ತುಮಕೂರು :

      ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಳ್ಳಾವಿ ಹೋಬಳಿಯ ಎಂಟು ಕೆರೆಗಳಿಗೆ ಎತ್ತಿನಹೊಳೆಯ ಮೂ ಲಕ ಗುರುತ್ವಾಕರ್ಷಣೆಯಲ್ಲಿ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಶಾಸಕ ಗೌರಿಶಂಕರ್ ಅವರು, ಜಿಲ್ಲಾಧಿಕಾರಿಗಳು ಹಾಗೂ ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

      ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಹಾಯ್ದು ಹೋಗಿರುವ ಎತ್ತಿನಹೊಳೆ ಪೈಪ್‍ಲೈನ್‍ನಿಂದ ಬೆಳ್ಳಾವಿ ಹೋಬಳಿಯ ಬೆಳ್ಳಾವಿ, ದೊಡ್ಡ ವೀರನಹಳ್ಳಿ, ದೊಡ್ಡೇರಿ, ಪಿ.ಗೊಲ್ಲಹಳ್ಳಿ, ಚೆನ್ನನಹಳ್ಳಿ, ಸೊರೇಕುಂಟೆ ಕೆರೆಗಳಿಗೆ 95.06ಎಫ್‍ಸಿಎಫ್‍ಟಿ(0.9) ಟಿಎಂಸಿ ನೀರನ್ನು ಗುರತ್ವಾಕ ರ್ಷಣೆಯಿಂದಲೇ ಹರಿಸಬಹುದಾಗಿದೆ.

      ಸದರಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಿದ್ದು, ಜನ ಜಾನುವಾರುಗಳಿಗೆ ತೊಂದರೆಯಾಗಿರುವುದರಿಂದ 210 ಕಿ.ಮೀಯಿಂದ 213 ಕಿಮೀಯೊಳಗೆ ಬರುವ ಈ 6 ಕೆರೆಗಳಿಗೆ ಸೂಕ್ತ ಜಾಗದಲ್ಲಿ ತೂಬು ನಿರ್ಮಾಣ ಮಾಡುವ ಮೂಲಕ ಹರಿಸಬಹುದಾಗಿದ್ದು, ಈ ಕೆರೆ ಗಳಿಗೆ ಎತ್ತಿನಹೊಳೆಯಿಂದ ನೀರು ಹರಿಸುವಂತೆ ಶಾಸಕ ಗೌರಿಶಂಕರ್ ಕೋರಿದ್ದಾರೆ.

       ಗ್ರಾಮಾಂತರ ಕ್ಷೇತ್ರಕ್ಕೆ ಹಂಚಿಕೆ ಮಾಡಿ: ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಎತ್ತಿನಹೊಳೆ ವರದಾನವಾಗಿ ಪರಿಣಮಿಸಬೇಕಿದ್ದು, ಕ್ಷೇತ್ರದಲ್ಲಿ ಹಾಯ್ದು ಹೋಗಿರುವ ಕಡೆಯಲ್ಲಿ ಗುರುತ್ವಾಕರ್ಷಣೆಯಿಂದಲೇ ನೀರು ತುಂಬಿಸುವ ಕೆಲಸವನ್ನು ಮಾಡಬಹುದಾಗಿದೆ, ಗ್ರಾಮಾಂತರ ಕ್ಷೇತ್ರಕ್ಕೆ ಎತ್ತಿನಹೊಳೆಯಲ್ಲಿ ನೀರು ಹಂಚಿಕೆಯನ್ನು ವಿಶ್ವೇಶ್ವರಯ್ಯ ಜಲನಿಗಮ ಮಾಡಬೇಕೆಂದು ಶಾಸಕ ಡಿ.ಸಿ.ಗೌರಿಶಂಕರ್ ಅವರು ಒತ್ತಾಯಿಸಿದ್ದಾರೆ.

      ಗ್ರಾಮಾಂತರ ಕ್ಷೇತ್ರವು ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡತೆ ಇದ್ದರೂ, ಗ್ರಾಮಾಂತರ ವ್ಯಾಪ್ತಿಯಲ್ಲಿ ತೋಟಗಾರಿಕೆ ಬೆಳೆಯೂ ಹೆಚ್ಚಾಗಿದೆ, ಬಹುತೇಕ ಕೆರೆಗಳು ನೀರಾವರಿ ಸೌಲಭ್ಯದಿಂದ ವಂಚಿತವಾಗಿದ್ದು, ಎತ್ತಿನಹೊಳೆಯಿಂದ ಈ ಭಾಗದ ಕೆರೆಗಳನ್ನು ತುಂಬಿಸಿದರೆ ಅಂತರ್ಜಲ ಮಟ್ಟ ಹೆಚ್ಚಳವಾಗಲಿದ್ದು, ಕುಡಿಯುವ ನೀರಿನ ಬವಣೆಯು ತಪ್ಪಿದಂತೆ ಆಗುತ್ತದೆ ಎಂದು ಹೇಳಿದ್ದಾರೆ.

