ತುಮಮಕೂರು :

      ಅಂಗನವಾಡಿಗಳಲ್ಲಿ ಪೌಷ್ಠಿಕ ಆಹಾರ ದೊರೆಯುತ್ತಿದೆ. ಹೀಗಾಗಿ ಶಾಲಾಪೂರ್ವ ಶಿಕ್ಷಣವಾದ ಎಲ್‍ಕೆಜಿ, ಯುಕೆಜಿಯನ್ನು ಅಂಗನವಾಡಿಗಳಲ್ಲೇ ಆರಂಭಿಸಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ಒತ್ತಾಯಿಸಿದರು.

       ತುಮಕೂರಿನ ಗಾಂಧೀನಗರದಲ್ಲಿರುವ ಜನಚಳವಳಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಅಂಗವಾಡಿಗಳಲ್ಲಿ ಶಾಲಾ ಪೂರ್ವ ಶಿಕ್ಷಣ ಆರಂಭಿಸುವ ಸಾಧಕ-ಬಾಧಕಗಳ ಕುರಿತ ಸಮಾಲೋಚನ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

      ಅಂಗನವಾಡಿಗಳಲ್ಲಿ ಮಕ್ಕಳ ಲಾಲನೆ-ಪಾಲನೆಯ ಜೊತೆಯಲ್ಲಿ ಶಾಲಾಪೂರ್ವ ಶಿಕ್ಷಣ ನೀಡಿದರೆ ಕಲಿಕೆ ಉತ್ತಮವಾಗಿರುತ್ತದೆ. ಈಗಾಗಲೇ ಅಂಗನವಾಡಿಗಳಲ್ಲಿ ಬೋಧಿಸಲು ಪಠ್ಯವೂ ಇದೆ. ಅಂಗನವಾಡಿಗಳಲ್ಲಿ ಮಕ್ಕಳಿಗೆ ವಿಟಮಿನ್, ಪ್ರೋಟೀನ್ ಅಂಶವುಳ್ಳ ಆಹಾರ ನೀಡಲಾಗುತ್ತಿದೆ. ಆರೋಗ್ಯದ ಕಡೆಯು ಗಮನ ನೀಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಕ್ಕಳ ಹಾರೈಕೆಯು ಮುಖ್ಯವಾಗಿದೆ ಎಂದು ಹೇಳಿದರು.

      ಪ್ರತಿಯೊಬ್ಬ ಮಗುವಿಗೂ ಸಾಮಾಜಿಕರಣದ ಶಿಕ್ಷಣ ಸಿಗಬೇಕು. ಸಮಾಜದಲ್ಲಿ ಮತ್ತು ಪ್ರಕೃತಿಯ ನಡುವೆ ಬೆರೆತು ಸಂವಹನ ನಡೆಸುತ್ತಾ ಮಗುವಿನ ಬೆಳವಣಿಗೆ ಆಗುತ್ತದೆ. ಆನಂತರ ಬೇಕಾದರೆ ಔಪಚಾರಿಕ ಶಿಕ್ಷಣ ನೀಡಿದರೆ ಹೆಚ್ಚು ಅನುಕೂಲವಾಗುತ್ತದೆ ಎಂದು ಪ್ರತಿಪಾದಿಸಿದರು.
ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯಲ್ಲಿ ಸಾವಿರಾರು ಶಿಕ್ಷಕರ ಕೊರತೆ ಇದೆ. ಶಿಕ್ಷಕರಿಲ್ಲದೆ ಶಿಕ್ಷಣಕ್ಕೆ ಹಿನ್ಡೆಯಾಗುತ್ತಿದೆ. ಇಂತಹ ಹೊತ್ತಿನಲ್ಲಿ ಎಲ್.ಕೆ.ಜಿ ಮತ್ತು ಯುಕೆಜಿಗಳನ್ನು ಅಂಗನವಾಡಿಗಳಲ್ಲೇ ಆರಂಭಿಸುವುದು ಸೂಕ್ತ ಎಂದು ತಿಳಿಸಿದರು.

