ತುಮಕೂರು:

      ನಿನ್ನೆ ನಿಧನರಾದ “ಪದ್ಮಶ್ರೀ” ಪುರಸ್ಕತೆ ಡಾ: ಸೂಲಗಿತ್ತಿ ನರ ಸಮ್ಮ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯನ್ನು ನಗರದ ಗಂಗಸಂದ್ರದಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಸಂಜೆ ನೆರವೇರಿಸಲಾಯಿತು.

      ಇದಕ್ಕೂ ಮುನ್ನ ಸಚಿವರಾದ ವೆಂಕಟರಮಣಪ್ಪ, ಯು.ಟಿ.ಖಾದರ್, ಎಸ್.ಆರ್.ಶ್ರೀನಿವಾಸ್, ಆರ್.ಬಿ.ತಿಮ್ಲಾಪುರೆ, ಮಾಜಿ ಸಚಿವರಾದ ಎಚ್. ಆಂಜನೇಯ, ಸೊಗಡು ಶಿವಣ್ಣ, ಸಂಸದರಾದ ಎಸ್.ಪಿ. ಮುದ್ದಹನುಮೇಗೌಡ, ಚಂದ್ರಪ್ಪ, ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ, ತಿಮ್ಮರಾಯಪ್ಪ, ಶಾಸಕರಾದ ಜ್ಯೋತಿಗಣೇಶ್, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಲತಾ ರವಿಕುಮಾರ್, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಮಾಜಿ ಸಂಸದ ಜಿ.ಎಸ್.ಬಸವರಾಜು, ಎಲೆರಾಂಪುರ ಮಠದ ಹನುಮಂತನಾಥ ಸ್ವಾಮೀಜಿ ಸೇರಿದಂತೆ ಹಲವಾರು ಗಣ್ಯರು ಹಾಗೂ ಅಭಿಮಾನಿಗಳು ನಗರದ ಗಾಜಿನ ಮನೆಯಲ್ಲಿಡಲಾಗಿದ್ದ ಮೃತ ಸೂಲಗಿತ್ತಿ ನರಸಮ್ಮ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.

      ಸೂಲಗಿತ್ತಿ ನರಸಮ್ಮರವರು ಆಗಿನ ಕಾಲದಲ್ಲೇ ಆರೋಗ್ಯದ ಬಗ್ಗೆ ಹೆಚ್ಚಿನ ಮಹತ್ವ ಹೊಂದಿದ್ದರಲ್ಲದೆ, ಅನಕ್ಷರಸ್ಥರಾಗಿದ್ದರೂ ತಮ್ಮ ಆರೋಗ್ಯದ ನೈಪುಣ್ಯತೆಯಿಂದ ಸಮಾಜದ ಒಳಿತಿಗಾಗಿ ಶ್ರಮಿಸಿದ್ದರು. ಇವರು ಸಮಾಜಕ್ಕೆ ನೀಡಿದ ವಿಶೇಷ ಕೊಡುಗೆಯನ್ನು ಗುರುತಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿತ್ತು. ಇವರ ಅಗಲಿಕೆಯನ್ನು ಭರಿಸುವ ಶಕ್ತಿ ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಅಂತಿಮ ದರ್ಶನ ಪಡೆದ ಗಣ್ಯರು ಸಂತಾಪ ವ್ಯಕ್ತಪಡಿಸಿದರು.

      ಸೂಲಗಿತ್ತಿ ನರಸಮ್ಮ ಅವರ ಪಾರ್ಥೀವ ಶರೀರಕ್ಕೆ ಹೂ-ಗುಚ್ಚವಿಟ್ಟು, ಗೌರವ ಸಲ್ಲಿಸಿ ನಂತರ ಮಾತನಾಡಿದ ಸಂಸದ ಎಸ್.ಪಿ. ಮುದ್ದಹನುಮೇಗೌಡ, ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಕೃಷ್ಣಾಪುರವೆಂಬ ಪುಟ್ಟ ಗ್ರಾಮದಲ್ಲಿ ಹುಟ್ಟಿ ತನ್ನ ಸೇವೆಯ ಮೂಲಕವೇ ಜನರ ಮನಸ್ಸನ್ನು ಗೆದ್ದು, 98 ವರ್ಷಗಳ ಕಾಲ ಸಾರ್ಥಕ ಜೀವನವನ್ನು ನಡೆಸಿ ವೈದ್ಯಕೀಯ ಕ್ಷೇತ್ರದಲ್ಲಿ ಪರಿಣಿತರು ಮಾಡದಂತಹ ಅನನ್ಯ ಸೇವೆಯನ್ನು ಮಾಡಿದ್ದಾರೆ ಎಂದರು.

      ಮೃತರ ಅಂತ್ಯಕ್ರಿಯೆಯನ್ನು ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಅವರು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಿಕೊಟ್ಟರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ದಿವ್ಯಾ ಗೋಪಿನಾಥ್, ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಉಪವಿಭಾಗಾಧಿಕಾರಿ ಶಿವಕುಮಾರ್, ತಹಶೀಲ್ದಾರ್ ನಾಗರಾಜ್ ಸೇರಿದಂತೆ ಹಲವು ಅಧಿಕಾರಿಗಳು ಅಂತಿಮ ದರ್ಶನ ಪಡೆದರು.

(Visited 35 times, 1 visits today)