ತುಮಕೂರು :

      ಒಕ್ಕಲಿಗ ಹಾಗೂ ಹಲವು ಸಮುದಾಯಗಳ ಆರಾಧ್ಯ ದೇವ ಕಾಲಬೈರವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಹಾಗೂ ಮಹಾ ಕುಂಬಾಭಿಷೇಕ ಮಹೋತ್ಸವವನ್ನು ಮಾ.2ರಿಂದ ಮಾ.10ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಆದಿಚುಂಚನಗಿರಿ ಮಠಾಧೀಶ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

      ತಾಲ್ಲೂಕಿನ ಮಂಚಕಲ್ ಕುಪ್ಪೆಯಲ್ಲಿರುವ ಆದಿಚುಂಚನಗಿರಿ ಮಹಾಸಂಸ್ಥಾನದ ತುಮಕೂರು ಜಿಲ್ಲಾ ಶಾಖೆಯಲ್ಲಿ ಜಾತ್ರಾ ಮಹೋತ್ಸವ ಹಾಗೂ ಮಹಾಕುಂಬಾಭಿಷೇಕ ಮಹೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

      1800 ವರ್ಷಗಳ ಹಿಂದೆ ನಾಥ ಪರಂಪರೆಗೆ ಭದ್ರ ಬುನಾದಿಯನ್ನು ಹಾಕಿದ ಗೋರಕ್ಷ ನಾಥ ಅವರು ಜ್ಞಾನ ದೀಕ್ಷೆಯನ್ನು ಪಡೆದ ಜಾಗ ಆದಿ ಚುಂಚನಗಿರಿ, ಇಲ್ಲಿಯೇ ಭಗವಾನ್ ಈಶ್ವರರು ಧ್ಯಾನ ಮಾಡಿದ್ದರು ಎನ್ನುವ ಪ್ರತೀತಿ, ನಂಬಿಕೆ ನಮ್ಮಲ್ಲಿ ಇದೆ, ಅವಿದ್ಯಾವಂತರಿಗೆ ರಾಮಾಯಣ, ಮಹಾಭಾರತ ಗೊತ್ತಿದೆ ಆದರೆ ವಿದ್ಯಾವಂತರಿಗೆ ನಮ್ಮ ಪರಂಪರೆಯ ಇತಿಹಾಸವೇ ಗೊತ್ತಿಲ್ಲದಿರುವುದು ವಿಪರ್ಯಾಸ ಎಂದರು.

      ಇತಿಹಾಸವನ್ನು ತಿಳಿದುಕೊಳ್ಳಲು ಇಂದಿನ ಯುವ ಸಮೂಹ ಮುಂದಾಗುತ್ತಿಲ್ಲ, ಇಂತಹ ಪರಿಸ್ಥಿತಿಯಲ್ಲಿ ನಮ್ಮ ಇತಿಹಾಸ ಮತ್ತು ಪರಂಪರೆಯನ್ನು ತಿಳಿದುಕೊಳ್ಳಬೇಕು, ನಾಥ ಪರಂಪರೆಯಲ್ಲಿ ಗೋರಕ್ಷನಾಥರು ಮೊದಲು ಪ್ರಾರಂಭಿಸಿದ್ದು ಆದಿ ಚುಂಚನಗಿರಿ, ಕೊನೆಯ ಮಠ ಗೋರಖ್ ಪುರದ ಮಠ, ಗೋರಕ್ಷನಾಥರ ಹೆಸರಿನಲ್ಲಿಯೇ ಗೋರಖ್ ಪುರವವನ್ನು ಇರಿಸಲಾಗಿದೆ ಎಂದರು.

      ಆದಿ ಶಂಕರಚಾರ್ಯರಿಗಿಂತಲೂ 600 ವರ್ಷಗಳ ಹಿಂದೆಯೇ ಗೋರಕ್ಷನಾಥರು ಅದ್ವೈತ ಸಿದ್ಧಾಂತವನ್ನು ಪ್ರತಿಪ್ರಾದಿಸಿದ್ದರು, ಅಂತಹ ಪರಂಪರೆಯನ್ನು ನಮ್ಮ ಯುವ ಸಮೂಹ ಅರಿಯಬೇಕು, 2008ರಲ್ಲಿ ಹೊಸ ದೇಗುಲವನ್ನು ಡಾ.ಬಾಲಗಂಗಾಧರನಾಥ ಸ್ವಾಮೀಜಿ ಪ್ರಾರಂಭಿಸಿದ್ದರು, ಈಗ ದೇಗುಲಕ್ಕೆ 12 ವರ್ಷಗಳಾಗಿರುವುದರಿಂದ ಮಹಾಕುಂಬಾಭಿಷೇಕ ಮಾಡಲಾಗುತ್ತಿದೆ ಎಂದರು.

