ತುಮಕೂರು :

      ನಗರಕ್ಕೆ ದಿನದ 24 ಗಂಟೆಯೂ ನಿರಂತರವಾಗಿ ಕುಡಿಯುವ ನೀರು ಪೂರೈಸುವ 24×7 ಯೋಜನೆ ಮುಂದಿನ ಆರೇಳು ತಿಂಗಳಲ್ಲಿ ಕಾರ್ಯಾರಂಭವಾಗಲಿದೆ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ತಿಳಿಸಿದರು.

      ಇಲ್ಲಿನ ವಿದ್ಯಾನಗರದಲ್ಲಿರುವ 20 ಲಕ್ಷ ಲೀಟರ್ ಸಾಮರ್ಥ್ಯದ ಪಂಪ್‍ಹೌಸ್‍ನಲ್ಲಿ ನಗರದ ವಿವಿಧ ಬಡಾವಣೆಗಳ ಓವರ್‍ಹೆಡ್ ಟ್ಯಾಂಕ್‍ಗಳಿಗೆ ನೀರು ಸರಬರಾಜು ಮಾಡುವ 120 ಹೆಚ್.ಪಿ. ಮೋಟಾರ್ ಹಾಗೂ 180 ಹೆಚ್.ಪಿ. ಮೋಟಾರ್ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

      ಮುಂದಿನ ಆರೇಳು ತಿಂಗಳಲ್ಲಿ 24×7 ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಚಾಲ್ತಿಗೆ ಬರಲಿದೆ. ಈ ಯೋಜನೆ ಆರಂಭದಿಂದ ಇನ್ನೊಂದು ವರ್ಷದಲ್ಲಿ ನಗರದಲ್ಲಿ ಏಕಾಕಾಲದಲ್ಲಿ ಎಲ್ಲಾ ಬಡಾವಣೆಗಳಿಗೂ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದರು.

      24×7 ನೀರಿನ ಯೋಜನೆಯಡಿ ನಗರದ ಎಲ್ಲ ಮನೆಗಳಿಗೂ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜಾಗಲಿದೆ. ಹಾಗೆಯೇ ಎಲ್ಲೂ ಸಹ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ. ಈ ಯೋಜನೆಯಡಿ ಎಲ್ಲ ಮನೆಗಳಿಗೂ ಮೀಟರ್ ಅಳವಡಿಸುತ್ತಿದ್ದು, ಇದರಿಂದ ಅನಗತ್ಯವಾಗಿ ನೀರು ಪೋಲಾಗುವುದು ತಪ್ಪುತ್ತದೆ ಎಂದರು.

       ವಿದ್ಯಾನಗರದ ಪಂಪ್‍ಪೌಸ್‍ನಲ್ಲಿ ಬೃಹತ್ ನೀರಿನ ಸಂಪು ನಿರ್ಮಾಣವಾಗಿದ್ದು, 20 ಲಕ್ಷ ಲೀಟರ್ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ಈ ಪಂಪ್‍ಪೌಸ್‍ನಿಂದ ನಗರದ ಹಲವಾರು ಬಡಾವಣೆಗಳಿಗೆ ನೀರು ಪೂರೈಕೆಯಾಗಲಿದೆ ಎಂದರು. ಈ ಪಂಪ್‍ಹೌಸ್‍ನಲ್ಲಿ 120 ಮತ್ತು 180 ಹೆಚ್.ಪಿ. ಮೋಟಾರ್‍ಗಳ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಈ ಎರಡು ಮೋಟಾರ್‍ಗಳಿಗೆ ಒಂದೊಂದು ಹೆಚ್ಚುವರಿ ಮೋಟಾರ್‍ಗಳನ್ನು ಒದಗಿಸಿದ್ದು, ಒಂದು ವೇಳೆ ಕಾರ್ಯನಿರ್ವಹಿಸುತ್ತಿರುವ ಮೋಟಾರ್‍ಗಳು ಕೆಟ್ಟು ಹೋದರೆ ತಕ್ಷಣ ಇರುವ ಇನ್ನೊಂದು ಮೋಟಾರ್ ಅಳವಡಿಸಿ ನೀರು ಪೂರೈಸಲಾಗುವುದು ಎಂದರು.

      120 ಹೆಚ್.ಪಿ. ಮೋಟಾರ್‍ನಿಂದ ವಿದ್ಯಾನಗರ, ಕುವೆಂಪುನಗರ,  ಹನುಮಂತಪುರ ಓವರ್‍ಹೆಡ್ ಟ್ಯಾಂಕ್‍ಗಳಿಗೆ, 180 ಹೆಚ್.ಪಿ. ಮೋಟಾರ್‍ನಿಂದ ಅಶೋಕ ನಗರ, ಗಂಗೋತ್ರಿ ನಗರ, ದೇವರಾಯಪಟ್ಟಣ ಹಾಗೂ ಶ್ರೀನಗರ ಬಡಾವಣೆಯ ಓವರ್‍ಹೆಡ್ ಟ್ಯಾಂಕ್‍ಗಳಿಗೆ ನೀರು ಸರಬರಾಜು ಮಾಡಲಾಗುವುದು ಎಂದರು.

      ಮೇಯರ್ ಲಲಿತಾ ರವೀಶ್ ಮಾತನಾಡಿ, ನಗರದ ಜನತೆ ನೀರನ್ನು ಅನಗತ್ಯವಾಗಿ ಬಳದೆ, ಮಿತವಾಗಿ ಅಗತ್ಯಕ್ಕೆ ತಕ್ಕಂತೆ ಬಳಸಬೇಕು ಎಂದು ಮನವಿ ಮಾಡಿದರು.

      ವಿದ್ಯಾನಗರದ ಪಂಪ್‍ಹೌಸ್‍ನಲ್ಲಿ ಎರಡು ಹೊಸ ಮೋಟಾರ್‍ಗಳಿಗೆ ಚಾಲನೆ ನೀಡಿದ್ದು, ಹಲವಾರು ಬಡಾವಣೆಗಳಿಗೆ ಇದರಿಂದ ನೀರು ಸರಬರಾಜಾಗಲಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಉಪಮೇಯರ್ ರೂಪಶ್ರೀ, ಪಾಲಿಕೆ ಸದಸ್ಯರಾದ ಸಿ.ಎನ್. ರಮೇಶ್, ಮಲ್ಲಿಕಾರ್ಜುನ್, ಮಂಜಳಾ ಆದರ್ಶ್, ದೀಪಶ್ರೀ, ಇಂಜಿನಿಯರ್ ಚಂದ್ರಶೇಖರ್, ಗುತ್ತಿಗೆದಾರ ರಮೇಶ್ ಉಪಸ್ಥಿತರಿದ್ದರು.

(Visited 14 times, 1 visits today)