ತುಮಕೂರು:

      ಪರಿಸರದ ಅಸಮತೋಲದಿಂದ ಉಂಟಾಗುತ್ತಿರುವ ಪ್ರಾಕೃತಿಕ ವಿಕೋಪಗಳಿಗೆ ನಾವೆಲ್ಲರೂ ಕಾರಣರಾಗಿದ್ದು, ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಅರಣ್ಯೀಕರಣ ಕಾರ್ಯಕ್ರಮ ವ್ಯಾಪಕವಾಗಿ ನಡೆಯಬೇಕೆಂದು ಕೆ.ಎಸ್.ಆರ್.ಟಿಸಿ. ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್ ತಿಳಿಸಿದ್ದಾರೆ.

      ನಗರದ ಸಿರಾಗೇಟ್‍ನಲ್ಲಿರುವ ಕೆಎಸ್‍ಆರ್‍ಟಿಸಿ ಘಟಕ ಎರಡರಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಅಂಗವಾಗಿ ಘಟಕದ ಆವರಣದಲ್ಲಿ ನೇರಳೆ, ಹೊಂಗೆ, ಬೇವು ಹಾಗೂ ಮಾವಿನ ಗಿಡಗಳನ್ನು ನಡೆವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಘಟಕದಲ್ಲಿ ಉತ್ಪತಿಯಾಗುವ ತ್ಯಾಜ್ಯ ವಸ್ತುಗಳನ್ನು ಪ್ರತ್ಯೇಕಿಸಿ, ಅವುಗಳು ಪರಿಸರಕ್ಕೆ ಹಾನಿಮಾಡದಂತೆ ಪ್ರತ್ಯೇಕಿಸಿ, ವಿಸರ್ಜಿಸುವ ಮೂಲಕವು ಪರಿಸರ ಮಾಲಿನ್ಯವನ್ನು ನಮ್ಮ ಸಿಬ್ಬಂದಿ ಸಮರ್ಥವಾಗಿ ತಡೆಯಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

      ಘಟಕದಲ್ಲಿ ಉತ್ಪತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯ, ವೇಸ್ಟ್ ಆಯಿಲ್ ಅನ್ನು ಮನಬಂದಂತೆ ಎಸೆಯದೇ ಒಂದೆಡೆ ಹಾಕಿ, ಸ್ವಚ್ಛತೆ ಜೊತೆಗೆ ಪರಿಸರ ಮಾಲಿನ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕೆಎಸ್‍ಆರ್‍ಟಿಸಿ ಸಿಬ್ಬಂದಿ ಹೆಚ್ಚಿನ ನಿಗಾವಹಿಸಬೇಕಾಗಿದೆ, ಮೊದಲು ತಮ್ಮ ಮನಸ್ಸಿನ ಕೊಳೆಯನ್ನು ತೊಳೆದುಕೊಂಡು, ಪರಿಸರ ಸಂರಕ್ಷಣೆಗೆ ಪೂರಕವಾಗಿ ಕಾರ್ಯನಿರ್ವಹಿಸುವ ಮೂಲಕ ಸಂಸ್ಥೆಯ ಅಭಿವೃದ್ಧಿಗೆ ತಾನಾಗಿಯೇ ಆಗಲಿದೆ ಎಂದು ಹೇಳಿದರು.

      ಘಟಕದ ಹಿರಿಯ ಅಧಿಕಾರಿ ಮಂಜುನಾಥ್ ಮಾತನಾಡಿ ಮನುಷ್ಯನ ದುರಾಸೆ ಫಲವಾಗಿ ಉಂಟಾಗಿರುವ ಪರಿಸರ ಮಾಲಿನ್ಯದಿಂದ ಭೂಮಿಯ ಮೇಲೆ ಎತೇಚ್ಛ ನೀರಿದ್ದರೂ ಬಾಟಲಿ ನೀರು ಕುಡಿಯುವಂತ ಸ್ಥಿತಿಗೆ ಬಂದಿದ್ದೇವೆ, ಮುಂದಿನ ದಿನಗಳಲ್ಲಿ ಗಾಳಿಯನ್ನು ಸಿಲಿಂಡರ್ ಮೂಲಕ ಬಳಸುವ ಕಾಲ ದೂರವಿಲ್ಲ, ಈಗಲೇ ಎಚ್ಚೇತ್ತುಕೊಂಡು ಅರಣ್ಯ ಬೆಳೆಸದಿದ್ದರೆ, ಮನುಷ್ಯನ ಜೊತೆಗೆ ಜೀವಸಂಕುಲಗಳು ನಾಶ ಹೊಂದಲಿವೆ ಎಂದು ಎಚ್ಚರಿಕೆ ನೀಡಿದರು.

