ಹುಳಿಯಾರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಚಿಕ್ಕನಾಯಕನಹಳ್ಳಿ ಆರ್ಥಿಕ ಸಾಕ್ಷರತಾ ಕೇಂದ್ರ ಜಂಟಿಯಾಗಿ ಬೆಳಗುಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗೂಬೆಹಳ್ಳಿಯ ಅಂಗನವಾಡಿ ಕೇಂದ್ರದಲ್ಲಿ ಆರ್ಥಿಕ ಸೇರ್ಪಡೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಂದಿಕೆರೆ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕರಾದ ಪ್ರಶಾಂತ್ ನಮ್ಮ ಬ್ಯಾಂಕು ಗ್ರಾಮೀಣ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರವಹಿಸಿದ್ದು, ಕೇಂದ್ರ ಸರ್ಕಾರದ ಮಹತ್ತರ ಯೋಜನೆಗಳಾದ ಪ್ರಧಾನ ಮಂತ್ರಿ ಜನ-ದನ ಉಳಿತಾಯ ಖಾತೆ, ಪ್ರಧಾನ ಮಂತ್ರಿ ಸುರಕ್ಷಾ ಹಾಗೂ ಜೀವನ ಜ್ಯೋತಿ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಮುಂತಾದವುಗಳನ್ನು ಹೆಚ್ಚು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿವೆ ಎಂದು ತಿಳಿಸಿದರು.
ಚಿಕ್ಕನಾಯಕನಹಳ್ಳಿ ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಆರ್.ಎಂ.ಕುಮಾರಸ್ವಾಮಿ ಮಾತನಾಡುತ್ತಾ ಇತ್ತೀಚೆಗೆ ಸೈಬರ್ ಕಳ್ಳರ ಹಾವಳಿ ಜಾಸ್ತಿಯಾಗುತ್ತಿದ್ದು, ಅಪರಿಚಿತರಿಗೆ ಫೋನುಗಳನ್ನು ಕೊಡುವುದಾಗಲಿ, ಓಟಿಪಿ ಹೇಳುವುದಾಗಲಿ, ತಪ್ಪು ಸಂದೇಶಗಳನ್ನು ಸ್ವೀಕರಿಸುವುದಾಗಲಿ, ಎಪಿಕೆ ಫೈಲ್ಗಳನ್ನು ಡೌನ್ಲೋಡ್ ಮಾಡುವುದಾಗಲಿ ಮಾಡಿದಲ್ಲಿ ನಿಮ್ಮ ಉಳಿತಾಯ ಖಾತೆಯ ಹಣವನ್ನು ಸೈಬರ್ ಕಳ್ಳರು ತಮಗೆ ಬೇಕಾದ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಾರೆ ಎಂದು ಸಲಹೆ ನೀಡಿದರು.
ಚಿಕ್ಕನಾಯಕನಹಳ್ಳಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೂಪರ್ವೈಸರ್ ಸೌಮ್ಯ ಮಾತನಾಡಿ ಅಂಗನವಾಡಿ ಶಿಕ್ಷಕಿಯರು ಕೇಂದ್ರ ಸರ್ಕಾರದ ಈ ಯೋಜನೆಗಳನ್ನು ಮನೆ ಮನೆಗೆ ಭೇಟಿ ನೀಡಿ ವಿವರಿಸಿ, ಬ್ಯಾಂಕುಗಳ ಮುಖಾಂತರ ಪ್ರಧಾನ ಮಂತ್ರಿ ಸುರಕ್ಷಾ ಹಾಗೂ ಜೀವನ ಜ್ಯೋತಿ ವಿಮಾ ಯೋಜನೆಗಳನ್ನು ನೋಂದಾಯಿಸಿಕೊಳ್ಳಲು ಪ್ರೋತ್ಸಾಹ ನೀಡ ಬೇಕೆಂದು ಸಲಹೆ ನೀಡಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕಿನ ಕಂದಿಕೆರೆ ಶಾಖೆಯ ಅಧಿಕಾರಿ ಜಯಸಿಂಹ ಹಾಗೂ ಸಿಬ್ಬಂದಿ ಅಶೋಕ, ಅಂಗನವಾಡಿ ಶಿಕ್ಷಕಿ ರೇಣುಕಮ್ಮ ಉಪಸ್ಥಿತರಿದ್ದರು.
ಗೂಬೆಹಳ್ಳಿ, ರಂಗೇನಹಳ್ಳಿ, ಟಿ.ತಾಂಡ್ಯ, ನಿರುವಗಲ್ಲು ಗೊಲ್ಲರಟ್ಟಿ, ಓಟಿಕೆರೆ, ನಂದಿಹಳ್ಳಿ ಹಾಗೂ ಮತ್ತಿಘಟ್ಟ ವಲಯದ ಎಲ್ಲ ಹಳ್ಳಿಗಳ ಅಂಗನವಾಡಿ ಶಿಕ್ಷಕಿಯರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
(Visited 1 times, 1 visits today)





