ತುಮಕೂರು:

     ದೇವರಾಜ ಅರಸು ಅಭಿವೃದ್ದಿ ನಿಗಮದ ಫಲಾನುಭವಿಗಳ ಆಯ್ಕೆ ಸಂಬಂಧ ಮತ್ತಷ್ಟು ಪಾರದರ್ಶಕತೆ ಕಾಯ್ದೆಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಕಚೇರಿಯನ್ನು ಒಳಗೊಂಡಂತೆ ಸಿಸಿಟಿವಿ ಅಳವಡಿಕೆ ಹಾಗೂ ನಿಗಾವಣೆ ಸಮಿತಿಯನ್ನು ನೇಮಿಸುವ ಚಿಂತನೆ ಇದೆ ಎಂದು ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಅಧ್ಯಕ್ಷ ರಘು ಕೌಟಿಲ್ಯ ತಿಳಿಸಿದ್ದಾರೆ.

     ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಹಿಂದುಳಿದ ವರ್ಗಗಳ ಅಭಿವೃದ್ದಿಗಾಗಿ ಹೋರಾಟ ನಡೆಸಿದ ಪ್ರಮುಖರಲ್ಲಿ ಅರಸು ಒಬ್ಬರು,ಅವರ ಹೆಸರಿನಲ್ಲಿರುವ ನಿಗಮವನ್ನು ಮತ್ತಷ್ಟು ಜನಪರಗೊಳಿಸುವ, ವಿಸ್ತರಿಸುವ,ಶಕ್ತಿ ತುಂಬುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ ಎಂದರು.
ಕೋರೋನಾ ಮಹಾಮಾರಿಯಿಂದಾಗಿ ಕಳೆದ ಸಾಲಿನಲ್ಲಿ ಅಂದರೆ 2019-20ಕ್ಕೆ ಹೊಲಿಕೆ ಮಾಡಿದರೆ 2020-21ರಲ್ಲಿ ನಿಗಮಕ್ಕೆ ನೀಡಿದ್ದ 80 ಕೋಟಿ ರೂ ಅನುದಾನದಲ್ಲಿ 206 ಜಾತಿಗಳಿಗೆ ಸೇರಿದ ಅರ್ಹ ಫಲಾನುಭವಿಗಳಿಗೆ ಅನುಕೂಲ ಮಾಡ ಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಆಗಿರುವ ವೆತ್ಯಾಸವನ್ನು 2021-22ನೇ ಸಾಲಿನ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಮೀಸಲಿರಿಸಿ,ಮತ್ತಷ್ಟು ಜನರನ್ನು ತಲುಪಲು ಪ್ರಯತ್ನಿಸಲಾಗುವುದು ಎಂದು ರಘು ಕೌಟಿಲ್ಯ ಭರವಸೆ ನೀಡಿದರು.

     ದೇವರಾಜ ಅರಸು ಅಭಿವೃದ್ದಿ ನಿಗಮದ ಫಲಾನುಭವಿಗಳ ಆಯ್ಕೆ ಸಂಬಂಧ ಕೇಂದ್ರ ಮತ್ತು ರಾಜ್ಯ ಸರಕಾರದ ಕೌಶಲ್ಯ ಕೇಂದ್ರಗಳಲ್ಲಿ ತರಬೇತಿ ಪಡೆದವರಿಗೆ ಅದ್ಯತೆ ನೀಡುವ ಚಿಂತನೆ ಇದೆ. ಇದಕ್ಕಾಗಿ ಪ್ರತಿ ತಾಲೂಕಿನಲ್ಲಿ 50 ಜನ ಹಿಂದುಳಿದ ವರ್ಗದ ಯುವಜನರಿಗೆ ಸೇರಿದಂತೆ ವರ್ಷದಲ್ಲಿ 1.25 ಲಕ್ಷ ಜನರಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ.ಇಲ್ಲಿ ತರಬೇತಿ ಪಡೆದಂತಂತಹ ಯುವಜನರಿಗೆ ಸರಕಾರಿ ಸಾಲ ಸೌಲಭ್ಯಗಳಿಗೆ ಫಲಾನುಭವಿಗಳ ಆಯ್ಕೆಗೆ ಅದ್ಯತೆ ನೀಡಲಾಗುವುದು ಎಂದರು.

