ಹೋಬಳಿ ಮಟ್ಟದ ಕಂದಾಯ ಅದಾಲತ್ ಕಾರ್ಯಕ್ರಮ ಆರಂಭ : ಶಾಸಕ ಎಸ್.ಆರ್.ಶ್ರೀನಿವಾಸ್

ಗುಬ್ಬಿ:

      ಹೋಬಳಿ ಮಟ್ಟದಲ್ಲಿ ನಡೆಯುತ್ತಿದ್ದ ಕಂದಾಯ ಅದಾಲತ್ ಕಾರ್ಯಕ್ರಮವನ್ನು ಶೀಘ್ರದಲ್ಲಿ ಮರಳಿ ಆರಂಭಿಸಿ ಕಚೇರಿಗೆ ಅಲೆದಾಡುವ ಮುಗ್ದ ಜನರ ಕೆಲಸವನ್ನು ಅವರ ಗ್ರಾಮಗಳಲ್ಲಿ ನಡೆಸಲಾಗುವುದು. ಈ ಕೆಲಸಕ್ಕೆ ಅಧಿಕಾರಿಗಳೊಟ್ಟಿಗೆ ಚರ್ಚಿಸಿರುವುದಾಗಿ ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

      ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಶಾಸಕರ ನೂತನ ಹೈಟೆಕ್ ಕಾರ್ಯಾಲಯಕ್ಕೆ ಚಾಲನೆ ನೀಡಿ ತಾಲ್ಲೂಕಿನ 1800 ಮಂದಿ ಕರೋನಾ ವಾರಿಯರ್ಸ್‍ಗಳಿಗೆ ಸನ್ಮಾನಿಸಿ ಮಾತನಾಡಿದ ಅವರು ಬಗರ್‍ಹುಕುಂ ಮಂಜೂರಾತಿಯಲ್ಲಿ ಈ ಹಿಂದೆ ನಡೆದಿದ್ದ ಭ್ರಷ್ಟಾಚಾರದ ಬಗ್ಗೆ ದೂರುಗಳಿದ್ದ ಕಾರಣ ಹೋಬಳಿ ಮಟ್ಟದಲ್ಲಿ ಅದಾಲತ್ ಮೂಲಕ ಅರ್ಹರನ್ನು ಗುರುತಿಸಿ ಮಂಜೂರು ಮಾಡಲಾಗುತ್ತಿದೆ. ಅಧಿಕಾರಿಗಳಿಂದ ಭ್ರಷ್ಟಾಚಾರ ನಡೆದಿದ್ದಲ್ಲಿ ಕಾನೂನು ಕ್ರಮ ಜರುಗಿಸಿ ಅರ್ಹ ಫಲಾನುಭವಿಗಳಿಗೆ ಭೂಮಿ ನೀಡುವ ಕೆಲಸವನ್ನು ಖುದ್ದು ನಡೆಸುತ್ತೇನೆ ಎಂದು ಭರವಸೆ ನೀಡಿದರು.

       ಕಳೆದ ಎಂಟು ತಿಂಗಳಿಂದ ಸಾರ್ವಜನಿಕರ ಭೇಟಿಗೆ ಕೋವಿಡ್ ವೈರಸ್ ಮತ್ತು ಕಚೇರಿ ನವೀಕರಣ ಕೆಲಸ ಅಡ್ಡಿಯಾಗಿತ್ತು. ಇನ್ಮುಂದೆ ನಿತ್ಯ ಸಾರ್ವಜನಿಕರ ಕೆಲಸ ಕಚೇರಿಯಲ್ಲಿ ನಡೆಯಲಿದೆ. ಸಿಬ್ಬಂದಿಗಳ ನೇಮಿಸಿ ಜನರಿಂದ ಸಮಸ್ಯೆಗಳನ್ನು ಅರ್ಜಿ ಮೂಲಕ ಪಡೆದು ಸ್ಥಳದಲ್ಲೇ ಪರಿಹಾರ ಒದಗಿಸುವ ಕೆಲಸ ಮಾಡಲಾಗುವುದು. ಪ್ರತಿ ಸೋಮವಾರ ಕಚೇರಿಗೆ ಭೇಟಿ ನೀಡಿ ಕೆಲಸವನ್ನು ನಡೆಸುತ್ತಿದ್ದ ಕಾರ್ಯವನ್ನು ನಿತ್ಯ ಮಾಡುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ ಶಾಸಕರು ಯಾವುದೇ ಸರ್ಕಾರಿ ಕಚೇರಿಗೆ ನೀಡುವ ದೂರು ಅರ್ಜಿಗಳ ಮತ್ತೊಂದು ಪ್ರತಿಯನ್ನು ಶಾಸಕರ ಕಾರ್ಯಾಲಯಕ್ಕೂ ನೀಡಿ ಸಮಸ್ಯೆಗೆ ತ್ವರಿತ ಪರಿಹಾರ ಕಾಣಲು ಕರೆ ನೀಡಿದರು.

