ತುಮಕೂರು:
ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿ ಪೆದ್ದನಹಳ್ಳಿಯಲ್ಲಿ ಕಳ್ಳತನದ ಶಂಕೆ ಮೇಲೆ ಇಬ್ಬರು ದಲಿತ ಯುವಕರ ಹತ್ಯೆ ಆಘಾತಕಾರಿಯಾಗಿದೆ. ಗ್ರಾಮಸ್ಥರ ತೋಟದಲ್ಲಿ ಪಂಪ್‍ಸೆಟ್ ಕದಿಯಲು ಬಂದಿದ್ದಾರೆ ಎಂದು ಶಂಕಿಸಿ ಮಂಚಲದೊರೆ ಗ್ರಾಮದ ಗಿರೀಶ್ ಮತ್ತು ಪಿ.ಎಂ.ಗಿರೀಶ್ ಎಂಬ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಇಂತಹ ಅಮಾನವೀಯ ಕೃತ್ಯ ಎಸಗಿರುವ ದುರುಳರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಡಾ. ರಫೀಕ್ ಅಹ್ಮದ್ ಒತ್ತಾಯಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮನುಷ್ಯತ್ವಕ್ಕಿಂತ ಜಾತಿ ಎಂಬ ವಿಕೃತಿ ಮೇಲುಗೈ ಸಾಧಿಸಿ ದೌರ್ಜನ್ಯಗಳ ರುದ್ರನರ್ತನವಾಡುತ್ತಿದೆ. ದಿನೇ ದಿನೇ ದಲಿತರ ಮೇಲೆ ದೌರ್ಜನ್ಯ ಮಾಡುವ ಪ್ರಕರಣಗಳು ಹೆಚ್ಚುತ್ತಿದೆ. ದಿನೇ ದಿನೇ ದಲಿತರ ಮೇಲಿನ ದೌರ್ಜನ್ಯ ಮಡುಗಟ್ಟುತ್ತಿದೆ. ದಲಿತರು ಸಮಾಜದಲ್ಲಿ ಎಲ್ಲರಂತೆ ಬದುಕಲು ಸಾಧ್ಯವಾಗದ ದುಸ್ಥಿತಿ ನಮ್ಮ ದೇಶಕ್ಕೆ ಬಂದೊದಗಿದೆ ಎಂದು ಮಾಜಿ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವವನ್ನು ಕಡೆಗಣಿಸುತ್ತಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದಲಿತರ ವಿರುದ್ದ ತಮ್ಮದೇ ಪರ್ಯಾಯ ಪ್ರಭುತ್ವ ರಚಿಸಿಕೊಳ್ಳುತ್ತಿರುವ ಬೆಳವಣಿಗೆ ಇಡೀ ದೇಶಕ್ಕೆ ಮಾರಕವಾಗಿ ಪರಿಣಮಿಸಲಿದೆ. ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ಅರಾಜಕತೆಯು ಸಂವಿಧಾನದ ನೀತಿ ನಿಯಮಗಳನ್ನು ಹೊಡೆದುರುಳಿಸುತ್ತಿದೆ ಎಂಬುದಕ್ಕೆ ಇಂತಹ ಪ್ರಕರಣಗಳೇ ಸಾಕ್ಷಿಯಾಗಿವೆ. ಇಂತಹ ಪ್ರಕರಣಗಳು ನಡೆಯದಂತೆ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿ ಕೈಕಟ್ಟಿ ಕುಳಿತಿದೆ. ಇಂತಹ ಪ್ರಕರಣಗಳನ್ನು ತಡೆಗಟ್ಟಿ ಆರೋಪಿಗಳ ಮೇಲೆ ಪಕ್ಷಾತೀತವಾಗಿ ತನಿಖೆ ನಡೆಸಿ ಇನ್ನಾದರೂ ಸರ್ಕಾರ ತನ್ನ ನೈತಿಕತೆ ಉಳಿಸಿಕೊಳ್ಳಲಿ ಹಾಗೂ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಲಿ ಎಂದು ಡಾ. ರಫೀಕ್ ಅಹ್ಮದ್ ಒತ್ತಾಯಿಸಿದ್ದಾರೆ.

(Visited 4 times, 1 visits today)