ತುಮಕೂರು: ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ-೨೦೨೬ ಪ್ರಕ್ರಿಯೆ ಜಿಲ್ಲೆಯಲ್ಲಿ ಭರದಿಂದ ಸಾಗಿದ್ದು, ಶೇ.೧೦೦ರಷ್ಟು ಶುದ್ಧ ಮತದಾರರ ಪಟ್ಟಿಗಾಗಿ ರಾಜಕೀಯ ಪಕ್ಷಗಳು ತಮ್ಮ ಮತಗಟ್ಟೆ ಏಜೆಂಟರುಗಳನ್ನು ಮತ್ತಷ್ಟು ಚುರುಕುಗೊಳಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ ಸಂಬAಧಿಸಿದAತೆ ನೋಂದಾಯಿತ ರಾಜಕೀಯ ಪಕ್ಷಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿದೆ. ಪ್ರಸ್ತುತ ಪರಿಷ್ಕರಿಸಿದ ಮತದಾರರ ಪಟ್ಟಿ ಪರಿಪಕ್ವವಾಗಲು ರಾಜಕೀಯ ಪಕ್ಷಗಳು ತಮ್ಮ ಮತಗಟ್ಟೆ ಏಜೆಂಟರುಗಳನ್ನು ಮತ್ತಷ್ಟು ಚುರುಕುಗೊಳಿಸಿ ಮತಗಟ್ಟೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವಂತೆ ಸೂಚಿಸಬೇಕು ಎಂದು ರಾಜಕೀಯ ಪಕ್ಷಗಳಿಗೆ ತಿಳಿಸಿದರು.
೨೦೨೫ರ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ೨೨ಲಕ್ಷ ಮತದಾರರಿಗೆ ಗಣತಿ ನಮೂನೆಯನ್ನು ವಿತರಣೆ ಮಾಡಲಾಗಿದೆ. ಇಂದಿನ ಮಾಹಿತಿಯಂತೆ ಜಿಲ್ಲೆಯಲ್ಲಿ ಶೇ. ೭೭.೧೮ರಷ್ಟು ಗಣಕೀಕರಣಗೊಳಿಸಲಾಗಿದೆ. ಆಗಸ್ಟ್ ೮ರವರೆಗೂ ಕಾಲಾವಕಾಶ ವಿಸ್ತರಿಸಲಾಗಿರುವುದರಿಂದ ರಾಜಕೀಯ ಪಕ್ಷಗಳು ತಮ್ಮ ಏಜೆಂಟರುಗಳಿಗೆ ತಿಳಿಸಿ ಪ್ರಸ್ತುತ ಮತಗಟ್ಟೆ ಅಧಿಕಾರಿಗಳು ಗಣತಿ ನಮೂನೆಗಳನ್ನು ಹಿಂಪಡೆದು ಗಣಕೀಕರಣಗೊಳಿಸಿರುವ ಮಾಹಿತಿ ಸರಿಯಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.
ಪ್ರಸ್ತುತ ಮಾಹಿತಿಯಂತೆ ಜಿಲ್ಲೆಯ ಮತದಾರರ ಪಟ್ಟಿಯಲ್ಲಿನ ೨೪,೫೬೨ ಮತದಾರರು ಮೃತಪಟ್ಟಿರುವ ಬಗ್ಗೆ, ೭,೭೬೮ ಮತದಾರರು ಲಭ್ಯವಿಲ್ಲದಿರುವ ಬಗ್ಗೆ ಹಾಗೂ ೩೫,೫೫೮ ಮತದಾರರು ಶಾಶ್ವತವಾಗಿ ಸ್ಥಳಾಂತರಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದಲ್ಲದೆ ಶೇ.೧೯.೬೧ ಮತದಾರರು ಗಣತಿ ನಮೂನೆಯನ್ನು ಪಡೆದು ಹಿಂತಿರುಗಿಸಿರುವುದಿಲ್ಲ. ಈ ಮಾಹಿತಿ ಸರಿಯಿರುವ ಬಗ್ಗೆ ರಾಜಕೀಯ ಪಕ್ಷಗಳು ತಮ್ಮ ಏಜೆಂಟರ್ ಮೂಲಕ ಖಾತ್ರಿಪಡಿಸಿಕೊಳ್ಳಬೇಕು. ಒಂದೊಮ್ಮೆ ಗಣತಿ ನಮೂನೆ ಹಿಂತಿರುಗಿಸದ ಮತದಾರರು ಅಲಭ್ಯ ಎಂಬ ಬಗ್ಗೆ ಹಾಗೂ ಯಾವ ಕಾರಣಕ್ಕೆ ಲಭ್ಯವಿಲ್ಲ ಎಂಬ ಬಗ್ಗೆ ಮತಗಟ್ಟೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ದೃಢಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ರಾಜಕೀಯ ಪಕ್ಷಗಳಿಗೆ ತಿಳಿಸಿದರು.
ಪ್ರಸ್ತುತ ತುಮಕೂರು ಜಿಲ್ಲೆಯ ೧೧ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿದ್ದು, ವಾರದೊಳಗೆ ಶೇ. ೮೮ರಷ್ಟು ಗಣಕೀಕರಣಗೊಳಿಸುವ ಪ್ರಕ್ರಿಯೆ ಆಗಲಿದೆ ಎಂದು ಅವರು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪಾರದರ್ಶಕವಾಗಿರುವ ಉದ್ದೇಶದಿಂದ ರಾಜಕೀಯ ಪಕ್ಷಗಳು ಪ್ರಕ್ರಿಯೆಯ ಎಲ್ಲಾ ಮಾಹಿತಿಯನ್ನು ತಿಳಿಯಬೇಕು. ಈ ಮೂಲಕ ಮತದಾರರ ಪಟ್ಟಿಯಲ್ಲಿ ಯಾವೊಬ್ಬ ಅರ್ಹ ಮತದಾರರು ಹೊರಗುಳಿಯದಂತೆ ಸಹಕರಿಸಬೇಕು ಎಂದು ತಿಳಿಸಿದರು.
ಪ್ರಸ್ತುತ ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಗಣತಿ ನಮೂನೆ ವಿತರಿಸುವ ಹಾಗೂ ಹಿಂಪಡೆಯುವ ಪ್ರಕ್ರಿಯೆ ಮನೆ-ಮನೆ ಭೇಟಿ ಕಾರ್ಯವನ್ನು ಆಗಸ್ಟ್ ೮ರವರೆಗೆ ವಿಸ್ತರಿಸಲಾಗಿದ್ದು, ಆಗಸ್ಟ್ ೧೭ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಆನಂತರ ಅಕ್ಟೋಬರ್ ೧೯ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸುವ ಗುರಿ ಹೊಂದಿದ್ದು, ಈ ನಡುವೆ ೨ ತಿಂಗಳ ಅವಧಿಯನ್ನು ಆಕ್ಷೇಪಣೆಗಳನ್ನು ಸರಿಪಡಿಸಲು ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಯಾವುದೇ ಗೊಂದಲವಿದ್ದರೆ ನಿವಾರಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ನೋಂದಾಯಿತ ಎಲ್ಲಾ ರಾಜಕೀಯ ಪಕ್ಷಗಳ ಪ್ರಮುಖರು ಭಾಗವಹಿಸಿದ್ದರು.
(Visited 1 times, 1 visits today)





