ತಿಪಟೂರು :

      ಇದು ಸ್ಪರ್ಧಾತ್ಮಕ ಯುಗವಾಗಿದ್ದು, ವಿದ್ಯಾರ್ಥಿಗಳು ಕಲಿಕೆಯ ಹಂತದಲ್ಲೇ ಶ್ರದ್ಧೆ ಮತ್ತು ಏಕಾಗ್ರತೆಯಿಂದ ಜ್ಞಾನದ ಅರಿವನ್ನು ಹೆಚ್ಚಿಸಿಕೊಂಡು ಸಾಧನೆಯ ಹಾದಿಯಲ್ಲಿ ಮುನ್ನುಗ್ಗಬೇಕೆಂದು ಗುರುಕುಲಾನಂದಾಶ್ರಮದ ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

      ನಗರದ ಗುರುಕುಲ ಕಲ್ಯಾಣ ಮಂಟಪದಲ್ಲಿ ಜಾಗೃತಿ ಸೇವಾಸಂಸ್ಥೆಯ ವತಿಯಿಂದ ಮಂಗಳವಾರ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಲೈಫ್ ಎಂಪವರ್‍ಮೆಂಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು ತಂದೆ-ತಾಯಿಗಳಿಗೆ ಪರೀಕ್ಷೆಯಲ್ಲಿ ತಮ್ಮ ಮಕ್ಕಳು ಉತ್ತಮ ಫಲಿತಾಂಶ ಪಡೆಯಬೇಕೆಂಬ ಆಸೆ ಇರುತ್ತದೆ. ಅದರಂತೆ ಮಕ್ಕಳು ತಂದೆ ತಾಯಿಗಳ ಆಸೆ ಆಕಾಂಕ್ಷೆಗಳನ್ನು ಈಡೇರಿಸಬೇಕು. ಯುವಜನಾಂಗದಲ್ಲಿ ಏಕಾಗ್ರತೆಯ ಅರಿವು ಕಡಿಮೆಯಾಗುತ್ತಿದ್ದು, ಧ್ಯಾನ, ಯೋಗದಿಂದ ಏಕಾಗ್ರತೆಯನ್ನು ಸಾಧಿಸಿ ಸನ್ಮಾರ್ಗದತ್ತ ಶ್ರಮಿಸಬೇಕು. ಮನುಷ್ಯ ತನ್ನನು ತಾನು ರಕ್ಷಣೆ ಮಾಡಿಕೊಳ್ಳುವುದು ಅಂತರಂಗದ ಬುದ್ದಿಯಿಂದಲೆ. ಬುದ್ದಿಯಿಂದ ತಾನು ಅನುಭವ ಹೊಂದುವುದು ಬಹಳ ಶ್ರೇಷ್ಠ. ಈ ಬುದ್ದಿ ವಿಕಾಸವಾಗಬೇಕಾದರೆ ಏಕಾಗ್ರತೆ ಅಗತ್ಯ. ಇಲ್ಲದಿದ್ದರೆ ಏನನ್ನೂ ಸಾಧನೆ ಮಾಡುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಏಕಾಗ್ರತೆಯನ್ನು ಅಳವಡಿಸಿಕೊಳ್ಳುವ ಮೂಲಕ ಸಾಧನೆ ಮಾಡಿ ದೇಶಕ್ಕೆ ತಮ್ಮದೇ ಆದವಿಶೇಷ ಸಾಧನೆಗಳ ಕೊಡುಗೆ ನೀಡಬೇಕೆಂದರು.

      ಬೆಂಗಳೂರು ಮ್ಯಾನೇಜ್‍ಮೆಂಟ್‍ಗುರು ಖ್ಯಾತಿಯ ಆರ್.ಹರೀಶ್ ಮಾತನಾಡಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಜ್ಞಾನ ಬಳಸಿಕೊಂಡು ಹೇಗೆ ಸಾಧಿಸಬೇಕು. ಪರೀಕ್ಷೆಗಳಲ್ಲಿ ಹೇಗೆ ಹೆಚ್ಚಿನ ಅಂಕಗಳನ್ನು ಗಳಿಸಿಕೊಳ್ಳಲು ಅಭ್ಯಾಸಮಾಡಬೇಕು. ಪರೀಕ್ಷೆ ಮತ್ತು ಜೀವನವನ್ನು ಯಾವುದೇ ಒತ್ತಡಗಳಿಲ್ಲದೆ ಎದುರಿಸಿ ಗೆಲ್ಲಬೇಕು. ಹಾಗೆಯೇ ವಿದ್ಯಾರ್ಥಿಗಳು ಯಶಸ್ಸನ್ನು ಯಾವ ರೀತಿ ಗಳಿಸಿಕೊಳ್ಳಬೇಕೆಂಬುದರ ಬಗ್ಗೆ ಸೂತ್ರಗಳನ್ನು ತಿಳಿಸಿಕೊಟ್ಟರು.

      ಕಾರ್ಯಕ್ರಮದಲ್ಲಿ ಜಾಗೃತಿ ಸೇವಾಸಂಸ್ಥೆಯ ಅಧ್ಯಕ್ಷ ಸಿ.ಎಸ್. ರೇಣುಕಾರಾಧ್ಯ, ಸದಸ್ಯರಾದ ನಾಗೇಂದ್ರ ಕುಮಾರಗುಪ್ತ, ಪಿ.ಎಂ. ಹರೀಶ್, ಟಿ.ವಿ. ರಕಿಣ್, ಎಸ್. ಕಿರಣ್, ಸಿದ್ದಲಿಂಗಸ್ವಾಮಿ, ಟಿ.ಎಂ. ಗಣೇಶ್, ಸಿ.ಎಂ. ಪ್ರಸನ್ನಕುಮಾರ್, ಷಡಕ್ಷರಿ, ನಟರಾಜು ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

(Visited 16 times, 1 visits today)