      ಗ್ರಾಮಾಂತರ ಕ್ಷೇತ್ರಕ್ಕೆ ಎತ್ತಿನಹೊಳೆಯಿಂದ ನೀರು ಹಂಚಿಕೆಯಾಗದೇ ಇದ್ದಲ್ಲಿ, ಅಂತರ್ಜಲ ಮಟ್ಟ ಕುಸಿದು ಕುಡಿಯುವ ನೀರಿಗೆ ತೊಂದರೆಯಾಗಲಿದ್ದು, ಗ್ರಾಮಾಂತರ ಕ್ಷೇತ್ರದ ಬೆಳ್ಳಾವಿ ಹೋಬಳಿಯ ಕೆರೆಗಳು ತುಂಬಿ ಎಷ್ಟೋ ವರ್ಷಗಳಾಗಿದ್ದು, ಸುತ್ತಮುತ್ತಲ ಗ್ರಾಮಗಳಲ್ಲಿಯೂ ಅಂತರ್ಜಲ ಮಟ್ಟ ಕಡಿಮೆಯಾಗಿದ್ದು, ರೈತರು ಸಂಕಷ್ಟದಲ್ಲಿದ್ದು, ಸರ್ಕಾರ ಎತ್ತಿನಹೊಳೆಯಿಂದ ನೀರು ಹಂಚಿಕೆ ಮಾಡುವ ಮೂಲಕ ರೈತರಿಗೆ ನೆರವಾಗಬೇಕೆಂದು ಕೋರಿದ್ದಾರೆ.

     ನೀರು ಹಂಚಿಕೆಯಾಗದಿದ್ದರೆ ಹೋರಾಟ: ಬೆಳ್ಳಾವಿ ಹೋಬಳಿಯ ಮೂಲಕವೇ ಹೇಮಾವತಿ ಹಾಗೂ ಎತ್ತಿನಹೊಳೆ ಯೋಜನೆಯಿಂದ ನೀರು ಹರಿದರು ಈ ಭಾಗದ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಯಾರು ಮಾಡಲಿಲ್ಲ, ಹೇಮಾವತಿಯಿಂದಲೂ ಈ ಕೆರೆಗಳಿಗೆ ನೀರು ಹಂಚಿಕೆಯಾಗದೇ ಇರುವುದರಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಎತ್ತಿನ ಹೊಳೆಯಿಂದಲೂ ನೀರು ಹಂಚಿಕೆಯಾಗದೇ ಹೋದರೆ ಈ ಭಾಗದ ರೈತರಿಗೆ ಅನ್ಯಾಯವಾಗಲಿದೆ ಎಂದು ತುಮಕೂರು ಗ್ರಾಮಾಂತರ ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತ್‍ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

      ಸೊರೇಕುಂಟೆ, ದೊಡ್ಡವೀರನಹಳ್ಳಿ, ಬೆಳ್ಳಾವಿ ಕೆರೆಗಳಿಗೆ ನೀರು ಹರಿಸಿದರೆ, ಈ ಭಾಗದ ನೀರಿನ ಸಮಸ್ಯೆ ಬಹುತೇಕ ಪರಿಹಾರವಾಗುವುದಲ್ಲದೆ, ಅಂತರ್ಜಲ ಮಟ್ಟ ಏರಿಕೆಯಾಗಿ, ರೈತರಿಗೂ ಅನುಕೂಲವಾಗಲಿದೆ, ಎತ್ತಿನಹೊಳೆಯಿಂದ ಗ್ರಾಮಾಂತರ ಕ್ಷೇತ್ರ ಬೆಳ್ಳಾವಿ ಹೋಬಳಿಯ ಕೆರೆಗಳಿಗೆ ನೀರು ಹಂಚಿಕೆಯಾಗದೇ ಇದ್ದಲ್ಲಿ, ಶಾಸಕ ಡಿ.ಸಿ.ಗೌರಿಶಂಕರ್ ನೇತೃತ್ವದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ ಅವರು, ಎತ್ತಿನಹೊಳೆ ನೀರು ಹಂಚಿಕೆ ಮಾಡದೇ ಹೋದಲ್ಲಿ ಸರ್ಕಾರದ ವಿರುದ್ಧ ಜನಾಂದೋಲನ ರೂಪಿಸುವುದಾಗಿ ಹೇಳಿದ್ದಾರೆ.

      ಈ ವೇಳೆ ಯುವ ಘಟಕದ ಅಧ್ಯಕ್ಷ ಹಿರೇಹಳ್ಳಿ ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

(Visited 12 times, 1 visits today)