
ತುಮಕೂರು: ಭೂಮಿಯ ಫಲವತ್ತತೆ ಕಾಪಾಡಲು ಕ್ರಿಮಿನಾಶಕ ಮತ್ತು ರಸಗೊಬ್ಬರಗಳ ಬಳಕೆ ಬದಲು ಸಾವಯವ ಗೊಬ್ಬರ ಬಳಕೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಕೃಷಿ ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿಕೊಟ್ಟು ಪರಿಸರ ಸ್ನೇಹಿ, ಸಾಂಪ್ರದಾಯಕ ಕೃಷಿ ಪದ್ದತಿ ಅನುಸರಿಸಲು ಪ್ರೋತ್ಸಾಹಿಸಬೇಕು ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಹೇಳಿದರು.
ನರೇಂದ್ರ ಮೋದಿಯವರು ಪ್ರಧಾನಿಯಾಗಿ ೧೨ ವರ್ಷ ಪೂರೈಸಿದ್ದರ ಹಿನ್ನೆಲೆಯಲ್ಲಿ ತಾಲ್ಲೂಕಿನ ಹಿರೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಹಮ್ಮಿಕೊಂಡಿದ್ದ ಖೇತ್ ಬಚಾವೋ ಅಭಿಯಾನ್ ಕಾರ್ಯಕ್ರಮದಲ್ಲಿ ನೈಸರ್ಗಿಕ ಕೃಷಿ ಉತ್ತೇಜಿಸುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಶಾಸಕರು, ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿಯ ಫಲವತ್ತತೆ ಹಾಳಾಗುವುದನ್ನು ತಪ್ಪಿಸಲು ರೈತರು ನೈಸರ್ಗಿಕ ಕೃಷಿ ಪದ್ದತಿ ಅನುಸರಿಸಬೇಕು. ಸಾವಯವ ಕೃಷಿ ಪ್ರೋತ್ಸಾಹಿಸಲು ನರೇಂದ್ರ ಮೋದಿಯವರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ಯೋಜನೆಗಳ ಪ್ರಯೋಜನ ಪಡೆದು ದೇಶದ ಆಹಾರ ಧಾನ್ಯ ಉತ್ಪಾದನೆ ಹೆಚ್ಚಾಗಲು ಕೈ ಜೋಡಿಸಬೇಕು ಎಂದರು.
ಕೃಷಿ ಅಧಿಕಾರಿಗಳು, ರೈತ ಮೋರ್ಚಾಗಳು ಹಾಗೂ ಕೃಷಿ ಅಧಿಕಾರಿಗಳು ನೈಸರ್ಗಿಕ ಕೃಷಿ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ, ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗದಿದ್ದರೂ ಹಂತ ಹಂತವಾಗಿಯಾದರೂ ಸಾವಯವ ಕೃಷಿ ಅಳವಡಿಸುವ ಪ್ರಯತ್ನ ಮಾಡಬೇಕು ಎಂದು ಶಾಸಕ ಜ್ಯೋತಿಗಣೇಶ್ ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿ ಶಂಕರ್ ಹೆಬ್ಬಾಕ, ಬ್ಯಾಟರಂಗೇಗೌಡ, ಸತ್ಯಮಂಗಲ ಜಗದೀಶ್ ಮಾತನಾಡಿದರು.
ಕೃಷಿ ವಿಜ್ಞಾನ ಕೇಂದ್ರದ ಪ್ರಧಾನ ವಿಜ್ಞಾನಿ ಡಾ.ಎನ್. ಯೋಗಾನಂದನ್, ಕೃಷಿ ಇಲಾಖೆ ನಿರ್ದೇಶಕ ಡಾ.ದಿವಾಕರ್, ಬಿಜೆಪಿ ಮುಖಂಡರಾದ ವೈ.ಹೆಚ್. ಹುಚ್ಚಯ್ಯ, ಶಿವಕುಮಾರ್, ಭೈರಣ್ಣ, ರವಿಶಂಕರ್, ಹೇಮಂತ ಕುಮಾರ್, ಗಿರೀಶ್, ಚೈತ್ರ ಮಂಜುನಾಥ್, ಶಶಿಧರ್, ರಾಜಶೇಖರ್ ಹಾಗೂ ಇತರರಿದ್ದರು.

