ತುಮಕೂರು: ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ಮಾಡಿದ ಮಹನೀಯರ ಕೊಡುಗೆಯ ಸ್ಮರಣೆ ಅಂಗವಾಗಿ ನಿವೃತ್ತ ಇಂಗ್ಲೀಷ್ ಉಪನ್ಯಾಸಕರಾದ ನಗರದ ರೇವಣ್ಣಸಿದ್ದಪ್ಪನವರು ರಚಿಸಿ ಸಿದ್ಧಪಡಿಸಿದ ಕನ್ನಡರಾಜ್ಯೋತ್ಸವ ಗೀತೆಗಳನ್ನು ರಾಜ್ಯೋತ್ಸವದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ನಗರದ ವಿದ್ಯಾನಿಧಿ ಕಾಲೇಜು ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ರಾಜ್ಯೋತ್ಸವ ಗೀತೆಗಳನ್ನು ಬಿಡುಗಡೆ ಮಾಡಿ, ಕನ್ನಡ ರಾಜ್ಯೋತ್ಸವ ಆಚರಣೆಯ ಆಶಯವೇನು, ಹೇಗೆ ಹಾಗೂ ಏಕೆ ಆಚರಣೆ ಮಾಡಬೇಕು.ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ ಮಹನೀಯರು ಯಾರು? ಅವರ ಕೊಡುಗೆಗಳೇನು? ಎಂಬುದನ್ನು ರೇವಣ್ಣಸಿದ್ದಪ್ಪನವರು ತಮ್ಮ ರಾಜ್ಯೋತ್ಸವ ಗೀತೆಗಳ ಮೂಲಕ ಪ್ರಸ್ತುತಪಡಿಸಿ ಇಂದಿನ ತಲೆಮಾರಿಗೆ ಅವರನ್ನು ಪರಿಚಯಿಸುವ ಶ್ಲಾಘನೀಯ ಕಾರ್ಯ ಮಾಡಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮಾತನಾಡಿ, ಕನ್ನಡ ರಾಜ್ಯೋತ್ಸವ ಆಚರಣೆ ಮಹತ್ವವನ್ನು ಇಂದಿನ ಸಮುದಾಯಕ್ಕೆ ಅರ್ಥ ಮಾಡಿಸಲು ರೇವಣ್ಣಸಿದ್ಧಪ್ಪ ಮಾಡಿರುವ ಪ್ರಯತ್ನ ಸಫಲವಾಗಲಿ. ಅನೇಕ ಇಂಗ್ಲೀಷ್ ಶಿಕ್ಷಕರು ಕನ್ನಡ ಭಾಷೆ, ಸಾಹಿತ್ಯ ಬೆಳವಣಿಗೆಗೆ ಕೊಡುಗೆ ಕೊಟ್ಟಿದ್ದಾರೆ. ಇಂಗ್ಲೀಷ್ ಉಪನ್ಯಾಸಕರಾದ ಇವರ ಕನ್ನಡ ಪ್ರೇಮ ಪ್ರಶಂಸನೀಯ. ಪ್ರಾಥಮಿಕ ಶಿಕ್ಷಣವು ಮಾತೃ ಭಾಷೆಯಲ್ಲಿರಬೇಕು. ಕನಿಷ್ಟ 5ನೇ ತರಗತಿಯವರೆಗೆ ಮಾತೃಭಾಷೆಯಲ್ಲಿ ಮಕ್ಕಳು ಕಲಿಯಬೇಕು ಎಂಬುದು ರಾಷ್ಟ್ರೀಯ ಶಿಕ್ಷಣ ನೀತಿಯಾಗಿದೆ ಎಂದರು.
ರಾಜ್ಯೋತ್ಸವ ಗೀತೆಗಳನ್ನು ರಚಿಸಿ ತಮ್ಮ ಸಂಗಮ ಪಬ್ಲಿಕೇಶನ್ಸ್‍ನಲ್ಲಿ ಬಿಡುಗಡೆ ಮಾಡಿರುವ ರೇವಣ್ಣಸಿದ್ದಪ್ಪನವರು ಮಾತನಾಡಿ, ಕಳೆದ 50 ವರ್ಷಗಳಿಂದ ತಾವು ವಿದ್ಯಾರ್ಥಿಯಾಗಿ, ಉಪನ್ಯಾಸಕರಾಗಿ ಕನ್ನಡ ರಾಜ್ಯೋತ್ಸವ ಭಾಷಣೆ ಕೇಳಿದ್ದು, ಯಾವ ವಿದ್ವಾಂಸರೂ ರಾಜ್ಯೋತ್ಸವವನ್ನು ಏಕೆ, ಹೇಗೆ ಆಚರಿಸಬೇಕು ಎಂದು ಹೇಳಿಲ್ಲ. ಕರ್ನಾಟಕ ಏಕೀಕರಣ ಸವಿನೆನಪಿಗಾಗಿ ಹಾಗೂ ಏಕೀಕರಣಕ್ಕಾಗಿ ಹೋರಾಟ ಮಾಡಿದವರನ್ನು ಸ್ಮರಿಸಿ ಗೌರವಿಸುವ ಕಾರ್ಯಕ್ರಮವಾಗಬೇಕು ಎಂದರು.
