ತುಮಕೂರು:

      ಕೇಂದ್ರ ಸರ್ಕಾರ ಸಹಕಾರ ಸಂಸ್ಥೆಗಳ ಮೇಲೆ ಆದಾಯ ತೆರಿಗೆ, ಟಿಡಿಎಸ್ ಹಾಗೂ ಜಿಎಸ್ಟಿ ವಿಧಿಸಿರುವುದನ್ನು ಖಂಡಿಸಿ ಕರ್ನಾಟಕ ಸ್ಟೇಟ್ ಕೋ-ಆಪರೇಟಿವ್ ಸೊಸೈಟೀಸ್ ಅಸೋಸಿಯೇಷನ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

      ಈ ವೇಳೆ ಮಾತನಾಡಿದ ರಾಜ್ಯ ಸಂಚಾಲಕ ಕೆ.ಎನ್.ಮಂಜುನಾಥ್ ಅವರು, ದೇಶದ ಕೃಷಿಕರು, ಮಧ್ಯಮ ವರ್ಗದವರಿಗೆ ಸೇವೆ ನೀಡುವ ಮೂಲಕ ದೇಶದ ಆರ್ಥಿಕ ವ್ಯವಸ್ಥೆಗೆ ಅತ್ಯಮೂಲ್ಯ ಕೊಡುಗೆಯನ್ನು ನೀಡಿರುವ ಸಹಕಾರಿ ಕ್ಷೇತ್ರದ ಮೇಲೆ ಕೇಂದ್ರ ಸರ್ಕಾರ ಕ್ರಮ ಆಕ್ರಮಣಕಾರಿಯಾಗಿದೆ ಎಂದರು.

      ಸಹಕಾರ ಕ್ಷೇತ್ರದ ಮೇಲೆ ನಿಯಂತ್ರಣವನ್ನು ಹಾಕುವ ಮೂಲಕ ಕ್ಷೇತ್ರದ ಬೆಳವಣಿಗೆ ಕುಂಠಿತವಾಗುತ್ತಿದ್ದು, ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರದ ಮೇಲೆ ಪ್ರಹಾರ ಮಾಡುವುದನ್ನು ನಿಲ್ಲಿಸಬೇಕು, ಕೇಂದ್ರ ಸರ್ಕಾರದ ಈ ನೀತಿಯಿಂದ ರಾಷ್ಟ್ರದಲ್ಲಿರುವ 52 ಸಾವಿರ ಸಹಕಾರ ಸಂಸ್ಥೆಗಳ ಬೆಳವಣಿಗೆಗೆ ತೊಂದರೆಯಾಗಲಿದೆ ಎಂದು ಆಗ್ರಹ ವ್ಯಕ್ತಪಡಿಸಿದರು.

      ಸಾಮಾನ್ಯ ಜನರಲ್ಲಿಯೂ ಉಳಿತಾಯ ಮನೋಭಾವನೆಯನ್ನು ಪ್ರೇರೇಪಿಸುವುದಕ್ಕಾಗಿ ಹುಟ್ಟಿಕೊಂಡ ಸಹಕಾರಿ ಕ್ಷೇತ್ರದ ಮೇಲೆ ಕೇಂದ್ರ ಸರ್ಕಾರ ಒಂದರ ಮೇಲೊಂದು ಪ್ರಹಾರ ಮಾಡುತ್ತಿದ್ದು, ಆದಾಯ ತೆರಿಗೆ, ಟಿಡಿಎಸ್, ಜಿಎಸ್ಟಿ ಮೂಲಕ ಸಹಕಾರಿ ಬೆಳವಣಿಗೆಗೆ ಮಾರಕವಾಗುವಂತಹ ಕಾನೂನು ಜಾರಿಗೆ ತಂದಿದ್ದು, ಈ ಕಾನೂನುಗಳನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

      ಅತ್ಯಂತ ಸಮರ್ಥವಾಗಿ ಸಹಕಾರಿ ರಂಗ ಕಾರ್ಯನಿರ್ವಹಿಸುತ್ತಿದ್ದು, ಜನರ ಹಣವನ್ನು ಉಳಿಸಿ, ಸಂಸ್ಥೆಗಳನ್ನು ಬೆಳೆಸಲಾಗಿದೆ, ಅಂತಹ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಅಂಕುಶ ಹಾಕುವ ರೀತಿ ಕಾನೂನುಗಳನ್ನು ಜಾರಿಗೆ ತರುತ್ತಿದ್ದು, ಇಂತಹ ಕಾಯ್ದೆಗಳಿಂದ ಸಹಕಾರಿ ಕ್ಷೇತ್ರ ಉಳಿಯುವುದು ಕಷ್ಟವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಸಹಕಾರಿ ಕ್ಷೇತ್ರದಲ್ಲಿ ಕೋಟ್ಯಾಂತರ ಜನರು ಸದಸ್ಯರು ಭಾಗಿಯಾಗಿದ್ದು, ಲಕ್ಷಾಂತರ ಉದ್ಯೋಗ ಸೃಷ್ಠಿಸುತ್ತಿರುವ ಈ ಕೇತ್ರದ ಮೇಲೆ ವಿಧಿಸಿರುವ ಆದಾಯ ತೆರಿಗೆ, ಟಿಡಿಎಸ್, ಜಿಎಸ್‍ಟಿಗಳನ್ನು ಕೇಂದ್ರ ಸರ್ಕಾರ ಹಿಂಪಡೆಯುವ ಮೂಲಕ ಸಹಕಾರಿ ಕ್ಷೇತ್ರಗಳ ಬೆಳವಣಿಗೆಗೆ ಸಹಕಾರ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿಗಳಿಗೆ ಮನವಿ ಸಲ್ಲಿಸಲಾಯಿತು.

      ಈ ವೇಳೆ ವಿವಿಧ ಸಹಕಾರಿ ಸಂಸ್ಥೆಗಳ ಅರುಣ್‍ಕುಮಾರ್, ಶ್ರೀದೇವಿ, ಮಂಜುನಾಥ್, ಜಯಶ್ರೀ, ವಾಸವಿಗುಪ್ತ, ನರಸಿಂಹಯ್ಯ, ಡಾ.ಮುದ್ದುಕೃಷ್ಣ, ರಾಮಕೃಷ್ಣಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

(Visited 34 times, 1 visits today)