      ಪ್ರಸ್ತುತ ಕೋವಿಡ್-19 ನಿಂದಾಗಿ ಹಳ್ಳಿಗಾಡಿನಿಂದ ಬೆಂಗಳೂರಿಗೆ ವಲಸೆ ಹೋಗಿದ್ದ ಸಾವಿರಾರು ಯುವಜನರು ಹಳ್ಳಿಗಾಡಿಗೆ ಮರಳಿದ್ದಾರೆ. ಅವರಿಗೆ ನಮ್ಮ ಕೌಶಲ್ಯ ತರಬೇತಿ ಕೇಂದ್ರಗಳ ಮೂಲಕ ತರಬೇತಿ ನೀಡಿ, ಸ್ಥಳೀಯ ಕೃಷಿ ಉತ್ಪನ್ನಗಳನ್ನು ಬಳಸಿಕೊಂಡು ಕೃಷಿ ಆಧಾರಿತ ಕೈಗಾರಿಕೆಗಳನ್ನು ನಡೆಸಲು,ಅದರಲ್ಲಿಯೂ ಕುಲಕಸುಬಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಒತ್ತು ನೀಡಲು ತೀರ್ಮಾನಿಸಲಾಗಿದೆ, ಕಮ್ಮಾರ, ಚಮ್ಮಾರ, ಕುಂಬಾರ,ಬಡಗಿ,ಕ್ಷೌರಿಕರ ಕುಲ ಕಸುಬುಗಳಿಗೆ ಅಧುನಿಕ ಸ್ಪರ್ಷ ನೀಡಿ, ಅವುಗಳನ್ನು ಉತ್ತೇಜಿಸಲು ತೀರ್ಮಾನಿಸಲಾಗಿದೆ ಎಂದು ರಘು ಕೌಟಿಲ್ಯ ನುಡಿದರು.
ಸುದ್ದಿಗೋಷ್ಠಿಯಲ್ಲಿ ಸ್ಥಳೀಯ ಶಾಸಕರಾದ ಜೋತಿಗಣೇಶ್,ತೆಂಗು ನಾರು ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಬಿ.ಕೆ.ಮಂಜುನಾಥ್,ದೇವರಾಜು ಅರಸು ಅಭಿವೃದ್ದಿ ನಿಗಮದ ವ್ಯವಸ್ಥಾಪಕ ಭಕ್ತಕುಚೇಲ ಮತ್ತಿತರರು ಉಪಸ್ಥಿತರಿದ್ದರು.

      ಸುದ್ದಿಗೋಷ್ಠಿಗೂ ಮುನ್ನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಹಿರಿಯ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ತದನಂತರ ದೇವರಾಜ ಅರಸು ಅಭಿವೃದ್ದಿ ನಿಗಮದ ಕಚೇರಿಗೆ ಭೇಟಿ ನೀಡಿ,ಪರಿಶೀಲನೆ ನಡೆಸಿದರು.ಪ್ರವಾಸಿ ಮಂದಿರದಲ್ಲಿ ಹಿಂದುಳಿದ ವರ್ಗಗಳ ಮುಖಂಡರ ಸಭೆ ನಡೆಸಿದರು.ಸಭೆಯಲ್ಲಿ ಪಾಲಿಕೆ ಸದಸ್ಯರಾದ ಶ್ರೀಮತಿ ಗಿರಿಜಾ ಧನಿಯಕುಮಾರ್, ನರಸಿಂಹರಾಜು,ಮುಖಂಡರಾದ ರುದ್ರೇಶ್,ವೇದಮೂರ್ತಿ, ಜಗಧೀಶ್ ಇದ್ದರು.

(Visited 11 times, 1 visits today)