ಗುಬ್ಬಿ :

      ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡದ ಸರ್ಕಾರ ರೈತರ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ಕೊಡದೆ ಬದುಕು ದುಸ್ಥರ ಮಾಡಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ದೂರಿದರು.
ಪಟ್ಟಣದ ಕೃಷಿ ಇಲಾಖೆಯಲ್ಲಿ ಆಯೋಜಿಸಲಾಗಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕುಡಿವ ನೀರು ಹಾಗೂ ಮದ್ಯದ ಬಾಟಲ್‍ಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವ ಸರ್ಕಾರ ರೈತರ ಬದುಕಿಗೆ ಆಧಾರವಾದ ಹಾಲು, ಹಣ್ಣು ತರಕಾರಿಗಳಿಗೆ ಬೆಲೆ ನಿಗದಿ ಮಾಡಲಾಗುತ್ತಿಲ್ಲ ಎಂದರು.

      ದೇಶದಲ್ಲಿ ಶೇ.65 ರಷ್ಟು ಉದ್ಯೋಗ ಸೃಷ್ಟಿಸಿರುವ ಕೃಷಿ ಜಮೀನುಗಳನ್ನು ಅಭಿವೃದ್ದಿ ಹೆಸರಿನಲ್ಲಿ ಭೂ ಸ್ವಾಧೀನ ಕಾಯಿದೆ ಜಾರಿ ಮಾಡುತ್ತಾ ಸರ್ಕಾರ ಸಿರಿವಂತರ ಕೈವಶವಾಗಿದೆ. ಆಹಾರ ಕೊರತೆ ಎದುರಿಸಬೇಕಾದ ದುಸ್ಥಿತಿ ಅರಿತು ಕೂಡ ಭೂಮಿ ವರ್ಗಾಯಿಸುವ ಪ್ರಕ್ರಿಯೆ ನಿರಂತರ ನಡೆಸುತ್ತಿದ್ದಾರೆ ಎಂದ ಅವರು ಖಾತೆದಾರನಾಗಿರದ ರೈತರು ಆತ್ಮಹತ್ಯೆಗೆ ಶರಣಾದ ಪ್ರಕರಣಗಳು ಸಾಕಷ್ಟಿದೆ. ಇಂತಹ ರೈತ ಕುಟುಂಬವನ್ನು ಬೀದಿಗೆ ತರಲಾಗುತ್ತಿದೆ. ಖಾಸಗಿ ಸಾಲ ಪಡೆದು ಸಾವನ್ನಪ್ಪಿದ ರೈತರ ಬಗ್ಗೆ ಕೂಡ ನಿರ್ಲಕ್ಷ್ಯ ತೋರಿರುವುದು ಸರಿಯಲ್ಲ. 10 ಲಕ್ಷ ರೂಗಳ ಪರಿಹಾರದೊಂದಿಗೆ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಉದ್ಯೋಗ ಕಲ್ಪಿಸಬೇಕು ಎಂದು ಆಗ್ರಹಿಸಿದರು.

      ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಎಸ್.ಆರ್.ಜಗದೀಶಯ್ಯ ಮಾತನಾಡಿ ಸಾವಯಮ ಇಂಗಾಲದ ಕೊರತೆ ಎದುರಿಸುತ್ತಿರುವ ಮಣ್ಣಿನ ಜೀವ ಕಾಪಾಡುವ ಕೆಲಸ ತುರ್ತು ಮಾಡಬೇಕಿದೆ. ನಮ್ಮ ಸ್ಥಳೀಯ ಸಂಪನ್ಮೂಲ ಬಳಸಿ ಸತ್ವ ತುಂಬುವ ಜತೆಗೆ ಯೋಜನ ಬದ್ದ ಬೇಸಾಯ ನಡೆಸುವ ಬಗ್ಗೆ ಚಿಂತಿಸಬೇಕಿದೆ. ಸರ್ಕಾರ ಕೃಷಿಗೆ ಪ್ರಾದಾನ್ಯತೆ ನೀಡಿ ಕೃಷಿಗೆ ಪ್ರೊತ್ಸಾಹ ಯೋಜನೆ ರೂಪಿಸಬೇಕು ಎಂದರು.

      ಸಹಾಯಕ ಕೃಷಿ ನಿರ್ದೇಶಕ ಕೆಂಪಚೌಡಯ್ಯ ಮಾತನಾಡಿ ತಾಲ್ಲೂಕಿನಲ್ಲಿ ಕೃಷಿಕರ ಪರ ನಿಂತ ಇಲಾಖೆ ಎಲ್ಲಾ ಸವಲತ್ತು ಒದಗಿಸಲಾಗುತ್ತಿದೆ. ಮಳೆಯು ಸಹ ಸಮಯಕ್ಕೆ ಸರಿಯಾಗಿ ಬಾರದೆ ರೈತರು ಪರದಾಡುವಂತಾಗುತ್ತಿದೆ. ಇಂತಹ ಸಮಯದಲ್ಲಿ ಇಲಾಖೆ ರೈತ ಪರ ನಿಂತಿದೆ ಎಂದರು.

      ತಾಪಂ ಉಪಾಧ್ಯಕ್ಷೆ ಜಿ.ಕಲ್ಪನಾ, ಪಪಂ ಸದಸ್ಯ ಸಿ.ಮೋಹನ್, ಕೃಷಿಕ ಸಮಾಜದ ಅಧ್ಯಕ್ಷ ಶಿವಾನಂದಯ್ಯ, ಸಹಾಯಕ ತೋಟಗಾರಿಕಾ ನಿರ್ದೇಶಕ ರಾಜಪ್ಪ, ಕೃಷಿ ಅಧಿಕಾರಿಗಳಾದ ಶಿವಣ್ಣ, ಕಲ್ಲೇಶ್ ಇತರರು ಇದ್ದರು.
ಡಿ.24 ಗುಬ್ಬಿ ಫೋಟೋ 01: ಗುಬ್ಬಿ ಪಟ್ಟಣದ ಕೃಷಿ ಇಲಾಖೆಯಲ್ಲಿ ಆಯೋಜಿಸಲಾಗಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿದರು.

(Visited 51 times, 1 visits today)