ತುಮಕೂರು :

      ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಕಾನೂನು ಅತ್ಯವಶ್ಯಕವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ರಾಘವೇಂದ್ರ ಶೆಟ್ಟಿಗಾರ್ ಅವರು ತಿಳಿಸಿದರು.

      ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ(ದಕ್ಷಿಣ ಶೈಕ್ಷಣಿಕ ಜಿಲ್ಲೆ) ಹಾಗೂ ಮಕ್ಕಳ ಸಹಾಯವಾಣಿ -1098 ಅಭಿವೃದ್ಧಿ ಸಾಮಾಜಿಕ ಸೇವಾ ಸಂಸ್ಥೆ ಸಹಯೋಗದಲ್ಲಿಂದು ನಗರದ ಬಾಲಭವನದಲ್ಲಿ ಹಮ್ಮಿಕೊಂಡಿದ್ದ “ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ”ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ಹಿಂದಿನ ಕಾಲದಿಂದಲೂ ಶೋಷಿತ ವರ್ಗವೆಂದೇ ಕರೆಸಿಕೊಳ್ಳುವ ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಹಾಗೂ ಶಿಕ್ಷಣದ ಬಗ್ಗೆ ಪ್ರತಿಯೊಬ್ಬರು ಯೋಚಿಸಬೇಕು. ಹೆಣ್ಣು ಭ್ರೂಣಹತ್ಯೆ, ವರದಕ್ಷಿಣೆ, ಬಾಲ್ಯವಿವಾಹ, ಅತ್ಯಾಚಾರ ಸೇರಿದಂತೆ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ಹೆಣ್ಣಿನ ರಕ್ಷಣೆಗೆ ಈ ಆಧುನಿಕ ಯುಗದಲ್ಲಿ ಕಾನೂನು ಅನಿವಾರ್ಯ. ಹಾಗಾಗಿ ಎಲ್ಲರೂ ಕಾನೂನನ್ನು ಅರಿತುಕೊಳ್ಳಬೇಕು ಎಂದು ಮಕ್ಕಳಿಗೆ ಅವರು ಸಲಹೆ ನೀಡಿದರು.

      ದಕ್ಷಿಣ ಭಾರತ ಭಾಗದಲ್ಲಿ ಬಾಲ್ಯವಿವಾಹ ಕಡಿಮೆಯಾಗಿದೆ. ಉತ್ತರ ಭಾರತದ ಕೆಲವೊಂದು ಪ್ರದೇಶಗಳಲ್ಲಿ ಇನ್ನೂ ಬಾಲ್ಯವಿವಾಹ ಚಾಲ್ತಿಯಲ್ಲಿದೆ. ಬಾಲ್ಯ ವಿವಾಹ ಕಾನೂನು ಪ್ರಕಾರ ಅಪರಾಧ. ಹಾಗಾಗಿ ಬಾಲ್ಯ ವಿವಾಹ ಕಂಡುಬಂದಲ್ಲಿ ಯಾರೂ ಬೇಕಾದರೂ ಹತ್ತಿರದ ಪೊಲೀಸ್ ಠಾಣೆ ಅಥವಾ ತಾಲ್ಲೂಕಿನ ಪ್ರಥಮ ನ್ಯಾಯಿಕ ದಂಡಾಧಿಕಾರಿ ಅವರಿಗೆ ದೂರು ನೀಡಬಹುದು ಎಂದು ಅವರು ತಿಳಿಸಿದರು.
ಹೆಣ್ಣು ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ, ಬೆಂಬಲ, ಅವಕಾಶಗಳನ್ನು ನೀಡುವ ಸಲುವಾಗಿ ಮತ್ತು ಹೆಣ್ಣು ಮಕ್ಕಳು ಅನುಭವಿಸುತ್ತಿರುವ ಲಿಂಗ ತಾರತಮ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಹೆಣ್ಣು ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು, “ಬೇಟಿ ಬಚಾವೋ ಬೇಟಿ ಪಡಾವೋ’ ಎಂಬ ಘೋಷಣೆ ಮೂಲಕ ಹೆಣ್ಣುಮಕ್ಕಳ ಸಬಲೀಕರಣದ ಅಗತ್ಯವನ್ನು ಒತ್ತಿ ಹೇಳಿದ್ದಾರೆ ಅದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಅವರು ನುಡಿದರು.

      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಕಲ್ಯಾಣ್ ಮಾತನಾಡಿ, ಒಂದು ವರ್ಷದಲ್ಲಿ ಸುಮಾರು ಒಂದು ಲಕ್ಷ ಹೆಣ್ಣು ಮಕ್ಕಳು ತಾಯಿಯ ಗರ್ಭದಲ್ಲಿಯೇ ಸಾವನ್ನಪ್ಪುತ್ತಿವೆ. ಹೆಣ್ಣು ಮಕ್ಕಳ ಭ್ರೂಣ ಹತ್ಯೆ ಇನ್ನೂ ನಿಂತಿಲ್ಲ ಎಂದು ವಿಷಾದಿಸಿದ ಅವರು ಇಂದು ಈ ಭೂಮಿ ಮೇಲೆ ಹೆಣ್ಣಾಗಿ ಹುಟ್ಟಿರುವ ನೀವುಗಳು ಉನ್ನತ ಶಿಕ್ಷಣ ಪಡೆಯುವ ಮುಖಾಂತರ ಅಪಾರವಾದ ಸಾಧನೆ ಮಾಡಬೇಕು ಎಂದು ಮಕ್ಕಳಿಗೆ ತಿಳಿ ಹೇಳಿದರು.

      ಪ್ರಸ್ತುತ ಕಾಲ ಘಟ್ಟದಲ್ಲಿ ಪ್ರತಿ ವರ್ಷವೂ ಸಹ ಎಸ್‍ಎಸ್‍ಎಲ್‍ಸಿಯಲ್ಲಿ ಪರೀಕ್ಷೆಯಲ್ಲಿ ಹೆಣ್ಣು ಮಕ್ಕಳ ಮೇಲುಗೈ ಸಾಧಿಸುತ್ತಾರೆ. ಅದು ಎಸ್‍ಎಸ್‍ಎಲ್‍ಸಿಗೆ ಮಾತ್ರ ಸೀಮಿತವಾಗಿರಬಾರದು. ಉನ್ನತ ಮಟ್ಟದ ಶಿಕ್ಷಣದ ಸಾಧನೆ ಹಾಗೂ ಉದ್ಯೋಗವನ್ನು ಗಿಟ್ಟಿಸಿಕೊಳ್ಳುವವರೆಗೂ ಮುಂದುವರೆಸಬೇಕು ಎಂದು ಅವರು ಹೇಳಿದರು.

        ಹೆಣ್ಣು ಮಕ್ಕಳು ಸಂಸ್ಕøತಿಯ ಚೌಕಟ್ಟಿನಲ್ಲಿಯೇ ಎಷ್ಟು ಎತ್ತರಕ್ಕೆ ಬೇಕಾದರೂ ಬೆಳೆದು ಸಾಧನೆ ಮಾಡಬಹುದು. ತಂದೆ-ತಾಯಿಯ ಮಾತನ್ನು ಶಿರಸವಹಿಸಿ ಪಾಲಿಸಬೇಕು. ಅವರ ಮಾರ್ಗದರ್ಶನದಲ್ಲಿ ಬೆಳೆಯಬೇಕು ಎಂದು ಮಕ್ಕಳಿಗೆ ಅವರು ಕಿವಿಮಾತು ಹೇಳಿದರು.

(Visited 28 times, 1 visits today)