ತುಮಕೂರು:

      ಪ್ರತಿಯೊಬ್ಬರೂ ತಮಗೆ ಸಿಗಬೇಕಾಗಿರುವ ಹಕ್ಕು ಬೇರೆಯವರಿಗೂ ಸಿಗಬೇಕು, ನಮಗೆ ಏನು ಆಗಬಾರದೆಂದು ಬಯಸುತ್ತೇವೆಯೋ ಅದು ಬೇರೆಯವರಿಗೂ ಆಗಬಾರದೆಂದು ಅರಿತಾಗ ನಿಜವಾದ ಮಾನವನ ಹಕ್ಕು ಲಭಿಸಿದಂತಾಗುತ್ತದೆ. ಮಾನವ ಜನಿಸಿದಾಗಿನಿಂದಲೆ ಅವನ ಹಕ್ಕು ಆರಂಭವಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ರೂಪಕ್ ಕುಮಾರ್ ದತ್ತಾ ಅವರು ತಿಳಿಸಿದರು.

      ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರ ಹಾಗೂ ಸ್ನಾತಕೋತ್ತರ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದಲ್ಲಿಂದು ತುಮಕೂರು ವಿಶ್ವವಿದ್ಯಾನಿಲಯದ ಡಾ||ಪಿ.ಸದಾನಂದಮಯ್ಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ಅರಿವು, ರಕ್ಷಣೆ, ನೆರವು ಸಂರಕ್ಷಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾನವ ಸಂಸಾರಕ್ಕೆ ಬಂದಾಗಿನಿಂದಲೂ ಮಾನವ ಹಕ್ಕುಗಳು ಬಂದಿವೆ ಎಂದರು.

      ಸಾರ್ವಜನಿಕ ಸೇವೆಯಲ್ಲಿರುವವರು ಜನರ ಹಿತಕ್ಕಾಗಿ ಕೆಲಸ ಮಾಡುವ ಮನೋಭಾವ ರೂಢಿಸಿಕೊಳ್ಳಬೇಕು. ಮಾನವನ ಹಕ್ಕು ಉಲ್ಲಂಘನೆಯಾದ ಪ್ರತಿಯೊಬ್ಬರೂ ತಮ್ಮ ಹಕ್ಕಿಗಾಗಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸುವ ಅವಕಾಶವಿದೆ. ದೂರು ಸಲ್ಲಿಸಲು ಯಾವುದೇ ನಮೂನೆಗಳಿರುವುದಿಲ್ಲ. ಆದರೆ ದೂರು ಸಲ್ಲಿಸುವವರ ಸಂಪೂರ್ಣ ವಿಳಾಸ ಇರಬೇಕು. ಪ್ರಕರಣಗಳು ನ್ಯಾಯಾಲದಲ್ಲಿ ಚಾಲ್ತಿಯಲ್ಲಿರಬಾರದು ಎಂದು ಅವರು ತಿಳಿಸಿದರು.

      ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಅವರು ಮಾತನಾಡಿ, ನಾವೆಲ್ಲಾ ಕಾನೂನಿನ ಚೌಕಟ್ಟಿನಡಿಯಲ್ಲಿ ಜೀವನ ಸಾಗಿಸುತ್ತಿದ್ದೇವೆ. ಆದರೆ ನಿಜ ಜೀವನದಲ್ಲಿ ಕಾನೂನು ಮತ್ತು ಸಂವಿಧಾನದ ನಿಯಮ ಪಾಲನೆ ಯಲ್ಲಿ ಹಿಂದುಳಿದಿದ್ದೇವೆ ಎಂದರು.

      ಭಾರತದ ಭವ್ಯ ಪ್ರಜೆಗಳಾಗುವ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಅಗತ್ಯವಾಗಿದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಕಾನೂನಿನ ಅರಿವು ಮೂಡಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.

      ಮಾನವ ಹಕ್ಕುಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ನುಡಿದರು.

      ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿದ್ಧಲಿಂಗೇಗೌಡ ಮಾತನಾಡಿ, ಜಗತ್ತು ಎರಡು ಮಹಾಯುದ್ಧ ಕಂಡಿದೆ. ಈ ಎರಡೂ ಮಹಾಯುದ್ದಗಳೂ ಪ್ರಕೃತಿಯ ಮೇಲೆ ಘೋರ ಪರಿಣಾಮ ಬೀರಿವೆ. ಅದನ್ನು ಮನಗಂಡ ವಿಶ್ವ ಮಾನವ ಹಕ್ಕುಗಳ ಆಯೋಗ ಮಾನವ ಹಕ್ಕುಗಳು ಜೀವಿಸುವ ಪ್ರತಿಯೊಬ್ಬರಿಗೂ ಅನಿವಾರ್ಯತೆ ಎನ್ನುವುದನ್ನು ಎತ್ತಿ ಹಿಡಿದಿದೆ ಎಂದು ಅವರು ತಿಳಿಸಿದರು.

      ದೇಶದಲ್ಲಿರುವ ಅಂಗನವಾಡಿ ಕೇಂದ್ರಗಳ ಸ್ಥಿತಿ ಶೋಚನೀಯವಾಗಿದೆ. ಹಾಗಾಗಿ ಅವುಗಳಿಗೆ ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸುವ ಸೂಕ್ತ ಕ್ರಮ ಜರುಗಿಸಬೇಕಾಗಿದೆ. ಎಲ್ಲಾ ಮಕ್ಕಳಿಗೂ ಅವರ ಹಕ್ಕು ಸಿಗುವಂತಾಗಬೇಕು. ದೇಶದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಹೆಚ್ಚುತ್ತಿದೆ. ಇದರ ಜೊತೆಗೆ ಸರಿಯಾದ ನ್ಯಾಯ ಸಿಗುವಲ್ಲಿ ವಿಳಂಬವಾಗುತ್ತಿದೆ ಎಂದರು.

      ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಮಾತನಾಡಿ, ಹಕ್ಕು ಮತ್ತು ಕರ್ತವ್ಯ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಾಗಾಗಿ ನಾವೆಲ್ಲರೂ ಕರ್ತವ್ಯಕ್ಕೆ ಹೆಚ್ಚು ಮನ್ನಣೆ ನೀಡಬೇಕು. ಹಕ್ಕುಗಳನ್ನು ಪಡೆಯುವ ಬಗ್ಗೆನೂ ಜಾಗೃತರಾಗಬೆಕು ಆಗ ಮಾತ್ರ ಉತ್ತಮ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯ ಎಂದರು.

      ಸಂಮೃದ್ಧಿ ಸಮಾಜ ನಿರ್ಮಾಣ ಯುವ ಜನರ ಕೈಯಲ್ಲಿದೆ. ಯುವಕರು ಈ ನಿಟ್ಟಿನಲ್ಲಿ ಜವಬ್ದಾರಿಯುತ ಜೀವನ ಸಾಗಿಸಲು ಮುಂದಾಗಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

      ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ಟಿ.ಜಿ.ಉದೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜ್, ವಿಶ್ವವಿದ್ಯಾನಿಲಯದ ಕುಲಸಚಿವ ಕೆ.ಎನ್.ಗಂಗಾನಾಯ್ಕ್ ಸೇರಿದಂತೆ ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

(Visited 15 times, 1 visits today)