ತುಮಕೂರು : 

    ಲಿಕ್ಕರ್ ಮಾರಾಟ ಮಾಡುವವರಿಗೆ ಅಬಕಾರಿ, ಪೆÇಲೀಸ್ ಇಲಾಖೆಯಿಂದ ಕಿರುಕುಳ ಹೆಚ್ಚಿರುವುದಲ್ಲದೆ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ತುಮಕೂರು ಜಿಲ್ಲಾ ಮದ್ಯ ಮಾರಾಟಗಾರ ಸಂಘದ ಕಾರ್ಯದರ್ಶಿ ಎಸ್.ಆರ್.ಜಗದೀಶ್ ಆರೋಪಿಸಿದರು. 

      ಮದ್ಯ ಮಾರಾಟಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತುಮಕೂರು ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

      ಸರ್ಕಾರ ಆನ್ ಲೈನ್ ಮೂಲಕ ಮದ್ಯಮಾರಾಟ ಮಾಡುವ ಪ್ರಸ್ತಾವನೆಯನ್ನು ಕೈಬಿಡುವಂತೆ 2018ರಲ್ಲಿಯೇ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿ ಮನವಿ ಸಲ್ಲಿಸಿದ್ದರು, 2020ರಲ್ಲಿ ಹಿಪ್ ಬಾರ್ ಪ್ರೈ.ಲಿ ಒತ್ತಡದ ಮೇಲೆ ಪುನಃ ಪ್ರಸ್ತಾವ ತರುವ ಮೂಲಕ ಮದ್ಯ ಸನ್ನದುದಾರರ ಉದ್ಯೋಗವನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು.

      ಸರ್ಕಾರ ಆನ್ ಲೈನ್ ಮದ್ಯ ಮಾರಾಟಕ್ಕ ಒಪ್ಪಿಗೆ ನೀಡದ ಬಗ್ಗೆ ಹಿಪ್ ಬಾರ್ ಪ್ರೈ.ಲಿ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ 2018 ರದ್ದು ಮಾಡಿದ್ದು, ರಿಟ್ ಅಫೀಲು ತನಿಖೆಗೆ ಬಾಕಿ ಇದೆ, ಪದೆ ಪದೇ ಹಿಪ್ ಬಾರ್ ಪ್ರೈ.ಲಿ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದರೆ, ಒತ್ತಡವನ್ನು ಪರಿಗಣಿಸದೇ ನ್ಯಾಯಾಲಯದಲ್ಲಿ ಪ್ರಕರಣವನ್ನು ವಜಾಗೊಳಿಸಲು ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.

      2012ರ ಜನಗಣತಿ ಪ್ರಕಾರ 5,000ಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮಗಳಲ್ಲಿ ಹಾದು ಹೋಗಿರುವ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಿ.ಎಲ್-6ಎ ಮತ್ತು ಸಿ.ಎಲ್.-7 ಸನ್ನದು ಪ್ರಾರಂಭಿಸಲು ನೀಡಿರುವ ಆದೇಶವನ್ನು ರದ್ದುಗೊಳಿಸಬೇಕು, ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿ ಸನ್ನದು ಪ್ರಾರಂಭ ಮಾಡಲು ಅನುಮತಿ ನೀಡಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

       ಕಳೆದ 12 ವರ್ಷಗಳಲ್ಲಿ 968 ಸಿ.ಎಲ್-7 ಸನ್ನದುಗಳು ಜಾಸ್ತಿಯಾಗಿದ್ದು, 1990ರಿಂದ ಹೊಟೇಲ್ ಮತ್ತು ಬೋರ್ಡಿಂಗ್ ಹೌಸ್ ಗಳಿಗೆ ಸಿ.ಎಲ್-7 ಸನ್ನದು ಪ್ರಾರಂಭಿಸಲಾಗಿತ್ತು, 2002ರಲ್ಲಿ ಗ್ರಾಮಾಂತರ ಪ್ರದೇಶಕ್ಕೆ 20, ನಗರ ಪ್ರದೇಶಕ್ಕೆ 30 ರೂಂಗಳು ಇರುವ ಬೋರ್ಡಿಂಗ್ ಹೌಸ್ ಗೆ ಸಿ.ಎಲ್-7 ಸನ್ನದು ನೀಡಲು ಸರ್ಕಾರ ಆದೇಶ ನೀಡಿದ್ದರು ಸಹ ಮಾನದಂಡಗಳನ್ನು ಅನುಸರಿಸದೇ ಮಂಜೂರಾತಿ ನೀಡಲಾಗುತ್ತಿದೆ ಎಂದು ಆರೋಪಿಸಿದರು.