      ಮಾ.2,3,4ರಂದು ಕುಂಬಾಭಿಷೇಕ ನಡೆಯಲಿದ್ದು, ಮಾ.3ರಂದು ತುಮಕೂರು ಜಿಲ್ಲೆಯ ಭಕ್ತರಿಗೆ ಪೂಜಾ ಕಾರ್ಯಕ್ರಮವನ್ನು ನಿಗದಿ ಪಡಿಸಲಾಗಿದ್ದು, ಭಕ್ತರು ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾಲಬೈರೇಶ್ವರಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಭಕ್ತರಿಗೆ ಸೂಚಿಸಿದರು.

      ತುಮಕೂರು ಭಾಗದ ಭಕ್ತರ ಬಹುದಿನಗಳ ಬೇಡಿಕೆಯಾದ ಶಾಖಾ ಮಠದ ನಿರ್ಮಾಣಕ್ಕೆ ಮಾರ್ಚ್.11ರಂದು ಗುದ್ದಲಿ ಪೂಜೆಯನ್ನು ಹಮ್ಮಿಕೊಳ್ಳಲಾಗುವುದು, ಜಾತ್ರಾ ಮಹೋತ್ಸವ ಪೂರ್ಣಗೊಳ್ಳುವುದರೊಳಗೆ ನಿರ್ಮಾಣಕ್ಕೆ ಅವಶ್ಯಕವಾಗಿರುವ ಅನುಮತಿಗಳನ್ನು ಪಡೆದುಕೊಂಡು, ಜಾತ್ರಾ ಹಾಗೂ ಮಹಾಕುಂಬಾಭಿಷೇಕ ಪೂರ್ಣಗೊಂಡ ನಂತರ ಇಲ್ಲಿ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.

      ಪ್ರಾಸ್ತಾವಿಕವಾಗಿ ಮಾತನಾಡಿದ ತುಮಕೂರು- ಚಿಕ್ಕಬಳ್ಳಾಪುರ ಮಠದ ಕಾರ್ಯದರ್ಶಿ ಶ್ರೀ ಮಂಗಳನಾಥ ಸ್ವಾಮೀಜಿ ಅವರು, ಕಾಲಬೈರವೇಶ್ವರ ದೇಗುಲದ ಕುಂಬಾಭಿಷೇಕ ಮಹೋತ್ಸವ ನಡೆಯುತ್ತಿದ್ದು, ಶ್ರೀಗಳೇ ಖುದ್ದು ತುಮಕೂರು ಭಾಗದ ಭಕ್ತರನ್ನು ಆಹ್ವಾನಿಸಲು ಬಂದಿದ್ದಾರೆ, ಮಹೋತ್ಸವದ ಬಗ್ಗೆ ಭಕ್ತರಿಗೆ ಮಾಹಿತಿ ನೀಡುವ ಉದ್ದೇಶದಿಂದ ಶ್ರೀಗಳು ಭಕ್ತರಿಗೆ ಆರ್ಶೀವಚನ ನೀಡಲಿದ್ದಾರೆ ಎಂದರು.

      ಮಹೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಮುಖಂಡರ ಪೂರ್ವಭಾವಿ ಸಭೆಯನ್ನು ನಡೆಸುತ್ತಿದ್ದು, ಮುಖಂಡರು ಮಹೋತ್ಸವದ ವಿಚಾರವನ್ನು ಇತರರಿಗೂ ತಿಳಿಸುವ ಮೂಲಕ ಹೆಚ್ಚಿನ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಬೇಕೆಂದು ಸೂಚಿಸಿದರು.

      ಸಭೆಯಲ್ಲಿ ಎಸ್‍ಎಸ್‍ಐಟಿ ನಿವೃತ್ತ ಪ್ರಾಂಶುಪಾಲ ಡಾ.ಡಿ.ಎಸ್.ವೀರಯ್ಯ, ಕಲ್ಲಹಳ್ಳಿ ದೇವರಾಜು, ಕೆ.ಬಿ.ಬೋರೇಗೌಡ, ಬೈರವ ಎಲೆಕ್ಟ್ರಿಕ್ ನ ಗಿರೀಶ್, ಬೆಳ್ಳಿ ಲೋಕೇಶ್, ಮುಖಂಡರಾದ ಕಾಮರಾಜು, ಪಾಲಿಕೆ ಸದಸ್ಯ ಕುಮಾರ್, ನರಸೇಗೌಡ, ಮಂಜುನಾಥ್, ಬೈರವ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ, ಎಲ್‍ಐಸಿ ಲೋಕೇಶ್, ದೊಡ್ಡಲಿಂಗಪ್ಪ, ಬೈರವಿ ಮಹಿಳಾ ಸಂಘದ ಅಧ್ಯೆಕ್ಷೆ ಸುಜಾತ ನಂಜೇಗೌಡ ಇತರರಿದ್ದರು.

(Visited 95 times, 1 visits today)