ಮಧುಗಿರಿ:

       ರೈತಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಮಧುಗಿರಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು.

      ಪಟ್ಟಣದಲ್ಲಿರುವ ಖಾಸಗಿ ಬಸ್ ನವರು ಬೆಂಬಲ ಸೂಚಿಸಿದ್ದು ಯಾವುದೇ ಬಸ್ಸುಗಳು ಸಂಚಾರ ನಡೆಸಿಲ್ಲ. ಕೆ ಎಸ್ ಆರ್ ಟಿಸಿ ಬಸ್ಸುಗಳು ಮಾತ್ರ ಸಂಚಾರ ನಡೆಸಿದವು. ಆಟೋ ಚಾಲಕರು, ಅಂಗಡಿ ಮುಗ್ಗಟ್ಟುಗಳು, ಎಪಿಎಂಸಿ ವರ್ತಕರು, ಹಮಾಲರು,ಬೀದಿ ಬದಿ ವ್ಯಾಪಾರಿಗಳು , ಡಿಎಸ್ ಎಸ್,ಮಧುಗಿರಿ ಬ್ಲಾಕ್ ಕಾಂಗ್ರೆಸ್ ನವರು, ವಕೀಲರ ಸಂಘದವರು, ಹಾಗೂ ಕನ್ನಡ ಪರ ಹಲವು ಸಂಘಟನೆಗಳು ಬೆಂಬಲ ನೀಡಿ ಪಟ್ಟಣದ ಟೌನ್ ಹಾಲ್ ನಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಟಿವಿವಿ ವೃತ್ತ,ನೃಪತುಂಗ ವೃತ್ತ,ಮಿನಿ ವಿಧಾನಸೌದ ರಸ್ತೆ,ಡಬಲ್ ರೋಡ್ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ,ಅಂಬೇಡ್ಕರ್ ಪುತ್ಥಳಿ ಗೆ ಮಾಲಾರ್ಪಣೆ ಮಾಡಿ ದಂಡೂರ ಬಾಗಿಲು ರಸ್ತೆ ಮೂಲಕ ಉಪವಿಭಾಗಾಧಿಕಾರಿ ಕಚೇರಿ ತಲುಪಿ ಪ್ರತಿಭಟನಾ ಭಾಷಣ ನಡೆಸಿದರು.

     ಅಗತ್ಯ ವಸ್ತುಗಳಾದ ಹಣ್ಣು ತರಕಾರಿ ಹಾಲು ಮತ್ತು ಮೆಡಿಕಲ್ ಸ್ಟೋರ್ ಗಳು,ಅಸ್ಪತ್ರೆ,ಬ್ಯಾಂಕುಗಳು, ಸರ್ಕಾರದ ಕಚೇರಿಗಳು ಮಾತ್ರ ತೆರೆಯಲಾಗಿತ್ತು. ಇನ್ನೂಳಿದಂತೆ ನಾಗರಿಕರು ಬೆಂಬಲ ವ್ಯಕ್ತಪಡಿಸಿದ್ದರು.

      ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಜಿ.ಸಿ.ಶಂಕರಪ್ಪ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಪೋರೆಟ್ ಸಂಸ್ಥೆಗಳ ಪರವಾಗಿ ನಿಂತಿದ್ದು, ಹಿಂಬಾಗಿಲ ಮೂಲಕ ಕಾರ್ಮಿಕ ಕಾಯಿದೆಗಳನ್ನು ಜಾರಿಗೆ ತರುವ ಮೂಲಕ ಈ ಸರ್ಕಾರ ರೈತ ಹಾಗೂ ಬಡ ಕೂಲಿ ಕಾರ್ಮಿಕರ ಹೊಟ್ಟೆ ಮೇಲೆ ಹೊಡೆಯಲು ಪ್ರಯತ್ನಿಸುತ್ತಿದೆ. ವಿದ್ಯುತ್ , ಎಪಿಎಂಸಿ ಹಾಗೂ ಬೀಜ ಕಾಯಿದೆಗಳ ತಿದ್ದುಪಡಿ ಮಾಡುವ ಹೊಸ ನಿಯಮಗಳನ್ನು ತರುವುದು ಮತ್ತು ಕೃಷಿ ಭೂಮಿಗೆ ಆಳವಡಿಸಿರುವ ರಾಜ್ಯದ ಸುಮಾರು 30 ಲಕ್ಷ ಪಂಪ್‍ಸೆಟ್ ಬಳಕೆದಾರರು ಬೀದಿಗೆಬೀಳುವ ಪರಿಸ್ಥಿತಿ ನಿರ್ಮಾಣ ವಾಗಿ ಕೃಷಿಯಿಂದ ಹೊರ ಬರುತ್ತಾರೆ. ರೈತ ಉತ್ಪನ್ನಗಳಿಗೆ ಬೆಲೆ ಸಿಗದೆ ಸಾಕಷ್ಟು ತೊಂದರೆ ಎದುರಾಗುತ್ತದೆ. ಆದ್ದರಿಂದ ಸರ್ಕಾರಗಳು ಈ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಮತ್ತು ಜ್ಯೆಲ್ ಬರೋ ಚಳುವಳಿ ನಡೆಸಬೇಕಾದಿತು ಎಂದು ಎಚ್ಚರಿಸಿದರು.