ಕನ್ನಡ ಶಾಲೆ, ಕನ್ನಡ ಆಡಳಿತ ಇರುವ ಪ್ರದೇಶಗಳನ್ನು ಒಗ್ಗೂಡಿಸಿ ಕನ್ನಡ ಪ್ರದೇಶ ಏಕೀಕರಣವಾಯಿತು. ಡೆಪ್ಯೂಟಿ ಚನ್ನಬಸಪ್ಪ, ವಿಲಿಯಂ ಅಲೆನ್ ರಸಲ್, ಗಂಗಾಧರ ಮಡಿವಾಳೇಶ್ವರ ತುರಮರಿ, ಕೆ.ಎಲ್.ಇ ಸಂಸ್ಥೆ, ಸಿದ್ದಪ್ಪ ಕಂಬಳಿ, ಆಲೂರು ವೆಂಕಟರಾಯರು, ಅಂದಾನಪ್ಪ ದೊಡ್ಡಮೇಟಿ, ರಾ.ಹ, ದೇಶಪಾಂಡೆ, ಶಂಕರ ಪಾಟೀಲ ಅದರಗುಂಚಿ, ಜಯದೇವಿ ತಾಯಿ ಲಿಗಾಡೆ, ಬಸರಿಗಿಡದ ವೀರಪ್ಪ ಮೊದಲಾದ ಮಹನೀಯರು ಕರ್ನಾಟಕ ಏಕೀಕರಣಕ್ಕೆ ಹೋರಾಟ ಮಾಡಿದ್ದರು ಎಂದು ರೇವಣ್ಣಸಿದ್ದಪ್ಪ ಹೇಳಿದರು.
ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ. ಪ್ರದೀಪ್ ಕುಮಾರ್ ಮಾತನಾಡಿ, ವಿದ್ಯಾವಾಹಿನಿ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿದ್ದ ರೇವಣ್ಣಸಿದ್ದಪ್ಪನವರು ನಿವೃತ್ತಿ ನಂತರವೂ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.ಇಂಗ್ಲೀಷನ್ನು ಕನ್ನಡದಲ್ಲಿ ಕಲಿಯಿರಿ ಎಂಬ ಪುಸ್ತಕ ರಚಿಸಿದ್ದಾರೆ. ಈ ಪುಸ್ತಕ ಶಾಲಾ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯೋಗವಾಗಿದೆ.ಈಗ ಕರ್ನಾಟಕ ಏಕೀಕರಣದ ಮಹತ್ವ ಹಾಗೂ ಅದರ ಹೋರಾಟಗಾರರನ್ನು ಪರಿಚಯಿಸುವಂತಹ ಕಾರ್ಯ ಮಾಡಿದ್ದಾರೆ ಎಂದು ಅಭಿನಂದಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಮಾತನಾಡಿ, ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ ಮಹನೀಯರ ಪರಿಚಯ ಇಂದಿನವರಿಗಿಲ್ಲ. ಅಂತಹ ಮಹನೀಯರ ಕೊಡುಗೆಯನ್ನು ದಾಖಲು ಮಾಡಿದ್ದಾರೆ. ರಾಜ್ಯೋತ್ಸವ ಗೀತೆಗಳ ಮೂಲಕ ಅವರನ್ನು ನಾಡಿನ ಜನರಿಗೆ ಪರಿಚಯಿಸುವ ಪ್ರಯತ್ನವನ್ನು ರೇವಣ್ಣಸಿದ್ದಪ್ಪ ಮಾಡಿದ್ದಾರೆ. ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಇಂತಹ ಮಹನೀಯರನ್ನು ಸ್ಮರಿಸಿ ಗೌರವಿಸಬೇಕು ಎಂದು ಹೇಳಿದರು.
ರೇವಣ್ಣಸಿದ್ಧಪ್ಪನವರು ರಚಿಸಿರುವ ರಾಜ್ಯೋತ್ಸವ ಗೀತೆಗಳಿಗೆ ಗಾಯಕ ವಿಷ್ಣುರಾಮನ್ ಮತ್ತಿತರರು ಧ್ವನಿಯಾಗಿದ್ದಾರೆ.
ಶ್ರೀದೇವಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ಗಾಯಕ ವಿಷ್ಣು ರಾಮನ್, ಮುಖಂಡರಾದ ಶ್ರೀನಿವಾಸ್, ಟಿ.ಆರ್. ಲೀಲಾವತಿ, ಕಂಟಲಗೆರೆ ಸಣ್ಣಹೊನ್ನಯ್ಯ, ಲಿಂಗದೇವರು, ಬೆಳ್ಳಾವಿ ಶಿವಕುಮಾರ್, ಡಿ.ಎಂ. ಸತೀಶ್, ಹೆಚ್.ಸಿ.ಸುರೇಶ್, ಸಾಗರನಹಳ್ಳಿ ಪ್ರಭು ಮತ್ತಿತರರು ಭಾಗವಹಿಸಿದ್ದರು.
(Visited 1 times, 1 visits today)





