ಹುಳಿಯಾರು:

ಹುಳಿಯಾರು ಹೋಬಳಿ ವ್ಯಾಪ್ತಿಯ ದೊಡ್ಡಬಿದರೆ ಗ್ರಾಮ ಪಂಚಾಯಿತಿಯ ಪೋಚಕಟ್ಟೆ ಭಾಗದ ರೈತರ ಹೆಸರು ಬೆಳೆ ತಾಕಿನಲ್ಲಿ ಕಾಯಿ ತಿನ್ನುವ ಮಿಡತೆ ಕಾಟ ಕಂಡು ಬಂದಿದ್ದು ಕೃಷಿ ಅಧಿಕಾರಿಗಳು ಬೇಟಿ ನೀಡಿ ಬೆಳೆಗಾರರಿಗೆ ಹತೋಟಿಯ ಮಾರ್ಗದರ್ಶನ ನೀಡಿದರು.
ಸಾಮಾನ್ಯವಾಗಿ ಹೆಸರು ಹೂ ಬಿಡುವ ಹಂತದಲ್ಲಿಯೇ ಕಂಬಳಿ ಹುಳುಗಳ ಕಾಟ ಕಾಣಿಸಿಕೊಳ್ಳುತ್ತಿತ್ತು. ಅಲ್ಲದೆ ಹಳದಿ ಎಲೆ ರೋಗವೂ ಕಾಣಿಸಿಕೊಂಡು ರೈತರನ್ನು ಕಂಗೆಡಿಸುತ್ತಿತ್ತು. ಆದರೆ ಈ ಬಾರಿ ಹೆಸರು ಕಾಯಿ ತಿನ್ನುವ ಮಿಡತೆ ಕಂಡು ಬಂದಿದ್ದು ರೈತರಲ್ಲಿ ಆತಂಕ ಸೃಷ್ಠಿಸಿತ್ತು.
ವಿಷಯ ತಿಳಿದ ಹುಳಿಯಾರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಲ್ಲಿಕಾರ್ಜುನ್ ಅವರು ಹೆಸರು ಬೆಳೆ ತಾಕಿಗೆ ಭೇಟಿ ನೀಡಿ ತಾಲೂಕಿನಲ್ಲಿ ಎಲ್ಲೂ ಈ ರೀತಿ ಮಿಡತೆ ಕಾಟ ಕಂಡು ಬಂದಿಲ್ಲ. ಹಾಗಾಗಿ ರೈತರು ಭಯಪಡುವ ಅಗತ್ಯವಿಲ್ಲ. ಇಲ್ಲಿರುವ ಬೆರಳೆಣಿಕೆಯಷ್ಟು ಮಿಡತೆಗಳಿದ್ದು ಇವುಗಳಿಂದ ಯಾವುದೇ ಹಾನಿ ಯಾಗಿಲ್ಲ. ಎಲೆ ಹಾಗೂ ಕಾಯಿ ಚೆನ್ನಾಗಿದ್ದು ರೈತರು ಭಯ ಪಡುವ ಅಗತ್ಯವಿಲ್ಲ ಎಂದರು.
ಕಂಬಳಿಹುಳು ಹಲವಾರು ಹಂತಗಳಲ್ಲಿ ಕಾಣಿಸಿಕೊಳ್ಳುತ್ತದೆ. ಲಾರ್ವಾ ಹಂತದಿಂದ ಹಿಡಿದು ರೆಕ್ಕೆ ಹೊಂದಿ ಮಿಡತೆಯವರೆಗೆ ಬೆಳವಣಿಗೆ ಆಗುತ್ತದೆ. ಕಂಬಳಿಹುಳು ನಂತರ ಮಿಡತೆಯಾಗಿ ಮಾರ್ಪಟ್ಟರೆ ಬೆಳೆ ತಿನ್ನುವ ಹಂತ ತಲುಪುತ್ತದೆ. ಕಡಿಮೆ ಸಂಖ್ಯೆಯಲ್ಲಿ ಮಿಡತೆಗಳ ಹಾವಳಿ ಇದ್ದೆ ಇರುತ್ತದೆ. ಆದರೆ ಹೆಚ್ಚಾದರೆ ಫಿನಾಲ್‍ಫಾಸ್ ಒಂದು ಲೀ.ನೀರಿಗೆ ಒಂದು ಮೀ.ಲೀ ಸೇರಿಸಿ ಸಿಂಪಡಣೆ ಮಾಡಿ ಹತೋಟಿಗೆ ತರಬಹುದೆಂದು ಮಾಹಿತಿ ನೀಡಿದರು.
ಈ ರೀತಿಯ ಸಮಸ್ಯೆ ಆಗಿರುವುದು ರೈತರಲ್ಲಿ ಆತಂಕವನ್ನು ಸೃಷ್ಠಿಸಿದ್ದು, ಮಿಡತೆಗಳ ಹಾವಳಿಯನ್ನು ತಪ್ಪಿಸಲು ಸಾಕಷ್ಟು ಶ್ರಮ ಪಡುವಂತಾಗಿದೆ.

(Visited 7 times, 1 visits today)