      2018ರ ಪೂರ್ವದಲ್ಲಿ ಇದ್ದ ನಿಯಮದಂತೆ ಸಿ.ಎಲ್-7 ಸನ್ನದುಗಳನ್ನು ಪ್ರವಾಸೋದ್ಯಮ ನೀತಿ ಪ್ರಕಾರ ಗುರುತಿಸಲ್ಪಟ್ಟಿರುವ ಪ್ರದೇಶಕ್ಕೆ ಮಾತ್ರ ಸಿ.ಎಲ್-7 ಸನ್ನದು ನೀಡಬೇಕು, ಮಂಜೂರಾತಿ ನೀಡಿರುವ ಸನ್ನದುಗಳನ್ನು ಮರುಪರಿಶೀಲನೆಗೆ ಒಳಪಡಿಸಿ, ಮಾನದಂಡ ಅನುಸರಿಸದೇ ಸನ್ನದು ನೀಡಲು ಶಿಪಾರಸ್ಸು ಮಾಡಿರುವವರ ಮೇಲೆ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

      2009ರಲ್ಲಿ ರಾಜ್ಯದಲ್ಲಿ ನವೀಕರಿಸದೆ ಸ್ಥಗಿತಗೊಂಡಿದ್ದ 463 ಸನ್ನದುಗಳನ್ನು ಎಂಎಸ್‍ಐಎಲ್ ಗೆ ಮಂಜೂರಾತಿ ಮಾಡಲಾಗಿತ್ತು, 2016ರ ನಂತರ ಹೆಚ್ಚುವರಿಯಾಗಿ 900 ಅಂಗಡಿಗಳನ್ನು ಮಂಜೂರು ಮಾಡಲಾಗಿದೆ, ಕೋಟಾ ನಿಗದಿ ಮಾಡದೇ ಅಂಗಡಿಗಳಿಗೆ ಅನುಮತಿ ನೀಡಲಾಗಿದ್ದು, ಸಿ.ಎಲ್-2ಗೂ, ಎಂಎಸ್‍ಐಎಲ್ ಗೂ ಯಾವುದೇ ವ್ಯತ್ಯಾಸವಿಲ್ಲ, ಹಾಗಾಗಿ ಹೊಸ ಎಂಎಸ್‍ಐಎಲ್ ಸನ್ನದುಗಳನ್ನು ತೆರೆಯುವುದನ್ನು ತಡೆ ಹಿಡಿದು, 2020-21ನೇ ಸಾಲಿಗೂ ರದ್ದುಗೊಳಿಸಬೇಕು, 2019ರಲ್ಲಿ ನ್ಯಾಯಾಲಯ ನೀಡಿರುವ ಆದೇಶದ ಗೊಂದಲ ಬಗೆ ಹರಿಸಲು ಒತ್ತಾಯಿಸಿದರು.

      ಮದ್ಯ ಮಾರಾಟಗಾರರ ಸಮಸ್ಯೆಗಳನ್ನು ಬಗೆ ಹರಿಸಲು ಧರಣಿ ಹೋರಾಟಕ್ಕೆ ಮುಂದಾಗಿದ್ದು, ಅಬಕಾರಿ ಸಚಿವರು ಬಜೆಟ್ ನಲ್ಲಿ ಲೋಪವನ್ನು ಬಗೆ ಹರಿಸುವ ಭರವಸೆ ನೀಡಿದ್ದರಿಂದ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳ ಗಮನ ಸೆಳೆಯಲು ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.

      ತುಮಕೂರು ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಡಿ.ಎಸ್.ಕುಮಾರ್, ಉಪಾಧ್ಯಕ್ಷ ಆನಂದ್ ಕುಮಾರ್, ಕಾರ್ಯದರ್ಶಿ ಎಸ್.ಆರ್.ಜಗದೀಶ್, ಸಿದ್ದಪ್ಪ, ಸಂಜೀವ್ ಕುಮಾರ್, ಮಲ್ಲಸಂದ್ರ ಶಿವಣ್ಣ, ವೇದಮೂರ್ತಿ, ಪರಮೇಶ್, ವೆಂಕಟೇಶ್ ಹೆಚ್.ಆರ್, ವೈ.ಎನ್.ನಾಗರಾಜು, ನಟರಾಜ್ ಇತರರು ಉಪಸ್ಥಿತರಿದ್ದರು.

(Visited 13 times, 1 visits today)