ತುಮಕೂರು :

       ಪ್ರತಿಭಾನ್ವಿತ ವಿದ್ಯಾರ್ಥಿನಿಯೊಬ್ಬಳ ಸಾವಿಗೆ ಕಾರಣವಾದ ಸಿಡಿಮದ್ದು ಸಿಡಿಸಲು ತಿಪಟೂರಿನ ಸತ್ಯಗಣಪತಿ ಸೇವಾ ಟ್ರಸ್ಟ್‍ಗೆ ಅವಕಾಶ ನೀಡಬಾರದು ಎಂದು ದಂಡನಶಿವರ ಕ್ಷೇತ್ರದ ಜಿ.ಪಂ.ಸದಸ್ಯ ರಕ್ಷಿತಗೌಡ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

      ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಳೆದ 2018ರ ಡಿಸೆಂಬರ್ 3ರ ಮಧ್ಯರಾತ್ರಿ ತಿಪಟೂರಿನ ಸತ್ಯಗಣಪತಿ ಸೇವಾ ಟ್ರಸ್ಟ್‍ನವರು ಜನರ ಮನರಂಜನೆ ಹೆಸರಿನಲ್ಲಿ ಸಿಡಿಸಿದ ಪಟಾಕಿಗೆ ಎರಡನೇ ವರ್ಷದ ಸಿ.ಎ (ಚಾರ್ಟೆಡ್ ಅಕೌಂಟೆಂಟ್) ಓದುತ್ತಿದ್ದ ಸಿತಾರ ಎಂಬ ಯುವತಿ ಬಲಿಯಾಗಿದ್ದಾಳೆ.ನಿಯಮವನ್ನು ಗಾಳಿಗೆ ತೂರಿ,ಯಾವುದೇ ಮುಂಜಾಗ್ರತಾ ಕ್ರಮಗಳನ್ನು ವಹಿಸದೇ, ಟ್ರಸ್ಟ್‍ನವರು ಅತಿ ಹೆಚ್ಚು ಶಬ್ದ ಉಂಟು ಮಾಡುವ ಸಿಡಿತಲೆಗಳನ್ನು ಸಿಡಿಸಿದ್ದರ ಪರಿಣಾಮ, ಅತ್ಯಂತ ಪ್ರತಿಭಾವಂತೆ, ಜೀವನದಲ್ಲಿ ಹಲವಾರು ಕನಸುಗಳನ್ನು ಕಟ್ಟಿಕೊಂಡು, ಉನ್ನತ ಹುದ್ದೆಯ ಕನಸು ಕಾಣುತ್ತಿದ್ದ ಯುವತಿ ಬಲಿಯಾಗಬೇಕಾಯಿತು.ಒಂದು ಪ್ರಾಣ ಹಾನಿಯಾದರೂ ಸಂತ್ರಸ್ಥ ಕುಟುಂಬಕ್ಕೆ ಪರಿಹಾರವಿರಲಿ, ಕನಿಷ್ಠ ಸೌಜನ್ಯಕ್ಕಾದರೂ ಕುಟುಂಬಕ್ಕೆ ಸಾಂತ್ವನ ಹೇಳಲು ಟ್ರಸ್ಟ್‍ನ ಯಾವೊಬ್ಬ ಸದಸ್ಯರು ಮುಂದಾಗಲಿಲ್ಲ.ಮನರಂಜನೆಯ ಹೆಸರಿನಲ್ಲಿ ಜನರ ಪ್ರಾಣಕ್ಕೆ ಮುಳುವಾಗಲಿರುವ ಇಂತಹ ಸಿಡಿಮದ್ದು ಪ್ರದರ್ಶನ ಅಗತ್ಯವಿಲ್ಲ. ಅದ್ದರಿಂದ ಜಿಲ್ಲಾಡಳಿತ ಟ್ರಸ್ಟ್‍ನವರು ಪಟಾಕಿ ಸಿಡಿಸಲು ಅನುಮತಿ ನೀಡಬಾರದು ಎಂಬುದು ನಮ್ಮ ಒತ್ತಾಯ. ಈ ನಿಟ್ಟಿನಲ್ಲಿ ಡಿ.ಸಿ.,ಎಸ್ ಪಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

