ತಿಪಟೂರು :

      ಕಲ್ಪತರು ನಾಡಿನ ರೈತರು ಮಳೆ ಇಲ್ಲದೆ ದಿನವೂ ಬೆಂಕಿಯಂತಹ ಉರಿಬಿಸಿಲು ಕಾರುತ್ತಿರುವ ಆಕಾಶದೆಡೆಗೆ ಹತಾಶಾಭಾವದಿಂದ ನೋಡುತ್ತಾ ಮಳೆರಾಯ ಕೃಪೆ ತೋರುವನೋ ಇಲ್ಲವೋ ಎಂಬ ಚಿಂತೆಯ ಚಿತೆಗೆ ಬಿದ್ದು ಕಾಲ ಕಳೆಯುವಂತಾಗಿದೆ.

      ಇತ್ತೀಚಿನ ಹಲವಾರು ವರ್ಷಗಳಲ್ಲಿ ತಾಲ್ಲೂಕಿಗೆ ಸುರಿದಿರುವ ಮಳೆ ಪ್ರಮಾಣ ಲೆಕ್ಕ ಹಾಕಿ ನೋಡಿದರೆ ವರ್ಷ ವರ್ಷವೂ ಇಳಿಕೆಯಾಗುವ ಮೂಲಕ ನಿರಂತರವಾಗಿ ಭೀಕರ ಬರಗಾಲ ಎದುರಾಗುತ್ತಿರುವುದು ಆತಂಕಕ್ಕೆ ಎಡೆಮಾಡಿದೆ. ತಾಲ್ಲೂಕಿನಾದ್ಯಂತ ಭಯಾನಕ ಬರಗಾಲ ಸೃಷ್ಠಿಯಾಗಿದೆ. ಈ ವರ್ಷ ಮೇ, ಜೂನ್ ತಿಂಗಳಲ್ಲಿ ಬಂದ ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ರೈತರ ಪಾಲಿಗೆ ನಿರಾಶಾದಾಯಕವಾಗಿತ್ತು. ನಂತರ ಈ ಹಿಂಗಾರಿನವರೆಗೂ ಮಳೆರಾಯ ಸಂಪೂರ್ಣ ಮುನಿಸಿಕೊಂಡಿದ್ದು, ಮಳೆಯನ್ನೇ ನೆಚ್ಚಿ ಬದುಕುತ್ತಿರುವ ತಾಲ್ಲೂಕಿನ ರೈತರು ಕಂಗಾಲಾಗುವಂತೆ ಮಾಡಿದೆ. ಅಲ್ಪಸ್ವಲ್ಪ ಬಿದ್ದಿದ್ದ ಮಳೆಗೆ ರೈತರು ಸಾಲಶೂಲ ಮಾಡಿಕೊಂಡು ರಾಗಿ ಮತ್ತಿತರೆ ಬೆಳೆಗಳನ್ನು ಬಿತ್ತಿದ್ದರು. ಆದರೆ ಮಳೆರಾಯ ಸಂಪೂರ್ಣ ಕೈಕೊಟ್ಟ ಪರಿಣಾಮ ಪೂರ್ವಮುಂಗಾರು, ಮುಂಗಾರು ಜೊತೆಗೆ ಹಿಂಗಾರು ಬೆಳೆಗಳು ಇಲ್ಲದಂತಾಗಿ ಹೇಳಲಾರದಂತಹ ಸಂಕಷ್ಠಕ್ಕೆ ರೈತರು ಸಿಲುಕಿದ್ದಾರೆ.

ಕೇವಲ ಅಸೆ :

      ಕಳೆದ ವಾರದಿಂದ ತಾಲ್ಲೂಕಿನಾದ್ಯಂತ ಸೆಖೆ ತೀವ್ರವಾಗಿದ್ದು, ಗುಡುಗು ಸಹಿತ ಮಳೆ ಮೋಡ ಕಾಣಿಸಿಕೊಂಡು ಇನ್ನೇನು ಭಾರಿ ಮಳೆ ಬೀಳುವ ಲಕ್ಷಣಗಳನ್ನು ತೋರುತ್ತಿರುವುದು ಬಿಟ್ಟರೆ ಭೂಮಿಗಂತೂ ಮಳೆರಾಯ ಕೃಪೆ ತೋರುತ್ತಿಲ್ಲ. ಇಲ್ಲಿನ ರೈತರಿಗೆ ಬರೀ ಗುಡುಗು-ಮಿಂಚಿನ ಆಸೆಯನ್ನೇ ಮಳೆರಾಯ ತೋರುತ್ತಿರುವುದು ತಾಲ್ಲೂಕಿನ ಜನತೆಗೆ ತೀವ್ರ ನಿರಾಸೆ ತಂದೊಡ್ಡಿದೆ.

