ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದಲ್ಲಿರುವ ಸ್ನಾತಕೋತ್ತರ ಜೈನ ಅಧ್ಯಯನ ಡಿಪ್ಲೋಮಾ ವಿಭಾಗವನ್ನು ಉಳಿಸಿ ಬೆಳೆಸಲು ಜೈನ ಸಮುದಾಯ ಮತ್ತು ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯ ಎಂದು ತುಮಕೂರು ವಿವಿಯ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಹೆಚ್.ಎಸ್. ಮೋಹನ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಜೈನ ಅಧ್ಯಯನ ಡಿಪ್ಲೋಮಾ ವಿಭಾಗದ ವತಿಯಿಂದ ಆ. ೧೮ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪ್ರಥಮ ವರ್ಷದ ತರಗತಿಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಜೈನ ಸಮುದಾಯದ ಕೊಡುಗೆ ಅಪಾರವಾಗಿದ್ದು, ಪಂಪ, ರನ್ನ, ಜನ್ನರಂತಹ ಮಹನೀಯರ ಸಾಹಿತ್ಯ ಮತ್ತು ಇತಿಹಾಸದ ಕುರಿತು ಮುಂದಿನ ಪೀಳಿಗೆಗೆ ಅರಿವು ಮೂಡಿಸುವಲ್ಲಿ ಇಂತಹ ಕೋರ್ಸ್ಗಳ ಪಾತ್ರ ಹಿರಿದಾದದ್ದು. ಈ ನಿಟ್ಟಿನಲ್ಲಿ ಕೋರ್ಸ್ನ ಉಳಿವಿಗಾಗಿ ದತ್ತಿ ನಿಧಿ ಸ್ಥಾಪನೆ, ಪುಸ್ತಕಗಳ ವಿತರಣೆ ಹಾಗೂ ವಿಶೇಷ ಉಪನ್ಯಾಸಗಳ ಏರ್ಪಾಡಾಗಬೇಕು. ಅಲ್ಲದೆ, ವಿವಿಯಲ್ಲಿ ಜೈನ ಡಿಪ್ಲೊಮಾ ಕೋರ್ಸ್ಗೆ ಚಿನ್ನದ ಪದಕ ಮತ್ತು ನಗದು ಬಹುಮಾನವನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವಂತೆ ಅವರು ಸಮುದಾಯದ ಮುಖಂಡರಿಗೆ ಕರೆ ನೀಡಿದರು.
ತುಮಕೂರು ದಿಗಂಬರ ಜೈನ ಸಮಾಜದ ನಿಕಟಪೂರ್ವ ಅಧ್ಯಕ್ಷರಾದ ಎಸ್.ಜಿ. ನಾಗರಾಜು ಮಾತನಾಡಿ, ವಿಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಸಮಾಜದವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಧ್ಯಾಪಕರಾದ ಪ್ರೊ. ಶೇಟ್ ಪ್ರಕಾಶ್ ಅವರು, ಜಾಗತಿಕ ಮಟ್ಟದಲ್ಲಿ ನೋಡುವುದಾದರೆ ಸಾವಿರಾರು ಧರ್ಮಗಳು ಅಳಿದುಹೋಗಿವೆ. ಆದರೆ ಅವಗಳಲ್ಲಿ ಉಳಿದಿರುವುದು ಕೇವಲ ಕೆಲವೇ ಕೆಲವು ಮಾತ್ರ. ಅಂತಹ ಸನಾತನ ಧರ್ಮ ಮತ್ತು ಸಂಸ್ಕöÈತಿಯನ್ನು ಉಳಿಸಿ, ಮುಂದಿನ ಪೀಳಿಗೆಗೂ ಪರಿಚಯಿಸುವಂತಹ ಪ್ರಮುಖ ಜವಾಬ್ದಾರಿ ನಮ್ಮ ಮೇಲಿದೆ ಎಂದರು
ಹಿರಿಯ ಜೈನ ವಿದ್ವಾಂಸರಾದ ಎಸ್.ಪಿ. ಪದ್ಮಪ್ರಸಾದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತುಮಕೂರು ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ಆಶಾರಾಣಿ ನಿರೂಪಿಸಿದರು. ವಿಭಾಗದ ಸಂಯೋಜಕರಾದ ಡಾ. ವೆಂಕಟರೆಡ್ಡಿ ರಾಮರೆಡ್ಡಿ, ದಿಗಂಬರ ಜೈನ ಸಮಾಜದ ಅಧ್ಯಕ್ಷರಾದ ಟಿ.ಡಿ. ಬಾಹುಬಲಿ ಬಾಬು, ನಿವೃತ್ತ ಕಾರ್ಯಪಾಲಕ ಅಭಿಯಂತರಾದ ಎನ್.ಬಿ. ಶ್ರೇಯಾಂಸಕುಮಾರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
(Visited 1 times, 1 visits today)





