ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಮಳೆ ಅಭಾವದಿಂದಾಗಿ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೃಷಿ ಹಾಗೂ ಹೈನುಗಾರಿಕೆಯ ಜೀವನಾಡಿಯಾಗಿರುವ ಕೆರೆಗಳು ಬರಿದಾಗುತ್ತಿವೆ. ಸಣ್ಣ ನೀರಾವರಿ ಇಲಾಖೆಯ ಅಧಿಕೃತ ವರದಿಯ ಪ್ರಕಾರ, ತಾಲೂಕಿನಲ್ಲಿ ಸಣ್ಣ ನೀರಾವರಿ ವ್ಯಾಪ್ತಿಗೆ ಒಳಪಡುವ ೩೮ ಕೆರೆಗಳ ಪೈಕಿ ೨೩ ಪ್ರಮುಖ ಕೆರೆಗಳು ಪ್ರಸ್ತುತ ಸಂಪೂರ್ಣ ಖಾಲಿ ನೀರಿನ ಮಟ್ಟಕ್ಕೆ ತಲುಪಿವೆ.
ಮುಂಗಾರು ಅವಧಿಯಲ್ಲೂ ಕೆರೆಗಳು ಕೋಡಿ ಹರಿಯುವ ಬದಲು ಒಣಗಿ ನಿಂತಿರುವುದು ತಾಲೂಕಿನ ರೈತಾಪಿ ವರ್ಗದಲ್ಲಿ ತೀವ್ರ ಆತಂಕ ಮೂಡಿಸಿದೆ. ಉಳಿದ ಹತ್ತದಿನೈದು ಕೆರೆಗಳಲ್ಲೂ ಶೇ.೭೦ ರಷ್ಟು ನೀರು ಖಾಲಿಯಾಗಿವೆ. ಹೀಗೆ ಜೀವನಾಡಿ ಎನಿಸಿರುವ ಕೆರೆಗಳು ಬರಿದಾಗುತ್ತಿರುವುದರಿಂದಾಗಿ ಕೊಳವೆಬಾವಿಗಳೂ ಬತ್ತುತ್ತಿದ್ದು, ಮುಂದೆ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಆಗುವ ಲಕ್ಷಣಗಳು ಗೋಚರಿಸುತ್ತಿವೆ.
ಚಿಕ್ಕನಾಯಕನಹಳ್ಳಿ ತಾಲೂಕಿಗೆ ಹತ್ತನ್ನೆರಡು ವರ್ಷಗಳ ಹಿಂದೆಯೇ ಹೇಮಾವತಿ ನದಿ ನೀರು ಹರಿಸುವ ಯೋಜನೆ ಮಂಜೂರಾಗಿದ್ದರೂ ಕಾಮಗಾರಿ ಇನ್ನೂ ಪೂರ್ಣಗೊಳ್ಳಲ್ಲಿಲ್ಲ. ಪರಿಣಾಮ ೨೬ ಕೆರೆಗಳಿಗೆ ಹರಿಯಬೇಕಿದ್ದ ನದಿ ನೀರು ಶೆಟ್ಟಿಕೆರೆ, ಸಾಸಲು, ತಿಮ್ಮಾಪುರ ಕೆರೆಗಳನ್ನು ಬಿಟ್ಟರೆ ಇನ್ನಾವುದೇ ಕೆರೆಗಳಿಗೆ ಹರಿಯಲಿಲ್ಲ. ಭದ್ರ ಯೋಜನೆ, ಎತ್ತಿನಹೊಳೆ ಯೋಜನೆ ಇನ್ನೂ ಕುಂಟುAತ ಸಾಗುತ್ತಿದೆ. ಹಾಗಾಗಿ ತಾಲೂಕಿನ ಎಲ್ಲಾ ಕೆರೆಗಳು ಈಗಲೂ ಮಳೆಯಾಶ್ರಿತ ಕೆರೆಗಳಾಗಿಯೇ ಉಳಿದಿವೆ.
ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗಲಿಲ್ಲ, ಹಿಂಗಾರಿಗಾದರೂ ಮಳೆಯಾಗುತ್ತದೆಂದು ನಿರೀಕ್ಷಿಸಿಸಲಾಯಿತಾದರೂ ಮಳೆ ಮೋಡಗಳು ಆಗುತ್ತವೆ ವಿನಃ ಮಳೆ ಬರುತ್ತಿಲ್ಲ. ಪರಿಣಾಮ ತಾಲೂಕಿನಲ್ಲಿ ಜಲಸಂಕಷ್ಟ ಎದುರಾಗಿದೆ. ಕೆರೆಗಳಲ್ಲಿ ಹನಿ ನೀರಿಲ್ಲದೆ ಜಾನುವಾರು, ಪಕ್ಷಿಗಳು ಮತ್ತು ಕಾಡುಪ್ರಾಣಿಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದನಕರು, ಕುರಿಮೇಕೆ ಸಾಕುವವರು ಮೇವಿಗಾಗಿ ಪರದಾಡುತ್ತಿದ್ದಾರೆ.
ತಾಲೂಕಿನಲ್ಲಿಯೇ ಅತಿ ಹೆಚ್ಚು ಅಂದರೆ ೩೦೫.೧೦ ಹೆಕ್ಟೇರ್ ಅಚ್ಚುಕಟ್ಟು ಹೊಂದಿರುವ ಸಿದ್ಧನಕಟ್ಟೆ ಕೆರೆ ಸೇರಿದಂತೆ ೧೮೩.೪೬ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದ ಬಾವನಹಳ್ಳಿ ದುರ್ಗದ ಕೆರೆ, ೧೮೨.೬೦ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿರುವ ಬಾವನಹಳ್ಳಿ ಹೊಸಕೆರೆ, ೧೪೭.೨೯ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿರುವ ನವಿಲೆಕೆರೆ, ೧೨೭.೫೨ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿರುವ ಕಂದಿಕೆರೆ ನೊಣವಿನ ಕೆರೆ ಸೇರಿದಂತೆ ೨೩ ಕೆರೆಗಳು ಬರಿದಾಗಿರುವುದರಿಂದ ಸಾವಿರಾರು ಎಕರೆ ತೆಂಗು, ಅಡಿಕೆ ಹಾಗೂ ದಿನನಿತ್ಯದ ಬೆಳೆಗಳು ಒಣಗಿ ನಷ್ಟ ಅನುಭವಿಸುವಂತಾಗಿದೆ. ಕೃಷಿ ಮತ್ತು ಹೈನುಗಾರಿಕೆಯನ್ನು ನೆಚ್ಚಿಕೊಂಡಿರುವ ಗ್ರಾಮೀಣ ಭಾಗದ ಜನರಿಗೆ ಇದು ದೊಡ್ಡ ಪೆಟ್ಟು ನೀಡಿದೆ.
ಕೆರೆಗಳು ಬತ್ತಿ ಒಣಗಿ ನಿಂತಿರುವುದು ಕೇವಲ ಅಂಕಿ-ಅAಶಗಳ ಸಮಸ್ಯೆಯಾಗಿ ಉಳಿದಿಲ್ಲ. ಬದಲಿಗೆ ಸಾವಿರಾರು ಎಕರೆ ಕೃಷಿ ಭೂಮಿಯ ಜೀವಸೆಲೆ ಕಡಿದುಹೋಗಿ, ರೈತರ ಕಣ್ಣಲ್ಲಿ ಕಣ್ಣೀರು ತರಿಸಿದೆ. ಮುಂದಿನ ದಿನಗಳಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದು ತಾಲೂಕು ಆಡಳಿತ ಪಾಲಿಗೆ ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ತಾಲೂಕಿಗೆ ಹರಿಯಬೇಕಿರುವ ಹೇಮಾವತಿ ನೀರನ್ನು ತಕ್ಷಣ ಹರಿಸಿದರೆ ಏಳೆಂಟು ಸಣ್ಣ ನೀರಾವರಿ ಕೆರೆಗಳು ಐದಾರು ಸಣ್ಣಪುಟ್ಟ ಕೆರೆಗಳು ತುಂಬುತ್ತವೆ. ಆಗ ತಾಲೂಕಿನ ಅರ್ಧ ಭಾಗದ ನೀರಿನ, ಮೇವಿನ ಸಮಸ್ಯೆ ಸುಲಭವಾಗಿ ಪರಿಹಾರ ಸಿಕ್ಕಂತಾಗುತ್ತದೆ. ಜನಪ್ರತಿನಿಧಿಗಳು ಮತ್ತು ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕಿದೆ. ಸಾಲ ಸೋಲ ಮಾಡಿ ಬೆಳೆ ಇಟ್ಟಿರುವ ತಾಲೂಕಿನ ರೈತ ಕುಲವನ್ನು ಉಳಿಸಲು ಸರ್ಕಾರ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಿದೆ.
(Visited 1 times, 1 visits today)





