ನವದೆಹಲಿ:

      ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿಭಾಷಾ ಸೂತ್ರದ ಅನ್ವಯ ಎಂಟನೇ ತರಗತಿವರೆಗೆ ಹಿಂದಿ ಭಾಷೆ ಕಲಿಕೆ ಕಡ್ಡಾಯ ಆಗಲಿದೆ. ಹೊಸ ಶಿಕ್ಷಣ ನೀತಿ ವರದಿ ತಯಾರಿಸಲಾಗಿದ್ದು, ಕೇಂದ್ರಕ್ಕೆ ಸಲ್ಲಿಕೆ ಆಗಲಿದೆ.

      ಕೆ.ಕಸ್ತೂರಿ ರಂಗನ್ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿಯು ಶಿಕ್ಷಣ ನೀತಿ ಕುರಿತಾಗಿ ವರದಿ ತಯಾರಿಸಿದ್ದು, ವರದಿ ಜಾರಿಯಾದಲ್ಲಿ ದೇಶದಾದ್ಯಂತ ಎಂಟನೇ ತರಗತಿ ವರೆಗೂ ಹಿಂದಿ ಶಿಕ್ಷಣ ಕಡ್ಡಾಯ ಆಗಲಿದೆ.

      ಕೆ.ಕಸ್ತೂರಿರಂಗನ್ ಅವರ ಸಮಿತಿಯು ಭಾರತ ಕೇಂದ್ರಿತ ಶಿಕ್ಷಣ ಪದ್ಧತಿಗೆ ಒತ್ತು ನೀಡುವ ಸಲುವಾಗಿ ಶಿಕ್ಷಣ ನೀತಿಯಲ್ಲಿ ಹಲವು ಬದಲಾವಣೆಗಳನ್ನು ಸೂಚಿಸಲಿದೆ. ವ್ಯವಸ್ಥಿತ ಮಾದರಿಯಲ್ಲಿ ಏಕರೂಪದ ಪ್ರಾಥಮಿಕ ಶಿಕ್ಷಣವನ್ನು ದೇಶದಾದ್ಯಂತ ನೀಡುವಂತೆ ಸಹ ವರದಿಯಲ್ಲಿ ಹೇಳಲಾಗಿದೆ.

      2018 ರ ಡಿ. 31 ರಂದು ಅವಧಿ ಕೊನೆಗೊಳ್ಳುವ ಮುಂಚೆ ಸಮಿತಿಯು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ತನ್ನ ವರದಿ ಸಲ್ಲಿಸಿತ್ತು. ವರದಿಯನ್ನು ಔಪಚಾರಿಕವಾಗಿ ಹಸ್ತಾಂತರಿಸಲು ಮಾನವ ಸಂಪನ್ಮೂಲ ಸಚಿವರೊಂದಿಗೆ ಸಭೆ ನಡೆಸಲು ಕೋರಿದ್ದೇವೆ ಎಂದು ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

      ಇನ್ನು ಈ ಕುರಿತು ಮಾನವ ಸಂಪನ್ಮೂಲ ಇಲಾಖೆಯ ಸಚಿವ ಪ್ರಕಾಶ್‌ ಜಾವಡೇಕರ್‌ ಮಾತನಾಡಿ, ಸಮಿತಿಯ ವರದಿಯು ಸಿದ್ಧವಾಗಿದ್ದು, ನನ್ನನ್ನು ಭೇಟಿಯಾಗಲು ಅವಕಾಶ ಕೇಳಿದ್ದಾರೆ. ಸಂಸತ್ತಿನ ಅಧಿವೇಶನದ ನಂತರ ವರದಿಯನ್ನು ಪಡೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

 

(Visited 58 times, 1 visits today)