      ಘಟಕದ ವ್ಯವಸ್ಥಾಪಕ ಸಂತೋಷ್.ಎಸ್.ಆರ್.ಮಾತನಾಡಿ 1974ರಲ್ಲಿ ಮಾತನಾಡಿ ವಿಶ್ವಸಂಸ್ಥೆಯೂ ಹದಗೆಡುತ್ತಿರುವ ಪರಿಸರ ರಕ್ಷಿಸುವ ಸಲುವಾಗಿ ಜೂ.5ರಂದು ವಿಶ್ವಪರಿಸರ ದಿನಾಚರಣೆಯನ್ನು ಆಚರಿಸಿಕೊಂಡು ಬಂದಿವೆ, ಪ್ರತಿ ವರ್ಷ ಹೊಸ ಘೋಷವಾಕ್ಯದೊಂದಿಗೆ ಅದನ್ನು ಪರಿಪಾಲಿಸಲು ಪ್ರೇರೇಪಿಸುತ್ತಿದೆ. ಈ ವರ್ಷ ಮಾಲಿನ್ಯ ಮುಕ್ತ ವಾಯು ಎಂಬ ಘೋಷವಾಕ್ಯವಿದ್ದು, ಇದರಲ್ಲಿ ಸಾರಿಗೆ ಸಂಸ್ಥೆಯ ಜವಾಬ್ದಾರಿ ಹೆಚ್ಚಿದೆ. ನಮ್ಮ ಬಸ್‍ಗಳು ಹೆಚ್ಚಿನ ಹೊಗೆ ಉಗುಳದಂತೆ ಸುಸ್ಥಿತಿಯಲ್ಲಿ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

      ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಹಾಗೂ ಸಾಹಿತಿ ವಿ.ಡಿ.ಹನುಮಂತರಾಯಪ್ಪ ಮಾತನಾಡಿ ಜಗತ್ತಿನಲ್ಲಿ ಮನುಷ್ಯ ತನ್ನ ಏಕಚಕ್ರಾಧಿಪತ್ಯ ಸ್ಥಾಪಿಸಲು ಹೊರಟಿದ್ದರ ಪರಿಣಾಮವಾಗಿ ಇಂದು ಪರಿಸರ ಅತ್ಯಂತ ಅಧೋಗತಿಗೆ ತಲುಪಿದೆ. ಕಾಡಿನಲ್ಲಿರಬೇಕಾದ ಜೀವ ಸಂಕುಲಗಳು ಆಹಾರ ನೀರು ಅರಸಿ ನಾಡಿಗೆ ಬರುವಂತಾಗಿದೆ. ಇದೇ ರೀತಿಯ ದೌರ್ಜನ್ಯ ಮುಂದುವರೆದಲ್ಲಿ ನಮ್ಮ ಮುಂದಿನ ಪೀಳಿಗೆಗೆ ಉಳಿಗಾಲವಿಲ್ಲದಂತಾಗುತ್ತದೆ, ಆದ್ದರಿಂದ ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ಧಮಾಲಿನ್ಯ, ಭೂ ಮಾಲಿನ್ಯ ತಡೆಗಟ್ಟಿ ಜನಸಂಖ್ಯಾ ಸ್ಫೋಟ ನಿಯಂತ್ರಣದಲ್ಲಿಟ್ಟರೆ ಮಾತ್ರ ಭವಿಷ್ಯದ ಪೀಳಿಗೆ ಒಳ್ಳೆಯ ಭವಿಷ್ಯ ಕಾಣಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

      ಕಾರ್ಯಕ್ರಮದಲ್ಲಿ ವಿಭಾಗದ ಅಧಿಕಾರಿಗಳಾದ ನಾಗರಾಜು, ಬಸವರಾಜು, ಮಹೇಶ್, ಲಕ್ಷ್ಮೀಪತಿ, ಹಂಸವೀಣಾ, ಕನ್ನಡ ಕ್ರಿಯಾ ಸಮಿತಿ ಉಪಾಧ್ಯಕ್ಷ ರಾಜಶೇಖರ್ ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.

(Visited 11 times, 1 visits today)