      ಡಿಎಸ್‍ಎಸ್ ಜಿಲ್ಲಾ ಸಂಘಟನಾ ಸಂಚಾಲಕ ದೊಡ್ಡೇರಿಕಣಿಮಯ್ಯ ಮಾತನಾಡಿ, ಉಳುವವನೇ ಭೂಮಿ ಒಡೆಯ ಎಂಬುದನ್ನು ಈ ಸರ್ಕಾರ ಒಪ್ಪದೆ ರೈತರ ಭೂಮಿಗಳನ್ನು ಕಬಳಿಸಲು ಸಂಚು ರೂಪಿಸುತ್ತಿದೆ. ಬಡ ಕಾರ್ಮಿಕ ಹಾಗೂ ರೈತರ ವಿರುದ್ದ ನಿಲ್ಲಲ್ಲು ಹೊರಟಿರುವ ಈ ಸರ್ಕಾರದ ವಿರುದ್ಧ ನಮ್ಮ ಎಲ್ಲಾ ಸಂಘಟನೆಗಳಿಂದ  ಮುಂದಿನ ದಿನಗಳಲ್ಲಿ ವಿಧಾನಸೌಧ ಚಲೋ ಚಳುವಳಿಯನ್ನು ಹಮ್ಮಿಕೊಳ್ಳಲಾಗುವುದು ಎಂದರು.

      ಎಪಿಎಂಸಿ ಮಾಜಿ ಅಧ್ಯಕ್ಷ,ಹಾಲಿ ಸದಸ್ಯ ಮತ್ತು ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಕೃಷ್ಣರೆಡ್ಡಿ ಮಾತಾನಾಡಿ, ಎಪಿಎಂಸಿಗಳಲ್ಲಿ “ಆನ್ಲೈನ್ ಟ್ರೇಡಿಂಗ್’
ಮೂಲಕ ರೈತರಿಗೆ ಅನುಕೂಲವಾಗುತ್ತಿತ್ತು, ಈಗ ತಿದ್ದುಪಡಿ ಮಾಡಿರುವ ರಾಜ್ಯ ಸರ್ಕಾರದ ಕ್ರಮದಿಂದ ರೈತರಿಗೆ ಮಾರಕವಾಗುತ್ತಿದೆ,
ಪತ್ರಿಕಾ ಹೇಳಿಕೆ ನೀಡಿರುವ ಅವರು ಆನ್ಲೈನ್ ಟ್ರೇಡಿಂಗ್ ನಿಂದ ರಾಜ್ಯ ದೇಶದಲ್ಲಿ ಮಾದರಿಯಾಗಿತ್ತು. ಈ ಟ್ರೆಂಡಿಂಗ್ ಬಗ್ಗೆ ನೆರೆ ರಾಜ್ಯದವರು ಅಳವಡಿಸಿಕೊಳ್ಳಲು ಮುಂದಾಗಿದ್ದರು. ಚಂದ್ರಬಾಬು ನಾಯ್ಡು ಆಂಧ್ರ ಸಿಎಂ ಆಗಿದ್ದಾಗ ಕರ್ನಾಟಕ ರಾಜ್ಯದಲ್ಲಿ ಅಧಿಕಾರಿಗಳ ತಂಡ ಕಳುಹಿಸಿ ಸಮೀಕ್ಷೆ ನಡೆಸಿದ್ದರು. ಎಪಿಎಂಸಿ ತಿದ್ದುಪಡಿಯನ್ನು ರಾಜ್ಯ ಸರ್ಕಾರ ತರಾತುರಿಯಲ್ಲಿ ತಿದ್ದುಪಡಿ ಮಾಡುವ ಅವಶ್ಯಕತೆ ಇರಲಿಲ್ಲ. ಈಗಿನ ಕಾಯ್ದೆ ಪ್ರಕಾರ ರೈತರು ಮತ್ತು ವ್ಯಾಪಾರಸ್ಥರ ನಡುವೆ ಬೆಲೆ ನಿಗದಿ ವೇಳೆ ವ್ಯತ್ಯಾಸವಾದರೆ ರೈತರು ಬೆಳೆದ ಬೆಳೆಯನ್ನು ಸಂರಕ್ಷಿಸಲು ಸಾಧ್ಯವೇ ಇಲ್ಲ. ಬೆಲೆ ನಿಗದಿ ವೇಳೆ ಮಾರಾಟಗಾರರಿಂದ ರೈತರು ಮೋಸಕ್ಕೆ ಒಳಗಾಗುವ ಸಂಭವ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು. ಇನ್ನು ಭೂ ಸುಧಾರಣೆ ಕಾಯಿದೆ ತಿದ್ದುಪಡಿಯಿಂದ ಸಣ್ಣ ಹಿಡುವಳಿದಾರರ ಜಮೀನುಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟ ಅನುಭವಿಸುತ್ತಾರೆ. ಇದರಿಂದ ರಿಯಲ್ ಎಸ್ಟೇಟ್ ಉದ್ಯಮದವರಿಗೆ ಲಾಭವಾಗುತ್ತದಷ್ಠೆ, ರೈತರಿಗೆ ಏನೂ ಪ್ರಯೋಜನವಿಲ್ಲ. ಕೊನೆಗೆ ಒಂದಿಂಚೂ ಜಾಗ ಇಲ್ಲದಂತೆ ರೈತ ಬೀದಿಗೆ ಬೀಳುತ್ತಾನೆ. ಹಣವುಳ್ಳವರು ಕೊಳ್ಳುತ್ತಾರೆ ಅಲ್ಪಸ್ವಲ್ಪ ಜಮೀನು ಹೊಂದಿರುವ ರೈತ ತತ್ಕಾಲಕ್ಕೆ ಹಣ ಪಡೆದು ಹಣ ಖರ್ಚಾದ ನಂತರ ಜಮೀನು ಕಳೆದುಕೊಂಡು ಬಡತನದ ಸಂಕೋಲೆ ಕುಟುಂಬವನ್ನು ದೂಡುವಂತಾಗುತ್ತದೆ ಎಂದರು. ಮಾರಾಟ ಮಾಡಿದ ಜಮೀನಿನಲ್ಲಿ ಕೂಲಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಳೆಯ ಜಮೀನ್ದಾರಿ ಪದ್ಧತಿ ಮರು ಕಳಿಸುತ್ತದೆ. ತಾಲೂಕಿನ ಐ.ಡಿ.ಹಳ್ಳಿಯಲ್ಲಿ ಜಮೀನು ಮಾರಾಟ ಮಾಡಿದ ರೈತರು ಇಂದು ನಾಮಧಾರಿ ಸೀಡ್ಸ್ ನಲ್ಲಿ ಕೂಲಿ ಕೆಲಸ ಮಾಡುತ್ತಿರುವುದೇ ನಿದರ್ಶನವೆಂದರೆ.

