ತುಮಕೂರು:

      ಬೆಂಗಳೂರು ನಗರ, ಜ್ಞಾನ ಭಾರತಿ ಪೊಲೀಸ್ ಠಾಣಾ ಪಿಎಸ್‍ಐ ಬವರಾಜ್ ಅವರಿಂದ ವಕೀಲರಾದ ನವೀನ್ ಕುಮಾರ್ ಅವರ ಮೇಲೆ ಹಲ್ಲೆ ಮಾಡಿ ದೌರ್ಜನ್ಯವೆಸಗಿರುವುದನ್ನು ಖಂಡಿಸಿ ತುಮಕೂರು ಜಿಲ್ಲಾ ವಕೀಲರ ಸಂಘದಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಪಿಎಸ್‍ಐ ಬಸವರಾಜು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಪತ್ರ ಸಲ್ಲಿಸಲಾಯಿತು.

      ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ಕಕ್ಷಿದಾರರ ಜೊತೆ ದೂರು ನೀಡಲು ಹೋದಾಗ ಪಿಎಸ್‍ಐ ಬಸವರಾಜು ಅವರು ವಕೀಲರಾದ ನವೀನ್ ಕುಮಾರ್ ಅವರೊಂದಿಗೆ ಅನುಚಿತವಾಗಿ ವರ್ತಿಸಿ ಹಿಗ್ಗಾಮುಗ್ಗ ಥಳಿಸಿ ಅವಾಶ್ಚ್ಯ ಶಬ್ದಗಳನ್ನು ಬಳಸಿ ನಿಂದಿಸಿ ದೈಹಿಕ ಹಲ್ಲೆ ಮಾಡಿರುತ್ತಾರೆ. ಸದರಿ ಘಟನೆಯನ್ನು ನಮ್ಮ ತುಮಕೂರು ಜಿಲ್ಲಾ ವಕೀಲರ ಸಂಘವು ತೀವ್ರವಾಗಿ ಖಂಡಿಸುತ್ತದೆ.

      ಸದರಿ ವಿಚಾರವಾಗಿ ನ.12 ರಂದು ತುಮಕೂರಿನ ಜಿಲ್ಲಾ ವಕೀಲರ ಸಂಘದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನಡೆದ ತೀರ್ಮಾನದಂತೆ ನ.13 ರಂದು ನಡೆಯುವ ನ್ಯಾಯಾಲಯದ ಎಲ್ಲಾ ಕಾರ್ಯಕಲಾಪಗಳಿಂದ ಹೊರಗುಳಿಯಲು ತೀರ್ಮಾನಿಸಲಾಯಿತು ಹಾಗೂ ವಕೀಲರ ಮೇಲೆ ದೈಹಿಕ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬೆಂಗಳೂರು ನಗರದ ಜ್ಞಾನಭಾರತಿ ಪೊಲೀಸ್ ಠಾಣೆಯ ಪಿಎಸ್‍ಐ ಬಸವರಾಜು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಆಯುಕ್ತರ ಗಮನಕ್ಕೆ ತಂದು ಸದರಿ ಪಿಎಸ್‍ಐ ಅವರನ್ನು ಕೂಡಲೇ ಅಮಾನತು ಮಾಡುವಂತೆ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

      ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಜೆ.ಕೆ.ಅನಿಲ್, ಉಪಾಧ್ಯಕ್ಷ ಹರೀಶ್‍ಬಾಬು, ಕಾರ್ಯದರ್ಶಿ ಡಿ.ಆರ್.ದೇವರಾಜು, ಸಹ ಕಾರ್ಯದರ್ಶಿ ಎನ್.ಆರ್.ಲೋಕೇಶ್, ಖಜಾಂಚಿ ಆರ್.ಪಾತಣ್ಣ, ಸದಸ್ಯರುಗಳಾದ ಡಿ.ಎ.ಜಗದೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

(Visited 8 times, 1 visits today)