       ದೇವರ ಉತ್ಸವ ಮತ್ತು ಜನರ ಮನರಂಜನೆಗಾಗಿ ಇದನ್ನೆಲ್ಲಾ ಮಾಡಲಾಗುತ್ತಿದೆ ಎಂದು ಟ್ರಸ್ಟ್‍ನವರು ತಿಳಿಸುತ್ತಿದ್ದಾರೆ.ಅದರೆ ದೇವರ ಉತ್ಸವದ ಹೆಸರಿನಲ್ಲಿ ಜನರ ಎದೆ ನಡುಗಿಸುವ ರೀತಿ ಡಿಜೆ ಹಾಕಿಕೊಂಡು,ಕುಡಿದು,ಕುಣಿಯಿರಿ ಎಂದು ದೇವರು ಹೇಳುವುದಿಲ್ಲ.ಪಟಾಕಿ ಸಿಡಿಸುವ ಬದಲು ಅದೇ ಹಣದಲ್ಲಿ ಸಾಮೂಹಿಕ ವಿವಾಹ, ಬಡ ಜನರಿಗೆ ಸೂರು ಇನ್ನಿತರ ಸಾಮಾಜಿಕ ಕಳಕಳಿ ಕಾರ್ಯಗಳನ್ನು ಮಾಡಲಿ, ಅದನ್ನು ಬಿಟ್ಟು ಜನರ ಪ್ರಾಣಕ್ಕೆ ಎರವಾಗುವ,ಪರಿಸರ ಹಾಳು ಮಾಡುವ, ಭೂಮಿಯೇ ನಡುಗಿದಂತಹ ಅನುಭವ ನೀಡುವ ಪಟಾಕಿ ಸಿಡಿಸುವುದರಿಂದ ಸಮಾಜಕ್ಕೆ ಯಾವುದೇ ಉಪಯೋಗವಿಲ್ಲ. ಆದ್ದರಿಂದ ಜಿಲ್ಲಾಡಳಿತ ತಿಪಟೂರಿನ ಸತ್ಯ ಗಣಪತಿ ಸೇವಾ ಸಮಿತಿಗೆ ಡಿಜೆ ಮತ್ತು ಪಟಾಕಿ ಸಿಡಿಸಲು ಅವಕಾಶ ನೀಡಬಾರದು. ಒಂದು ವೇಳೆ ನೀಡಿದ್ದೇ ಆದಲ್ಲಿ, ಪಟಾಕಿ ಸಿಡಿಸುವ ಸ್ಥಳದಲ್ಲಿ ನಾವುಗಳ ನಿಂತು,ಸಿತಾರ ರೀತಿ ನೂರಾರು ಯುವಕರು ಬಲಿಯಾಗಲು ಸಿದ್ದರಿದ್ದೇವೆ. ಇದಕ್ಕೆ ಟ್ರಸ್ಟೇ ಹೊಣೆಗಾರರಾಗಿದ್ದಾರೆ ಎಂದು ಜಿ.ಪಂ.ಸದಸ್ಯ ರಕ್ಷಿತಗೌಡ ಎಚ್ಚರಿಸಿದರು.

        ಕಳೆದ ಬಾರಿಯ ಗಣೇಶ್ ಉತ್ಸವದಲ್ಲಿ ಪಟಾಕಿ ಸಿಡಿತದಿಂದ ಅಸು ನೀಗಿದ್ದ ಯುವತಿ ಸಿತಾರ ಅವರ ಸಹೋದರ ಮನು ಮಾತನಾಡಿ, ಘಟನೆ ನಡೆದ ಸಂದರ್ಭದಲ್ಲಿ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಮತ್ತು ಕೆಲ ಜನಪ್ರತಿನಿಗಳು ಸರಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಭರವಸೆ ಈಡೇರಿಲ್ಲ.ಟ್ರಸ್ಟ್‍ನ ಒಬ್ಬನೇ ಒಬ್ಬ ಸದಸ್ಯ ಮೃತದೇಹದ ಬಳಿ ಬಂದು ಸಾಂತ್ವನ ಹೇಳಿಲ್ಲ. ಹಾಗಾದರೆ ಮನುಷ್ಯನ ಜೀವಕ್ಕೆ ಬೆಲೆ ಇಲ್ಲವೇ ?, ಜನರ ಜೀವಕ್ಕೆ ಕುತ್ತು ಉಂಟು ಮಾಡುವ, ಸಂಪ್ರದಾಯದ ಹೆಸರಿನ ಇಂತಹ ಆಚರಣೆಗಳ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು.

        ಸುದ್ದಿಗೋಷ್ಠಿಯಲ್ಲಿ ಗ್ರಾಮದವರಾದ ನಯಾಜ್ ಪಾಷ ಉಪಸ್ಥಿತರಿದ್ದರು.

(Visited 33 times, 1 visits today)