      ಬಂದ್ ಗೆ ವಕೀಲರ ಸಂಘದ ಅಧ್ಯಕ್ಷರು ,ಪದಾಧಿಕಾರಿಗಳು ಹಾಗೂ ವಕೀಲರುಗಳು ಭಾಗವಹಿಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಆರ್. ರಾಜಗೋಪಾಲ್, ಜೀವಿಕ ಸಂಘಟನೆಯ ಮಂಜುನಾಥ್, ಡಿಎಸ್‍ಎಸ್ ನ ಜಿ.ಬಿ .ಮಲೇ ರಂಗಪ್ಪ ಸಿಐಟಿಯುವಿನ ಪಾರ್ವತಮ್ಮ ,ಡಿ ಎಸ್ ಎಸ್ ನ ಜಗನ್ನಾಥ್ ,ಕರವೇ ಶಿವಕುಮಾರ್ ,ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಗುರುರಾಜ್ ,ಗೌರವಾಧ್ಯಕ್ಷ ಚಿಕ್ಕರಂಗಯ್ಯ ,ಕಾಂಗ್ರೆಸ್ನ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸೈಯದ್ ಅಲ್ಲಾವುದ್ದೀನ್ ,ರೈತ ಮುಖಂಡರುಗಳಾದ ನಿರ್ ಕಲ್ ರಾಮಕೃಷ್ಣಪ್ಪ, ಡಿ.ಆರ್. ರಾಜಶೇಖರ್ ,ದೊಡ್ಡಮಾಳಯ್ಯ ,ಭೂಮಿ ಮತ್ತು ವಸತಿ ವಂಚಿತ ಹೋರಾಟ ಸಮಿತಿಯ ಹಂದ್ರಾಳು ನಾಗಭೂಷಣ್, ಜಿಪಂ ಸದಸ್ಯ ಚೌಡಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಬಿ. ಮರಿಯಣ್ಣ ,ಪುರಸಭಾ ಮಾಜಿ ಅಧ್ಯಕ್ಷರುಗಳಾದ ಎಂ. ಕೆ. ನಂಜುಂಡಯ್ಯ, ಮೊಹಮ್ಮದ್ ಅಯೂಬ್,ಎಂ.ವಿ. ಗೋವಿಂದರಾಜು, ತಾಪಂ ಮಾಜಿ ಅಧ್ಯಕ್ಷ ಎಸ್.ಆರ್. ಮಂಜುನಾಥ್ ,ಮಾಜಿಸದಸ್ಯ ಶ್ರೀನಿವಾಸ್ ರೆಡ್ಡಿ, ಸಿದ್ದಾಪುರ ವಿಎಸ್‍ಎಸ್‍ಎನ್ ಅಧ್ಯಕ್ಷ ವೀರಣ್ಣ, ಮುಖಂಡ ಕಾಳೇಗೌಡ ಇತರರು ಹಾಜರಿದ್ದರು.

(Visited 6 times, 1 visits today)