       ಸಾಮಾಜಿಕ ಹೋರಾಟಗಾರ ಶ್ರೀಪಾದ್ ಭಟ್ ಮಾತನಾಡಿ, ಸಂದಿಗ್ದ ಪರಿಸ್ಥಿತಿಯಲ್ಲಿ ಅಂಗನವಾಡಿಗಳು ಉಳಿಯಬೇಕು, ಸರ್ಕಾರಿ ಶಿಕ್ಷಣ ವ್ಯವಸ್ಥೆಯೂ ಉಳಿಯಬೇಕು. ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಅಂಗನವಾಡಿಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಯೋಚಿಸಬೇಕು. ಈ ಸಂಬಂಧ ಚರ್ಚೆ ನಡೆಸಿ ಮುಂದೆ ಸಾಗಬೇಕು ಎಂದು ಹೇಳಿದರು. ಪೂರ್ವ ಶಾಲಾ ಶಿಕ್ಷಣವನ್ನು ಜೊತೆಜೊತೆಯಲ್ಲೇ ತೆಗೆದುಕೊಂಡು ಹೋಗಬೇಕು ಎಂದು ಸರ್ಕಾರ ಯೋಚಿಸುವ ಹೊತ್ತಿನಲ್ಲಿ ಶಾಲಾಪೂರ್ವ ಶಿಕ್ಷಣ ಪ್ರತ್ಯೇಕಿಸುವುದು ಹೇಗೆ ಎಂಬ ಬಗ್ಗೆ ಚಿಂತನೆ ನಡೆಯಬೇಕು ಎಂದು ಸಲಹೆ ನೀಡಿದರು.

      ಜನಪರ ಚಿಂತಕ ಕೆ.ದೊರೈರಾಜ್ ಮಾತನಾಡಿ, ಎಲ್ಲರಿಗೂ ಶಿಕ್ಷಣ ಲಭ್ಯವಾಗಬೇಕು ಎಂಬ ಹಿಂದಿನ ಸಂಘರ್ಷದಿಂದ ಪರಿಸ್ಥಿತಿ ಬದಲಾಗಿದೆ. ಶಿಕ್ಷಣ ಸೇವೆಯಾಗದೆ ಉದ್ಯಮವಾಗಿ ವಾಣಿಜ್ಯೀಕರಣಗೊಂಡಿದೆ. ಶಿಕ್ಷಣದ ಖಾಸಗೀಕರಣದಿಂದಾಗಿ ಆಕರ್ಷಕ ರೂಪಗಳಲ್ಲಿ ಪೋಷಕರನ್ನು ಸೆಳೆಯುತ್ತಿರುವ ಖಾಸಗೀಕರಣ ಪ್ರಭುತ್ವಗಳ ಮೇಲೆ ಒತ್ತಡ ಹೇರುತ್ತಿದೆ. ಹಾಗಾಗಿ ದುರ್ಬಲ ವರ್ಗಗಳಿಗೆ ಅಗತ್ಯವಾದ ಶೈಕ್ಷಣಿಕ ವ್ಯವಸ್ಥೆಯನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆಪಾದಿಸಿದರು.

      ಸಾಮಾಜಿಕ ಕಾರ್ಯಕರ್ತರ ಕಾಡಶೆಟ್ಟಿಹಳ್ಳಿ ಸತೀಶ್ ಮಾತನಾಡಿ, ಎಲ್.ಕೆ.ಜಿ ಮತ್ತು ಯುಕೆಜಿ ಯನ್ನು ಅಂಗನವಾಡಿಗಳಲ್ಲೇ ಆರಂಭಿಸಬೇಕು. ಆಧುನಿಕ ಒತ್ತಡದ ಸಂದರ್ಭದಲ್ಲಿ ಔಪಚಾರಿಕ ಶಿಕ್ಷಣ ಪಡೆಯುತ್ತಿರುವ ಎಲ್.ಕೆ.ಜಿ ಮತ್ತು ಯುಕೆಜಿ ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ. ಹಾಗಾಗಿ ಅಂಗನವಾಡಿಗಳಲ್ಲಿ ಉತ್ತಮ ಪೌಷ್ಠಿಕ ಆಹಾರ ದೊರೆಯುತ್ತಿದ್ದು ಮಕ್ಕಳ ಕಲಿಕೆಗೆ ಸಹಕಾರಿಯಾಗಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ ಅಂಗನವಾಡಿ ವ್ಯವಸ್ಥೆಯನ್ನು ದುರ್ಬಲಗೊಳಿಸುವುದು ಸಹಿಸಲಾಗದು ಎಂದು ಹೇಳಿದರು.

      ಸಭೆಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಜಿ.ಕಮಲ, ವೈದ್ಯೆ ಡಾ.ಅರುಂಧತಿ, ಪತ್ರಕರ್ತರ ಸಂಘ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿದರು. ಅನಸೂಯ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಬಾನು ಪ್ರಾಸ್ತಾವಿಕ ಮಾತನಾಡಿದರು. ಪಾರ್ವತಮ್ಮ ವಂದಿಸಿದರು.

(Visited 12 times, 1 visits today)