ತುಮಕೂರು: ನಗರದ ಮರಳೂರು ಜನತಾ ಕಾಲೋನಿಯ ಆಟೋ ನಿಲ್ದಾಣದ ಬಳಿ ಹಜರತ್ ಟಿಪ್ಪು ಸುಲ್ತಾನ್ ಶಹೀದ್ ಸಂಘಟನೆ ಹಾಗೂ ಮರಳೂರು ದಿಣ್ಣೆ ಆಟೋ ಚಾಲಕರ ಜಂಟಿ ಕ್ರಿಯಾ ಸಮಿತಿಯ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಹಜರತ್ ಟಿಪ್ಪು ಸುಲ್ತಾನ್ ಅವರ ಜನ್ಮ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಇಕ್ಬಾಲ್ ಅಹಮದ್, ಕನ್ನಡ ರಾಜ್ಯೋತ್ಸವವನ್ನು ಎಲ್ಲ ಧರ್ಮ, ಜಾತಿ ಹಾಗೂ ಸಮುದಾಯದವರು ಒಗ್ಗೂಡಿ ಆಚರಿಸುತ್ತಿರುವುದು ಶ್ಲಾಘನೀಯ. ಕನ್ನಡ ಭಾಷೆ ನಮ್ಮೆಲ್ಲರನ್ನೂ ಒಂದುಗೂಡಿಸುವ ಶಕ್ತಿಯಾಗಿದೆ. ನಾಡಿನ ನೆಲ, ಜಲ ಹಾಗೂ ಭಾಷೆಯ ಸಂರಕ್ಷಣೆಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಹೇಳಿದರು. ನಾಡಗೀತೆಯಲ್ಲಿರುವಂತೆ ಕರ್ನಾಟಕವು ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲ ಧರ್ಮದ ಜನರು ಸಹೋದರತ್ವದಿಂದ ಬದುಕಬೇಕು. ಕಾವೇರಿ ಹೋರಾಟದ ಸಂದರ್ಭದಲ್ಲಿ ಧರ್ಮ, ಜಾತಿ ಭೇದ ಮರೆತು ಕನ್ನಡಿಗರೆಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಿದ ಕ್ಷಣಗಳು ನಮ್ಮ ಕನ್ನಡಾಭಿಮಾನಕ್ಕೆ ಸಾಕ್ಷಿಯಾಗಿವೆ. ಮಾನವೀಯತೆ ಮತ್ತು ಮನುಷ್ಯತ್ವವೇ ಎಲ್ಲ ಧರ್ಮಗಳ ಮೂಲತತ್ವವಾಗಿದ್ದು, ಸಮಾಜದಲ್ಲಿ ಯಾವುದೇ ರೀತಿಯ ಭೇದಭಾವಕ್ಕೆ ಅವಕಾಶ ನೀಡಬಾರದು ಎಂದು ತಿಳಿಸಿದರು. ಟಿಪ್ಪು ಸುಲ್ತಾನ್ ಅವರ ಕೊಡುಗೆಗಳನ್ನು ಸ್ಮರಿಸಿದ ಅವರು, ಟಿಪ್ಪು ಸುಲ್ತಾನರು ಈ ನಾಡಿನ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ರೇಷ್ಮೆ ಕೃಷಿಯ ಅಭಿವೃದ್ಧಿಗೆ ಉತ್ತೇಜನ ನೀಡಿದ ಅವರು, ಕ್ಷಿಪಣಿ ತಂತ್ರಜ್ಞಾನದ ಬೆಳವಣಿಗೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ಕನ್ನಂಬಾಡಿ ಅಣೆಕಟ್ಟಿನ ಯೋಜನೆಗೆ ಸಂಬಂಧಿಸಿದಂತೆ ಅವರ ಕೊಡುಗೆಯನ್ನೂ ಸ್ಮರಿಸಬೇಕು. ಬ್ರಿಟಿಷರ ವಿರುದ್ಧ ಹೋರಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಮಕ್ಕಳನ್ನೇ ಒತ್ತೆಯಿಡುವಂತಹ ತ್ಯಾಗ ಮಾಡಿದ ಧೀಮಂತ ನಾಯಕ ಟಿಪ್ಪು ಸುಲ್ತಾನರನ್ನು ಕೆಲವರು ಹೀಯಾಳಿಸುವುದನ್ನು ನಿಲ್ಲಿಸಬೇಕು ಎಂದರು. ನಾಡಿನ ಏಕತೆ, ಸಾಮರಸ್ಯ ಹಾಗೂ ಅಭಿವೃದ್ಧಿಗಾಗಿ ಎಲ್ಲರೂ ಕೈಜೋಡಿಸಬೇಕು. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡುವುದರೊಂದಿಗೆ ನಿಜವಾದ ಕನ್ನಡಿಗರಾಗಿ, ಭಾರತೀಯರಾಗಿ ಒಗ್ಗಟ್ಟಿನಿಂದ ಬದುಕಬೇಕು. ನೆರೆಹೊರೆಯವರು ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ ಅವರ ಸುಖ-ದುಃಖಗಳಲ್ಲಿ ಭಾಗಿಯಾಗುವುದು ಕನ್ನಡಿಗರ ಸಂಸ್ಕೃತಿಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹಜ್ರತ್ ಟಿಪ್ಪು ಸುಲ್ತಾನ್ ಶಹೀದ್ ಸಂಘದ ಅಧ್ಯಕ್ಷರಾದ ಮಹಬೂಬ್ ಸಾಬ್, ಶೇಕ್ ಮಹಮೋದ್ (ಭಾಷಾ), ಜಾವೀದ್ ಪಾಷ, ಅಲ್ತಾಫ್, ಕಾಂಗ್ರೆಸ್ ಮುಖಂಡ ಚಂದ್ ಪಾಷ, ಫೈರೋಜ್ ಅನ್ವರ್ ಖಾನ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು, ಆಟೋ ಚಾಲಕರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
(Visited 1 times, 1 visits today)