     ಕರೋನಾ ವಿರುದ್ಧ ಹೋರಾಟ ಮಾಡಿದ ಅರೋಗ್ಯ ಇಲಾಖೆ ಮತ್ತು ಆಶಾ ಕಾರ್ಯಕತೆರ್ಯರ ಕೆಲಸ ಶ್ಲಾಘನೀಯ. ಗೌರವಧನವಷ್ಟೇ ಪಡೆದು ಯಾವುದೇ ಸುರಕ್ಷತೆ ಇಲ್ಲದೇ ರೋಗಿಗಳ ಹುಡುಕಾಟ ಮತ್ತು ಗ್ರಾಮೀಣ ಭಾಗದ ಜನರ ಆರೋಗ್ಯ ಕಾಪಾಡುವ ಕೆಲಸ ಮಾಡಿರುವ ಆಶಾ ಕಾರ್ಯಕರ್ತೆಯರ ಸೇವೆ ಮೆಚ್ಚುವಂತಹದು. ಇವರೊಟ್ಟಿಗೆ ಪೊಲೀಸ್ ಇಲಾಖೆ ಸಹ ಜನರ ರಕ್ಷಣೆ ನಡೆಸಿ ವೈರಸ್ ಹರಡುವಿಕೆಯಿಂದ ಕಾಪಾಡಿದ್ದಾರೆ. ಅಂಗನವಾಡಿ ಕಾರ್ಯರ್ತೆಯರು, ಪೌರ ಕಾರ್ಮಿಕರು ಸಹ ತಮ್ಮ ಕಾಯಕವನ್ನು ಚಾಚು ತಪ್ಪದೇ ನಿರ್ವಹಿಸಿ ಕರೋನಾ ವಿರುದ್ದ ಹೋರಾಟ ನಡೆಸಿದ್ದಾರೆ. ಇವರ ಕೆಲಸಕ್ಕೆ ಸಣ್ಣ ಗೌರವ ಸಮರ್ಪಿಸುವುದು ನಮ್ಮಗಳ ಕರ್ತವ್ಯ ಎಂದರು.

      ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ ಮಾತನಾಡಿ ಸರಳತೆಯಲ್ಲಿ ಹೆಸರು ಗಳಿಸಿದ ಶ್ರೀನಿವಾಸ್ ಅವರು ಶಾಸಕರಾಗಿ ಹಾಗೂ ಸಚಿವರಾಗಿ ಜನರ ಮಧ್ಯೆ ಕೆಲಸ ಮಾಡುವ ರೀತಿ ನಿಜವಾದ ನಾಯಕತ್ವ ಗುರುತಿಸುತ್ತದೆ. ಜನರ ಸಮಸ್ಯೆ ಅಲಿಸಲು ಕಚೇರಿಯನ್ನು ನವೀಕರಿಸುವ ಜತೆಗೆ ಇಡೀ ತಾಲ್ಲೂಕಿನ ಕರೋನಾ ವಾರಿಯರ್ಸ್‍ಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದ ರೀತಿ ಶ್ಲಾಘನೀಯ. ಸಮಸ್ಯೆಗಳ ಹೊತ್ತು ಬರುವ ಜನರ ಮನಸ್ಸಿನಲ್ಲಿ ನಿರಾಳತೆ ಮೂಡಿಸುವ ಕೆಲಸ ಇಂದಿಗೂ ಮನೆಯ ಬಳಿ ನಡೆಸುತ್ತಿದ್ದರು. ಇದೇ ಕಾರ್ಯ ಕ್ಷೇತ್ರದ ಕಚೇರಿಯಲ್ಲಿ ಇನ್ಮುಂದೆ ನಡೆಸಲಿದ್ದಾರೆ. ಇವರ ಕಾರ್ಯಕ್ಕೆ ಪೂರಕವಾದ ಕಾರ್ಯಕರ್ತರ ತಂಡ ಮತ್ತು ಕುಟುಂಬ ಸದಸ್ಯರು ಸಾಥ್ ನೀಡುತ್ತಿರುವುದು ಸಂತಸ ವಿಚಾರ ಎಂದರು.

     ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು, ಮಾಜಿ ಶಾಸಕ ಸುಧಾಕರಲಾಲ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಗುರುರೇಣುಕಾರಾಧ್ಯ, ಭಾರತಿ ಶ್ರೀನಿವಾಸ್, ದುಷ್ಯಂತ್ ಶ್ರೀನಿವಾಸ್, ಎಪಿಎಂಸಿ ಸದಸ್ಯರಾದ ಕಳ್ಳಿಪಾಳ್ಯ ಲೋಕೇಶ್, ಲೋಕೇಶ್ವರ್, ಜಿ.ಟಿ.ರೇವಣ್ಣ, ಮುಖಂಡರಾದ ಕೆ.ಆರ್.ವೆಂಕಟೇಶ್, ಬೆಳ್ಳಿ ಲೋಕೇಶ್ ಇತರರು ಇದ್ದರು.

(Visited 3 times, 1 visits today)

Related posts

Leave a Comment