದ್ದ ತಿಟಪೂರು ವಿಧಾನಸಭಾ ಶಾಸಕರಾದ ಬಿ.ಸಿ ನಾಗೇಶ್ ಮಾತನಾಡಿ, ಹೇಮಾವತಿ ನಾಲೆ ಆಧುನೀಕರಣಕ್ಕೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಹೋರಾಟ ಮಾಡಿ, ಕಾಮಗಾರಿ ಅನುಷ್ಠಾನಗೊಳಿಸಲು ಸಾಧ್ಯವಾಗಿದೆ. ನಾಲೆ ಆಧುನೀಕರಣದಿಂದ ನೀರು ವೇಗವಾಗಿ ಹರಿಯುವುದರಿಂದ ಅಲ್ಪಕಾಲದಲ್ಲಿ ನಾಲೆಯ ತುದಿಯವರೆಗೂ ಸರಾಗವಾಗಿ ಎಲ್ಲಾ ಕೆರೆಗಳಿಗೆ ತುಂಬಿಸಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.

       ಹೊನ್ನವಳ್ಳಿ ಏತನೀರಾವರಿ ಯೋಜನೆಗೆ 36 ಕೋಟಿ.ರೂಗಳ ಹೆಚ್ಚುವರಿ ಅನುದಾನ ಮಂಜೂರು ಆಗಿದ್ದು, ಅದರಿಂದ ಪೈಪ್‍ಲೈನ್ ಮತ್ತಿತರ ಕಾಮಗಾರಿಗಳನ್ನು ಕೈಗೊಂಡು ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ ತಾಲೂಕಿನ ಭಾಗದ ಜನರಿಗೂ ಕುಡಿಯುವ ನೀರನ್ನು ಕೊಡಬಹುದಾಗಿದೆ ಎಂದು ಅವರು ತಿಳಿಸಿದರು. ಮುಂಬರುವ ಸರ್ಕಾರದ ಆಯವ್ಯಯದಲ್ಲಿ ನೀರಾವರಿಗಾಗಿ 200 ಕೋಟಿ.ರೂಗಳ ಅನುದಾನವನ್ನು ಪಡೆಯಲಾಗುವುದೆಂದು ಅವರು ತಿಳಿಸಿದರು.

       ತುರುವೇಕೆರೆ ಶಾಸಕರಾದ ಎ.ಎಸ್.ಜಯರಾಮ್ ಅವರು ಸಮಾರಂಭವನ್ನುದ್ದೇಶಿಸಿ ಮಾತನಾಡಿ, ಜನಪ್ರತಿನಿಧಿಗಳ ಬಹಳ ಶ್ರಮದಿಂದ ಮಂಜೂರಾಗಿರುವ ಈ ಯೋಜನೆಯ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ಹೆಚ್ಚಿನ ಕಾಳಜಿವಹಿಸಬೇಕು. ಮತ್ತು ಈ ಭಾಗದ ರೈತರು ನೀರಿನ ಮಿತ ಬಳಕೆಗೆ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.

       ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಜಯಪ್ರಕಾಶ್ ಅವರು ಸರ್ವರನ್ನು ಸ್ವಾಗತಿಸಿ, ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಹೇಮಾವತಿ ಎಡದಂಡೆ ನಾಲೆ ಸರಪಳಿ 0.72 ಕಿ.ಮೀ ಆಧುನೀಕರಣ ಕಾಮಗಾರಿಯನ್ನು 2015ರಲ್ಲಿ 562.30 ಕೋಟಿ.ರೂಗಳಲ್ಲಿ ಆರಂಭಿಸಲಾಗಿತ್ತು. ಪ್ರಸ್ತುತ ನಾಲಾ ವಲಯ ವ್ಯಾಪ್ತಿಯ 75.5 ಕಿ.ಮೀ ನಾಲಾ ಆಧುನೀಕರಣ ಕಾಮಗಾರಿಯನ್ನು 475 ಕೋಟಿ.ರೂಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಸಚಿವರು ಭೂಮಿ ಪೂಜೆ ನೆರವೇರಿಸುವುದರ ಮೂಲಕ ಈ ಕಾಮಗಾರಿಗೆ ಚಾಲನೆ ನೀಡಿದ್ದಾರೆ. 2019-20ನೇ ಸಾಲಿನಲ್ಲಿ 70ರಿಂದ 166ರವರೆಗಿನ ನಾಲೆ ಆಧುನೀಕರಣ ಕಾಮಗಾರಿಯನ್ನು 550 ಕೋಟಿ.ರೂಗಳಲ್ಲಿ ನಿಗಮದ ಮಂಡಳಿಯ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದು ಅವರು ತಿಳಿಸಿದರು.

      ತುಮಕೂರು ಶಾಖಾ ನಾಲೆಯಡಿ 2,37,000 ಎಕರೆ ನೀರಾವರಿ ಅಚ್ಚುಕಟ್ಟು ಪ್ರದೇಶವಿದ್ದು, ಈ ವ್ಯಾಪ್ತಿಯ 266 ಕೆರೆಗಳಿಗೆ ನೀರು ತುಂಬಿಸುವುದು ಮತ್ತು 24 ಕುಡಿಯುವ ನೀರಿನ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

       ಸಮಾರಂಭದಲ್ಲಿ ನಾಗರಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸಿ.ನಾಗರತ್ಮಮ್ಮ, ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಕಾವ್ಯಪ್ರಸನ್ನ, ಹೇಮಾವತಿ ನಾಲಾ ವಲಯದ ಮುಖ್ಯ ಇಂಜಿನಿಯರ್ ಕೆ.ಬಾಲಕೃಷ್ಣ, ಸೂಪರಿಡೆಟಂಡ್ ಇಂಜಿನಿಯರ್ ವರದಯ್ಯ, ಎಕ್ಸಿಕ್ಯೂಟಿವ್ ಇಂಜಿನಿಯರ್ ಕೆ.ಬಿ ನಾಗೇಂದ್ರರಾವ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

(Visited 197 times, 1 visits today)