ಹುಳಿಯಾರು : 

     ಹುಳಿಯಾರು ಎಪಿಎಂಸಿಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಪಟ್ಟಣದಲ್ಲಿ ಕೆಟ್ಟಿರುವ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತಕ್ಷಣ ದುರಸ್ತಿ ಮಾಡಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರು ಪಪಂ ಮುಖ್ಯಾಧಿಕಾರಿ ಮಂಜುನಾಥ್ ಅವರಿಗೆ ಸೂಚನೆ ನೀಡಿದರು.

     ಹುಳಿಯಾರು ಎಪಿಎಂಸಿಯಲ್ಲಿನ ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಹುಳಿಯಾರಿನ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ವರ್ಷಗಳೇ ಕಳೆದಿದ್ದರೂ ಸಹ ದುರಸ್ತಿ ಮಾಡದ ಪರಿಣಾಮ ಹೆಚ್ಚು ಹಣ ಕೊಟ್ಟು ಖಾಸಗಿಯವರಿಂದ ನೀರು ಖರೀದಿಸಿ ಕುಡಿಯುವಂತ್ತಾಗಿದೆ ಎಂದು ಸಾರ್ವಜನಿಕರು ದೂರಿದರು.

      ಜಿಲ್ಲಾಧಿಕಾರಿಗಳು ತಕ್ಷಣ ಪಪಂ ಮುಖ್ಯಾಧಿಕಾರಿಗಳನ್ನು ಕರೆಸಿ ದುರಸ್ತಿ ಮಾಡಿಸದೆ ನಿರ್ಲಕ್ಷ್ಯಿಸಿರುವ ಬಗ್ಗೆ ಪ್ರಶ್ನಿಸಿದರು. ಶುದ್ಧ ಕುಡಿಯುವ ನೀರಿನ ಘಟಕಗಳೆಲ್ಲವೂ ಆರ್‍ಡಿಪಿಆರ್ ವ್ಯಾಪ್ತಿಯಲ್ಲಿದ್ದು ನಮಗೆ ಇದೂವರೆವಿಗೂ ಹಸ್ತಾಂತರಿಸಿರುವುದಿಲ್ಲ. ಅವರು ಹಸ್ತಾಂತರಿಸಿದರೆ ದುರಸ್ತಿ ಮಾಡಿಸುವುದಾಗಿ ತಿಳಿಸಿದರು. ಅಲ್ಲದೆ 70 ಸಾವಿರಕ್ಕೂ ಹೆಚ್ಚು ಹಣ ದುರಸ್ತಿಗೆ ಬೇಕಾಗುತ್ತದೆ ನಮ್ಮಲ್ಲಿ ಕಂದಾಯ ವಸೂಲಿಯಾಗದಿರುವುದರಿಂದ ಅಷ್ಟು ಹಣ ವ್ಯಯಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಾಧಿಕಾರಿಗಳು ಸಮಜಾಯಿಸಿ ನೀಡಿದರು.

      ಜಿಲ್ಲಾಧಿಕಾರಿಗಳು ಎಪಿಎಂಸಿಯಿಂದಲೇ ಜಿಪಂ ಸಿಇಓಗೆ ಕರೇ ಮಾಡಿ ಹುಳಿಯಾರು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದ್ದರೂ ಶುದ್ಧ ನೀರಿನ ಘಟಕಗಳನ್ನು ಅವರಿಗೆ ಹಸ್ತಾಂತರಿಸಿಲ್ಲ. ಪರಿಣಾಮ ಶುದ್ಧ ಕುಡಿಯುವ ನೀರಿಗೆ ನಿವಾಸಿಗಳು ಪರದಾಡುತ್ತಿದ್ದು ತಕ್ಷಣ ಇಓ ಅವರಿಗೆ ಹಸ್ತಾಂತರಿಸಲು ಸೂಚಿಸುವಂತೆ ತಿಳಿಸಿದರು. ಅಲ್ಲದೆ ಮುಖ್ಯಾಧಿಕಾರಿಗಳಿಗೆ ಆರ್‍ಡಿಪಿಆರ್ ಅವರು ಹಸ್ತಾಂತರಿಸುವವರೆವಿಗೂ ಕಾಯಬೇಡಿ ತಕರಾರು ಮಾಡಬೇಕಿರುವ ನಾನೇ ಹೇಳುತ್ತಿದ್ದೇನೆ ತಕ್ಷಣ ದುರಸ್ತಿ ಮಾಡಿ ಜನರಿಗೆ ಶುದ್ಧ ನೀರು ಕೊಡಿ ಎಂದರು.

      ನಿಮಗೆ ಲಿಖಿತವಾಗಿ ಬೇಕಿದ್ದರೆ ಹೇಳಿ ಇಲ್ಲೇ ಆಡಳಿತಾಧಿಕಾರಿಗಳಾದ ತಹಸೀಲ್ದಾರ್ ಸಹ ಇದ್ದು ಇಬ್ಬರೂ ಸೇರಿ ನಡಾವಳಿ ಮಾಡಿ ನನಗೊಂದು ಪತ್ರ ಕೊಡಿ ಈಗಲೇ ದುರಸ್ತಿ ಮಾಡಲು ಸಹಿ ಹಾಕಿ ಕೊಡುತ್ತೇನೆ. ದುರಸ್ತಿಗೆ ಹಣಕ್ಕೆ ಚಿಂತಿಸಬೇಡ ಎಸ್‍ಎಫ್‍ಸಿ ಹಣ ಬಳಕೆ ಮಾಡು, ನಾನು ಅಪ್ರೂವಲ್ ಕೊಡುತ್ತೇನೆ. ಕುಡಿಯುವ ನೀರು ಕೊಡಲು ಹೀಗೆ ನಿರ್ಲಕ್ಷ್ಯಿಸಬಾರದು. ಹೇಗಾದರೂ ಸರಿ ಜನರಿಗೆ ನೀರು ಕೊಡುವ ನಿಟ್ಟಿನಲ್ಲಿ ಚಿಂತಿಸಬೇಕು ಎಂದು ಕಿವಿ ಮಾತು ಸಹ ಹೇಳಿದರು.

(Visited 10 times, 1 visits today)