ಬಿಸಿಲ ಬೇಗೆಗೆ ಒಣಗಿದ ರಾಗಿ :

      ಬಂದ ಅಷ್ಟಿಷ್ಟು ಮಳೆಗೆ ರೈತರು ರಾಗಿ ಬಿತ್ತನೆ ಮಾಡಿದ್ದರು. ಆದರೆ ಬಿತ್ತನೆಯ ನಂತರ ಈವರೆಗೂ ಮಳೆರಾಯ ಕೃಪೆ ತೋರುತ್ತಿಲ್ಲವಾದ್ದರಿಂದ ರಾಗಿ ಬೆಳೆ ಸಂಪೂರ್ಣ ಒಣಗಲಾರಂಬಿಸಿದೆ. ಇದರಿಂದ ಕಂಗಾಲಾಗಿರುವ ರೈತರು ಮುಂದೇನು? ಎಂಬ ಚಿಂತೆಗೆ ಬಿದ್ದಿದ್ದಾರೆ. ಅತ್ಯಂತ ಕಡಿಮೆ ಮಳೆಗೂ ಬೆಳೆಯುವ ರಾಗಿಪೈರು ಒಂದನಿಯೂ ಮಳೆ ಇಲ್ಲದೆ ಒಣಗಲಾರಂಬಿಸಿದೆ. ಕಾಳು ಕಟ್ಟುವ ಈ ಹಂತದಲ್ಲಿ ರಾಗಿ ಸಂಪೂರ್ಣ ಒಣಗಿ ಹೋಗುತ್ತಿರುವುದರಿಂದ ರೈತರು ತಮ್ಮ ದನಕರುಗಳನ್ನು ಕಟ್ಟಿ ಮೇಯಿಸುತ್ತಿದ್ದಾರೆ. ಕೃಷಿ ಯಾವತ್ತೂ ಲಾಭದಾಯಕವಾಗಲಾರದು ಎಂಬುದನ್ನ ರಾಗಿ ಬೆಳೆ ಮತ್ತೆ ಮತ್ತೆ ಸಾಬೀತುಪಡಿಸುತ್ತಿರುವುದು ನೋಡಿದರೆ ಈಗಾಗಲೆ ಅಳಿವಿನಂಚಿನಲ್ಲಿರುವ ಕೃಷಿಕಾಯಕಕ್ಕೆ ಮತ್ತಷ್ಟು ಹೊಡೆತ ಬೀಳಬಹುದೇನೊ. ಸಾವಿರಾರು ರೂಪಾಯಿ ಸಾಲ ತಂದು ದುಬಾರಿ ಕೃಷಿ ವೆಚ್ಚದೊಂದಿಗೆ ಉಳುಮೆ ಮಾಡಿ ಬೀಜ-ಗೊಬ್ಬರ ಖರೀದಿಸಿ ಹಗಲಿರುಳು ಜೋಪಾನ ಮಾಡಿದ್ದ ತಾಲ್ಲೂಕಿನ ಜನ-ಜಾನುವಾರುಗಳ ಪ್ರಮುಖ ರಾಗಿ ಬೆಳೆ ಈ ವರ್ಷವೂ ಕೈಕೊಟ್ಟಿರುವುದು ರೈತನ ಭವಿಷ್ಯಕ್ಕೆ ಕೃಷಿ ಯಾವತ್ತೂ ಲಾಭದಾಯಕವಲ್ಲ ಅನ್ನುವುದನ್ನು ಸಾಬೀತುಪಡಿಸಿದೆ.

      ಈ ವರ್ಷವೂ ಮಳೆರಾಯ ಕೈಕೊಟ್ಟಿದ್ದು, ರಾಗಿ ಕಾಳುಕಟ್ಟುವ ಹಂತದಲ್ಲಿಯೇ ಮಳೆ ಇಲ್ಲದ ಪರಿಣಾಮ ಇತ್ತ ರಾಗಿಯೂ ಇಲ್ಲ ಅತ್ತ ರಾಗಿ ದನಕರುಗಳಿಗೆ ಮೇವೂ ಇಲ್ಲ ಎಂಬಂತಾಗಿದೆ. ರೈತರಿಗೆ ಮೇವು ಮತ್ತು ರಾಗಿ ಎರಡೂ ಮುಖ್ಯವಾಗಿದ್ದು, ಮಳೆ ಬಾರದೆ ಬರಗಾಲದ ಛಾಯೆ ಆವರಿಸಿದ್ದು, ರೈತರು ಜೀವನ ನಡೆಸುವುದು ದುಸ್ತರವಾಗಿದೆ. ಸರ್ಕಾರ ಕೂಡಲೆ ನೆರವಿಗೆ ಧಾವಿಸಬೇಕಿದೆ.

– ವಾಗೀಶ್, ರೈತ

      ಸಾವಿರಾರು ಎಕರೆಗೆ ರೈತರು ರಾಗಿ ಮತ್ತಿತರೆ ಬೆಳೆಗಳನ್ನು ಬಿತ್ತಿದ್ದು ಕಾಳು ಅಗತ್ಯಕ್ಕೆ ತಕ್ಕಂತೆ ಬೆಳೆ ದು ಕಾಳು ಕಟ್ಟುವ ಈ ಸಮಯದಲ್ಲಿ ಮಳೆ ಕೈಕೊಟ್ಟಿರುವುದು ರಾಗಿ ಇಳುವರಿ ಮೇಲೆ ತೀವ್ರ ಹೊಡೆತ ತಂದಿದೆ. ಈಗ ಮಳೆಯಾದರೂ ದನಕರುಗಳಿಗೆ ಮೇವಾದರೂ ಆಗಬಹುದು.

– ಜಯಪ್ಪ, ಸಹಾಯಕ ಕೃಷಿ ನಿರ್ದೇಶಕರು, ತಿಪಟೂರು.

(Visited 64 times, 1 visits today)