ಬೆಂಗಳೂರು: 

      ನಾನು ಇನ್ನು ಮುಂದೆ ಮಾಧ್ಯಮಗಳ ಜತೆ ಮಾತನಾಡುವುದೇ ಇಲ್ಲ. ನಾನು ವೇದಿಕೆ ಮೇಲೆ ಏನು ಮಾತನಾಡುತ್ತೇನೋ ಅಷ್ಟೆ. ಬೇಕಾದರೆ, ಬರೆದುಕೊಳ್ಳಿ, ಇಲ್ಲದಿದ್ದರೆ ಬಿಡಿ, ಇನ್ಮುಂದೆ ಮಾಧ್ಯಮಗಳ ಜತೆ ಪ್ರತ್ಯೇಕವಾಗಿ ಮಾತನಾಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.

      ಗುರುವಾರ ಬಡವರ ಬಂಧು ಯೋಜನೆಯನ್ನು ಉದ್ಘಾಟಿಸಿದ ನಂತರ ಮಾತನಾಡಿ, ನಾನು ಏನು ಮಾತನಾಡಿದರೂ ತಪ್ಪಾಗಿ ಭಾವಿಸುತ್ತಾರೆ. ನಾನು ಏನು ಮಾತನಾಡಬೇಕೆಂದು ಮಾಧ್ಯಮಗಳ ನೇತೃತ್ವದಲ್ಲಿ ಒಂದು ಸಮಿತಿ ಮಾಡಿ ಅವರಿಂದ ಸಲಹೆ ಪಡೆದು ಮಾತನಾಡಬೇಕಿದೆ ಎಂದು ವ್ಯಂಗ್ಯವಾಡಿದ್ದಾರೆ.

      ಬೀದಿಬದಿ ವ್ಯಾಪಾರಿಗಳಿಗಾಗಿ ಬಡವರ ಬಂಧು ಯೋಜನೆಯನ್ನು ಜಾರಿಗೊಳಿಸಲಾಗಿದೆ. ಬಡ್ಡಿ ಇಲ್ಲದೆ ಸಾಲ ಕೊಟ್ಟರೆ ಮರುಪಾವತಿ ಮಾಡಲ್ಲ. ಶೇ.4 ರಷ್ಟಾದರೂ ಬಡ್ಡಿ ವಿಧಿಸಿ ಎಂದು ಅಧಿಕಾರಿಗಳು ಸಲಹೆ ಕೊಟ್ಟಿದ್ದರು. ಆದರೆ, ನಾನು ಒಪ್ಪಲಿಲ್ಲ. ನನಗೆ ನಿಮ್ಮ ಮೇಲೆ ಸಂಪೂರ್ಣ ನಂಬಿಕೆಯಿದೆ. ಬಡ್ಡಿ ಇಲ್ಲದೆ ನೀಡುವ ಸಾಲವನ್ನು ಸದುಪಯೋಗ ಪಡಿಸಿಕೊಳ್ಳಿ, ಸರಿಯಾಗಿ ಮರುಪಾವತಿ ಮಾಡಿದರೆ ದುಪ್ಪಟ್ಟು ಸಾಲಕ್ಕೆ ನೀವು ಅರ್ಹರಾಗುವಿರಿ ಎಂದು ಸಿಎಂ ಸಲಹೆ ನೀಡಿದರು.

      ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವವರ ಮೈ ಮೇಲೆ ಒಂದೊಂದು ಕೆ.ಜಿ. ಚಿನ್ನ ಇರುತ್ತದೆ. ಕೈಗೆ ಕಡಗ, ಕತ್ತಿಗೆ ಸರ ಹಾಕಿಕೊಂಡು ಓಡಾಡಿಕೊಂಡು ಇರುತ್ತಾರೆ. ಅವರು ಸಾಲ ವಸೂಲಿ ಮಾಡಲು ಗೂಂಡಾಗಳನ್ನು ಇಟ್ಟುಕೊಂಡಿದ್ದಾರೆ. ಈ ಮಾತನ್ನೂ ಮತ್ತೊಮ್ಮೆ ತಪ್ಪಾಗಿ ಅರ್ಥೈಸುತ್ತಾರೋ ಏನೋ? ನಾನು ಏನೇ ಮಾತನಾಡಿದರೂ ತಪ್ಪಾಗಿ ಕಾಣುತ್ತಿದೆ. ಏನು ಮಾತನಾಡಬೇಕೆಂಬುದೇ ನನಗೆ ಗೊತ್ತಾಗುತ್ತಿಲ್ಲ ಎಂದು ಹೇಳಿದರು.

(Visited 13 times, 1 visits today)