ತುಮಕೂರು:

      ತಾಲ್ಲೂಕಿನ ಹೆಬ್ಬೂರಿಗೆ ಮಂಜೂರಾಗಿದ್ದ ಎಂಎಸ್‍ಐಎಲ್ ಅನ್ನು ರದ್ದುಗೊಳಿಸಿರುವ ಮುಖ್ಯಮಂತ್ರಿಗಳ ಕ್ರಮ ವಿರೋಧಿಸಿ ಹಾಗೂ ಬಿಜೆಪಿ ದ್ವೇಷ ರಾಜಕಾರಣವನ್ನು ಖಂಡಿಸಿ, ನಾಗರೀಕರು ಹಾಗೂ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

      ಜೆಡಿಎಸ್ ಗ್ರಾಮಾಂತರ ಅಧ್ಯಕ್ಷ ಹಾಲನೂರು ಅನಂತ್‍ಕುಮಾರ್ ಮಾತನಾಡಿ ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಹೆಬ್ಬೂರಿನಲ್ಲಿ ಆರಂಭಗೊಂಡಿದ್ದ ಎಂಎಸ್‍ಐಎಲ್ ಅನ್ನು ಮುಚ್ಚಿಸಲು ಮಾಜಿ ಶಾಸಕರು ಹಣ ಪಡೆದಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಸರ್ಕಾರಿ ಸಂಸ್ಥೆಯನ್ನು ಮುಚ್ಚಿಸುವ ಮೂಲಕ ಬಿಜೆಪಿ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.

      ಹೆಬ್ಬೂರಿನಲ್ಲಿರುವ ಖಾಸಗಿ ವೈನ್ ಸೆಂಟರ್‍ಗಳಲ್ಲಿ ಕಳಪೆ ಗುಣಮಟ್ಟದ ಮದ್ಯ ಹಾಗೂ ದುಬಾರಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ, ಹೋಬಳಿಗೆ ಒಂದು ಎಂಎಸ್‍ಐಎಲ್ ಇರಬೇಕು ಎನ್ನುವುದು ಸರ್ಕಾರಿ ನಿಯಮವಾಗಿದ್ದು, ಅದರಂತೆ ಹೆಬ್ಬೂರಿಗೆ ಶಾಸಕ ಗೌರಿಶಂಕರ್ ಅವರು ಎಂಎಸ್‍ಐಎಲ್ ಅಧ್ಯಕ್ಷರಾಗಿದ್ದಾಗ ಮಂಜೂರು ಮಾಡಿದ್ದ ಎಂಎಸ್‍ಐಎಲ್ ಮಳಿಗೆಯನ್ನು ಖಾಸಗಿ ಮದ್ಯಮಾರಾಟಗಾರ ಒತ್ತಡದಿಂದ ಕೆಲವರಿಂದ ಪ್ರತಿಭಟಿಸಿ, ಒಂದೇ ದಿನದಲ್ಲಿ ರದ್ದುಗೊಳಿಸುವ ಹುನ್ನಾರವನ್ನು ಮಾಜಿ ಶಾಸಕರು ಮಾಡಿದ್ದಾರೆ ಎಂದು ಆರೋಪಿಸಿದರು.

      ಸರ್ಕಾರಿ ಸ್ವಾಮ್ಯದ ಎಂಎಸ್‍ಐಎಲ್‍ನಿಂದ ಕುಡುಕರ ಸಂಖ್ಯೆ ಹೆಚ್ಚಳವಾಗಿ, ಬದುಕು ನಡೆಸುವುದು ದುರ್ಬರವಾಗುವುದಾದರೆ, ಹೆಬ್ಬೂರಿನಲ್ಲಿರುವ ಮೂರು ಖಾಸಗಿ ಬಾರ್‍ಗಳನ್ನು ಮುಚ್ಚಿಸಬೇಕು ಎಂದು ಒತ್ತಾಯಿಸಿದ ಅವರು, ಎಂಎಸ್‍ಐಎಲ್‍ನಿಂದ ಸರ್ಕಾರಕ್ಕೆ ಆದಾಯವಾಗುತ್ತದೆ ಆದರೆ ಎಂಎಸ್‍ಐಎಲ್ ಅನ್ನು ಮುಚ್ಚಿಸಿ ಖಾಸಗಿ ಬಾರ್‍ಗಳನ್ನು ಉಳಿಸಿದರೆ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

      ಹೆಬ್ಬೂರಿನ ನಾಗರೀಕ ಲಾಟರಿ ನಾರಾಯಣಪ್ಪ ಮಾತನಾಡಿ, ಸರ್ಕಾರಿ ಸ್ವಾಮ್ಯದ ಎಂಎಸ್‍ಐಎಲ್ ಪ್ರಾರಂಭಗೊಂಡರೆ, ಖಾಸಗಿ ಬಾರ್‍ಗಳಿಗೆ ಯಾರು ಬರುವುದಿಲ್ಲ ಎಂದು, ಬಿಜೆಪಿ ಬೆಂಬಲಿಗರ ಖಾಸಗಿ ಬಾರ್‍ಗಳನ್ನು ಉಳಿಸಲು ಕೆಲ ಬಿಜೆಪಿಗರು ಎಂಎಸ್‍ಐಎಲ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆಯೇ ವಿನಃ ಗ್ರಾಮಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ, ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಮದ್ಯ ದೊರೆಯುವುದರಿಂದ ನಮಗೆ ಎಂಎಸ್‍ಐಎಲ್ ಇರಬೇಕು ಎಂದು ಹೇಳಿದರು.

     ಮಾಜಿ ಶಾಸಕ ಸುರೇಶ್‍ಗೌಡ ಹಾಗೂ ಬಿಜೆಪಿ ಬೆಂಬಲಿಗರು ಗ್ರಾಮಾಂತರದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದು, ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ, ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ದೂರಿದ ಜೆಡಿಎಸ್ ಕಾರ್ಯಕರ್ತರು, ವಿಶೇಷ ಅನುದಾನವನ್ನು ವಾಪಾಸ್ ಪಡೆಯುವ ಕುತಂತ್ರಕ್ಕೆ ಸಿಎಂ ಬಿಎಸ್‍ವೈ ಮುಂದಾಗಿದ್ದಾರೆ ಎಂದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

      ಎಂಎಸ್‍ಐಎಲ್ ರದ್ದುಗೊಳಿಸದಂತೆ ಒತ್ತಾಯಿಸಿ ಜೆಡಿಎಸ್ ಮಹಿಳಾ ಘಟಕದ ವತಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

       ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರಾದ ತಾ.ಪಂ.ಸದಸ್ಯ ರಂಗಸ್ವಾಮಯ್ಯ, ನರುಗನಹಳ್ಳಿ ವಿಜಯಕುಮಾರ್, ಕೆ.ವಿ.ರಾಜು, ನಾಗವಲ್ಲಿ ಹನುಮಂತರಾಜು, ಬಳ್ಳಗೆರೆ ಉದಯ್, ಗ್ರಾ.ಪಂ.ಸದಸ್ಯ ಬಸವರಾಜು, ರಾಮೇನಹಳ್ಳಿ ಚಿಕ್ಕಣ್ಣ, ಬಳ್ಳಗೆರೆ ರಾಜು, ಕಂಬಾರಪುರ ಪಾಂಡುರಂಗಯ್ಯ, ಮಲ್ಲೇಶ್, ಹೊನಸಿಗೆರೆ ರುದ್ರೇಶ್ ಸೇರಿದಂತೆ ಇತರರಿದ್ದರು.

(Visited 28 times, 1 visits today)