ತುಮಕೂರು:

      ನಮ್ಮ ನಾಡಿನ ಭವ್ಯ ಪರಂಪರೆ, ಸಂಸ್ಕೃತಿಯನ್ನು ಉಳಿಸುವ ಜತೆಗೆ ಕನ್ನಡ ಶಾಲೆಗಳನ್ನು ಸಂರಕ್ಷಿಸಬೇಕು ಎಂದು ಸಾಹಿತಿ ಕವಿತಾಕೃಷ್ಣ ಸರ್ಕಾಕವನ್ನು ಒತ್ತಾಯಿಸಿದರು.

      ಇಲ್ಲಿನ ಮಾರುತಿ ನಗರದಲ್ಲಿ ನಾಗರಿಕರ ಹಿತರಕ್ಷಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ವಿವಿಧ ರಾಜ್ಯಗಳ ಭಾಷೆಗಳು ರಾಷ್ಟ್ರಭಾಷೆಯಾಗಿದ್ದು, ನಮ್ಮ ಕನ್ನಡವೂ ಸಹ ರಾಷ್ಟ್ರಭಾಷೆಯೇ ಆಗಿದೆ ಎಂದರು.

      ಕರ್ನಾಟಕಕ್ಕೆ ನಮ್ಮ ತುಮಕೂರು ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಕರ್ನಾಟಕದ ಏಕೀಕರಣಕ್ಕೆ ಶ್ರಮಿಸಿದವರಲ್ಲಿ ನಮ್ಮ ಜಿಲ್ಲೆಯ ಶಿವಮೂರ್ತಿ ಶಾಸ್ತ್ರಿಗಳು ಪ್ರಮುಖರಾಗಿದ್ದಾರೆ. ಇನ್ನು ಈ ದೇಶಕ್ಕೆ ರಾಷ್ಟ್ರಪತಿ ಎಂಬ ಶಬ್ದವನ್ನು ಪರಿಚಯಿಸಿದವರು ನಮ್ಮ ಜಿಲ್ಲೆಯ ಹೆಮ್ಮೆಯ ಸಾಹಿತಿ ದಿ. ತೀ.ನಂ.ಶ್ರೀ.ರವರು ಎಂದು ಅವರು ಹೇಳಿದರು.
ಇಂದು ಕನ್ನಡತನ ಮಾಯವಾಗುತ್ತಿದೆ. ಅಪ್ಪ, ಅಮ್ಮ ಎಂದು ಮುದ್ದಿನಿಂದ ಕನ್ನಡದಲ್ಲಿ ಕರೆಯುವುದು ಕ್ಷೀಣವಾಗುತ್ತಿದ್ದು, ಮಮ್ಮಿ-ಡ್ಯಾಡಿ ಸಂಸ್ಕೃತಿ ಆವರಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

      ಸಮಾರಂಭ ಉದ್ಘಾಟಿಸಿದ ಮಾಜಿ ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕನ್ನಡಿಗರಲ್ಲಿ ಸ್ವಾಭಿಮಾನ ಕ್ಷೀಣಿಸುತ್ತಿದೆ. ಕನ್ನಡದಲ್ಲಿ ಮಾತನಾಡುವುದನ್ನು ಕೀಳರಿಮೆ ಎಂದು ಭಾವಿಸುತ್ತಾರೆ. ಕರ್ನಾಟಕದಲ್ಲಿರುವ ಅನ್ಯಭಾಷೀಯರು ಅವರ ಮಾತೃಭಾಷೆಯಲ್ಲೇ ಮಾತನಾಡಿದರೆ ನಮ್ಮ ಕನ್ನಡಿಗರು ಕನ್ನಡ ಭಾಷೆ ಬದಲು ಅನ್ಯ ಭಾಷೆಯನ್ನೇ ಬಳಸಿ ಬಿಡುತ್ತಾರೆ. ಇದು ತಪ್ಪಬೇಕು. ಕನ್ನಡದಲ್ಲೇ ಮಾತನಾಡುವ ಸ್ವಾಭಿಮಾನವನ್ನು ಎಲ್ಲ ಕನ್ನಡಿಗರೂ ಬೆಳೆಸಿಕೊಳ್ಳಬೇಕು ಎಂದರು.

      ತುಮಕೂರು ಕ್ಷೇತ್ರದಿಂದ ತಾವು ಪ್ರಥಮ ಬಾರಿಗೆ ಸಂಸದರಾಗಿ ಚುನಾಯಿತರಾದ ಸಂದರ್ಭದಲ್ಲಿ ಲೋಕಸಭೆಯಲ್ಲಿ ಕನ್ನಡದಲ್ಲೇ ಭಾಷಣ ಮಾಡಿದ್ದುದನ್ನು ಮೆಲುಕು ಹಾಕಿದ ಅವರು, ಕನ್ನಡದಲ್ಲಿ ಮಾತನಾಡಿದಷ್ಟೇ ಅಲ್ಲದೆ ಬಸವಣ್ಣನವರ ತತ್ವ ಹಾಗೂ ವಿಚಾರಗಳನ್ನೂ ಕನ್ನಡದಲ್ಲೇ ಬಣ್ಣಿಸಿದ್ದನ್ನು ಹಾಗೂ ಬಸವಣ್ಣನವರ ತತ್ವ ವಿಚಾರಧಾರೆಯನ್ನು ಕೇಳಿ ಆಗಿನ ಲೋಕಸಭಾ ಸ್ಪೀಕರ್‌ರವರು ಪ್ರಭಾವಿತರಾಗಿ ಬಸವಣ್ಣನವರ ಬಗ್ಗೆ ಕೇಳಿ ತಿಳಿದುಕೊಂಡಿದನ್ನು ನೆನಪಿಸಿಕೊಂಡರು.

      ಇದೇ ಸಂದರ್ಭದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪತ್ರಕರ್ತ ಆರ್.ಎಸ್. ಅಯ್ಯರ್, ಎನ್.ಎಸ್.ಐ. ಫೌಂಡೇಷನ್‌ನ ಎನ್.ಎನ್. ಶ್ರೀಧರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ದಯಾನಂದ್ ಅವರನ್ನು ಸನ್ಮಾನಿಸಲಾಯಿತು.
‌ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಜಗಜ್ಯೋತಿ ಸಿದ್ದರಾಮಯ್ಯ ವಹಿಸಿದ್ದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ, ಪಾಲಿಕೆ ಸದಸ್ಯ ವಿಷ್ಣುವರ್ಧನ್, ಕೆನರಾ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ನಂಜುಂಡೇಶ್ವರ್, ಉದ್ಯಮಿ ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.

 

(Visited 34 times, 1 visits today)