ತುಮಕೂರು: ನಗರದ ಬಾರ್ ಲೈನ್ ರಸ್ತೆಯಲ್ಲಿರುವ ಮೆಕ್ಕಾ ಮಸೀದಿಯಲ್ಲಿ ಹಜರತ್ ಮುಹಮ್ಮದ್ ಪೈಗಂಬರ್ ಅವರ 1501 ಜನ್ಮ ಜಯಂತಿ ಈದ್ ಮಿಲಾದ್ ಹಬ್ಬವನ್ನು ಅತ್ಯಂತ ಶ್ರದ್ಧಾ ಮತ್ತು ಭಕ್ತಿಯಿಂದ ಆಚರಿಸಲಾಯಿತು.ಮೆಕ್ಕಾ ಮಸೀದಿಯ ಅಧ್ಯಕ್ಷರಾದ ಡಾ.ಎಸ್.ಷಪಿ ಅಹಮದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸೌಹಾರ್ಧ ಪ್ರಾರ್ಥನೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಶೋಕ್.ಕೆ.ವಿ ಅವರುಗಳು ಪಾಲ್ಗೊಂಡು ಈದ್ ಮಿಲಾದ ಹಬ್ಬದ ಶುಭ ಕೋರಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕರಾದ ಡಾ.ರಫೀಕ್ ಅಹಮದ್,ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಸುಮಾರು 1,500ಕ್ಕೂ ಹೆಚ್ಚು ವರ್ಷಗಳ ಹಿಂದೆ, ನಮ್ಮ ಪ್ರವಾದಿಗಳ ಕಾಲದಲ್ಲಿ ಕೊಲ್ಲಿ,ಅರೇಬಿಯಾ ಪ್ರದೇಶಗಳಲ್ಲಿ ಅಜ್ಞಾನ ಹಾಗೂ ಅನ್ಯಾಯದ ಕತ್ತಲೆ ಇತ್ತು. ಆ ಕಾಲದಲ್ಲಿ ಬಡವರ ಮನೆಯಾಗಿರಲಿ, ಶ್ರೀಮಂತರ ಮನೆಯಾಗಿರಲಿ ಹೆಣ್ಣು ಮಕ್ಕಳು ಹುಟ್ಟಿದರೆ ಅವರನ್ನು ಜೀವಂತವಾಗಿ ಹೂಳುವಂತಹ ಕ್ರೂರ ಪದ್ಧತಿ ಇತ್ತು, ಸಮಾನತೆ ಇರಲಿಲ್ಲ.ಇಂತಹ ಸಂದರ್ಭದಲ್ಲಿ ಪ್ರವಾದಿಗಳು ಜನಿಸಿ, 40 ವರ್ಷಗಳ ಕಾಲ ಸಾಮಾನ್ಯರಂತೆ ಧರ್ಮದ ಹಾದಿಯಲ್ಲಿ ನಡೆದು, ಧರ್ಮದ ಸರಿಯಾದ ಮಾರ್ಗವನ್ನು ಸಾರಿದರು. ಪ್ರವಾದಿಯವರ ನಡೆ-ನುಡಿ (ಸುನ್ನತ್ ಮತ್ತು ಹದೀಸ್) ಹಾಗೂ ಕುರಾನ್ ಶರೀಫ್ ನೀಡುವ ಸಂದೇಶಗಳು ಸದಾ ಮಾರ್ಗದರ್ಶಿಯಾಗಿವೆ.ಪ್ರವಾದಿಯವರ ಸಂದೇಶಗಳ ಮೂಲಕ ರಾಜ್ಯದಲ್ಲಿ ಮತ್ತು ದೇಶದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವ ನೆಲೆಸಲಿ ಎಂದು ಪ್ರಾರ್ಥಿಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ,ಪ್ರವಾದಿ ಮೊಹಮ್ಮದ್ ಅವರ ಜನ್ಮದಿನದ(ಈದ್-ಮಿಲಾದ್) ಪವಿತ್ರ ಸಂದರ್ಭದಲ್ಲಿ ಜಿಲ್ಲಾಡಳಿತದ ಪರವಾಗಿ ನಾಡಿಗೆ ಈದಮೀಲಾದ ಶುಭಾಶಯ ಕೋರಿದರು.ಪ್ರವಾದಿ ಮೊಹಮ್ಮದ್ ಅವರು ಸುಮಾರು 1500 ವರ್ಷಗಳ ಹಿಂದೆ ಬೋಧಿಸಿದ ಶಾಂತಿ, ಸಹನೆ, ಕರುಣೆ ಹಾಗೂ ಮಾನವೀಯತೆಯ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ವಿವಿಧ ಧರ್ಮ ಮತ್ತು ಜಾತಿಗಳಿರುವ ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ಸೌಹಾರ್ದತೆ ಹಾಗೂ ಪ್ರೀತಿಯಿಂದ ಜೀವನ ನಡೆಸಬೇಕು. ತುಮಕೂರು ಜಿಲ್ಲೆಯಲ್ಲೂ ಸಹ ಎಲ್ಲಾ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಲಾಗುತ್ತಿದೆ.ಜಿಲ್ಲೆಯ ಅಭಿವೃದ್ಧಿಗೆ ಹಾಗೂ ಸಮಾಜದ ಧ್ವನಿ ಇಲ್ಲದ ಜನರಿಗೆ ಧ್ವನಿಯಾಗಿ ಕೆಲಸ ಮಾಡಲು ಶಕ್ತಿ ನೀಡುವಂತೆ ಪ್ರಾರ್ಥಿಸಿದರು. ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಉಲ್ಲೇಖಿಸಿದರು.
ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಮಾತನಾಡಿ,ಕಳೆದ 2-3 ವರ್ಷಗಳಿಂದ ತುಮಕೂರಿನಲ್ಲಿ ಈ ಹಬ್ಬವನ್ನು ಅತ್ಯಂತ ಶಾಂತಿಯುತವಾಗಿ ಹಾಗೂ ಶ್ರದ್ಧೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ .ಹಬ್ಬದ ಮೆರವಣಿಗೆಯ ಸಂದರ್ಭದಲ್ಲಿ ಮೊದಲ ಹಂತದಿAದ ಈದ್ಗಾ ಮೈದಾನ ತಲುಪುವವರೆಗೆ (ಸುಮಾರು 20-25 ಕಿ.ಮೀ.) ಜನರು ಅತ್ಯಂತ ತಾಳ್ಮೆ ಮತ್ತು ನಿಷ್ಠೆಯಿಂದ ನಡೆದುಕೊಂಡು ಹೋಗುವುದನ್ನು ಸ್ವತಹಃ ಗಮನಿಸಿದ್ದೇನೆ. ಈ ರೀತಿ ಶ್ರದ್ಧೆಯಿಂದ ನಡೆಯುವುದು ದೇವರನ್ನು ಪ್ರಾರ್ಥಿಸುವ ಹಾಗೂ ಭಕ್ತಿಯನ್ನು ವ್ಯಕ್ತಪಡಿಸುವ ಒಂದು ಉತ್ತಮ ಹಾದಿಯಾಗಿದೆ.ಈ ಪವಿತ್ರ ಆಚರಣೆಯಲ್ಲಿ ಮತ್ತು ಸಾರ್ವಜನಿಕರೊಂದಿಗೆ ಭಾಗಿಯಾಗಲು ಸಂತೋಷವಾಗುತ್ತದೆ ಎಂದು ತಿಳಿಸಿ, ಮತ್ತೊಮ್ಮೆ ಎಲ್ಲರಿಗೂ ‘ಈದ್ ಮುಬಾರಕ್’ ಶುಭಾಶಯ ಸಲ್ಲಿಸಿದರು.
ಮಕ್ಕಾ ಮಸೀದಿಯ ಅಧ್ಯಕ್ಷರು ಮಾಜಿ ಶಾಸಕರಾದ ಡಾ.ಎಸ್.ಷಪಿ ಅಹಮದ್ ಮಾತನಾಡಿ,ನಮ್ಮ ಕೊನೆಯ ಪ್ರವಾದಿ ಮಹಮದ್ ಪೈಗಂಬರ್ ಅವರ ಜನ್ಮ ದಿನವಾದ ಈದ್ ಹಬ್ಬದಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಮ್ಮೊಂದಿಗೆ ಆಗಮಿಸಿ ಹಬ್ಬದಲ್ಲಿ ಪಾಲ್ಗೊಂಡಿರುವುದು ಸಂತೋಷ ತಂದಿದೆ.ಶಾAತಿ ಮತ್ತು ಸೌಹಾರ್ಧದ ಸಂಕೇತವಾದ ಈದ್ ಹಬ್ಬ ನಾಡಿನ ಜನರಿಗೆ ಒಳ್ಳೆಯದನ್ನು ತರಲಿ ಎಂದರು.
ಕಾರ್ಯಕ್ರಮದಲ್ಲಿ ಮಕ್ಕಾ ಮಸೀದಿಯ ಧಾರ್ಮಿಕ ಮುಖಂಡರಾದ ಮಹಮದ್ ಯಾಸೀನ್ ಪ್ರಾರ್ಥನೆ ಸಲ್ಲಿಸಿದರು.ಮಸೀದಿಯ ಕಾರ್ಯದರ್ಶಿ ಅಬ್ದುಲ್ ಸುಭಾನ್, ಮುಖಂಡರಾದ ಅಫ್ತಾಬ್ ಅಹಮದ್,ಅದೀಬ್ ಅಹಮದ್,ಡಾ.ನಯಾಜ್, ಮೆಹಬೂಬ್ ಪಾಷ, ಅದೀಲ್ ,ತಾಜುದ್ದೀನ್ ಷರೀಫ್ ಮತ್ತಿತರರು ಪಾಲ್ಗೊಂಡಿದ್ದರು.
(Visited 1 times, 1 visits today)





