ತುಮಕೂರು: ಸಾರ್ವಜನಿಕರು ತಮ್ಮ ಕೆಲಸಕಾರ್ಯಗಳಿಗಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಅಥವಾ ಶಾಸಕರನ್ನು ಹುಡುಕಿಕೊಂಡು ಅಲೆಯುವ ಪರಿಸ್ಥಿತಿ ತಪ್ಪಿಸಲು ಆಡಳಿತ ವ್ಯವಸ್ಥೆಯೇ ಜನರ ಮನೆಬಾಗಿಲಿಗೆ ಬರುವ ‘ಪ್ರಜಾ ಸೇವಾ ಆಂದೋಲನ’ ಅತ್ಯಂತ ಉತ್ತಮ ಕಾರ್ಯಕ್ರಮವಾಗಿದೆ ಎಂದು ಶಾಸಕ ಸಿ.ಬಿ. ಸುರೇಶ್ ಬಾಬು ಹೇಳಿದರು.
ಹುಳಿಯಾರು ಹೋಬಳಿಯ ಬರಕನಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಬೆಳವಾಡಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ‘ಪ್ರಜಾ ಸೇವಾ ಆಂದೋಲನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾರಂಭದಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ಪ್ರತಿ ಸೋಮವಾರ ಸಂತೆಗೆ ಬರುವ ಜನರ ಕೆಲಸಗಳು ಯಾವುದೇ ಮಧ್ಯವರ್ತಿಗಳ ಹಾವಳಿ ಹಾಗೂ ಲಂಚದ ಆಮಿಷವಿಲ್ಲದೆ ಸಂಜೆ ೪ ರಿಂದ ೬ ಗಂಟೆಯವರೆಗೆ ನಡೆಯುವಂತೆ `ಜನಸ್ಪಂದನ’ ವ್ಯವಸ್ಥೆಯನ್ನು ೧೨೭ ವಾರಗಳ ಕಾಲ ಯಶಸ್ವಿಯಾಗಿ ನಡೆಸಲಾಗಿದೆ. ಅಲ್ಲದೆ ಪ್ರತಿ ಶನಿವಾರ `ಮನೆ ಬಾಗಿಲಿಗೆ ಮನೆ ಮಗ’ ಎಂಬ ಆಶಯದೊಂದಿಗೆ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಶಾಸಕರು ಭೇಟಿ ನೀಡುವ ಕಾರ್ಯಕ್ರಮವನ್ನು ೨೭ ವಾರಗಳ ಕಾಲ ನಡೆಸಲಾಯಿತು. ಇದೀಗ ಸರ್ಕಾರವು ರಾಜ್ಯದ ೨೨೪ ಕ್ಷೇತ್ರಗಳಲ್ಲೂ `ಪ್ರಜಾ ಸೇವಾ ಆಂದೋಲನ’ ಹೆಸರಿನಲ್ಲಿ ಇದನ್ನು ಜಾರಿಗೊಳಿಸಿದೆ ಎಂದರು.
ಕಾರ್ಯಕ್ರಮದ ೮ ನೇ ವಾರದವರೆಗೆ ತಾಲ್ಲೂಕಿನಲ್ಲಿ ಒಟ್ಟು ೭೦೯ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ೫೩೬ ಅರ್ಜಿಗಳಿಗೆ ಪರಿಹಾರ ಕಂಡುಕೊಳ್ಳಲಾಗಿದ್ದು, ೧೪೪ ಅರ್ಜಿಗಳು ಪರಿಶೀಲನಾ ಹಂತದಲ್ಲಿವೆ ಮತ್ತು ೬೪ ಅರ್ಜಿಗಳು ಬಾಕಿ ಉಳಿದಿವೆ ಎಂದು ವಿವರಿಸಿದರು. ಜನರಿಗೆ ಯಾವುದೇ ತೊಂದರೆಯಾಗದAತೆ ತಹಶೀಲ್ದಾರ್ ಅವರೊಂದಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸುವ ಜವಾಬ್ದಾರಿ ನಿಭಾಯಿಸಲಾಗುವುದು ಎಂದು ಭರವಸೆ ನೀಡಿದರಲ್ಲದೆ ಅರ್ಜಿದಾರರು ಆಪ್ ಮೂಲಕ ತಮ್ಮ ಅರ್ಜಿಗಳ ಸ್ಥಿತಿಗತಿ ಹಾಗೂ ವಿಲೇವಾರಿ ಮಾಹಿತಿಯನ್ನು ತಿಳಿದುಕೊಳ್ಳಬಹುದು ಎಂದರು.
ಬರಕನಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಮೂರೂವರೆ ವರ್ಷಗಳಲ್ಲಿ ಸುಮಾರು ೫.೫ ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ೩೩.೩೩ ಲಕ್ಷ ರೂ. ವೆಚ್ಚದಲ್ಲಿ ಸಿಮೆಂಟ್ ರಸ್ತೆ ಕಾಮಗಾರಿಯೂ ಪೂರ್ಣಗೊಂಡಿದೆ ಎಂದು ತಿಳಿಸಿದರು. ಬರಗಾಲ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಬೋರನಕಣಿವೆ ಹಾಗೂ ಸಿಂಗದಳ್ಳಿಕೆರೆಗೆ, ಶೆಟ್ಟಿಕೆರೆ ಸೇರಿದಂತೆ ಹೇಮಾವತಿ ಮತ್ತು ಭದ್ರಾ ನೀರು ಬರುವ ಭಾಗಗಳ ಹಳ್ಳಿಗಳಿಗೆ ಪೈಪ್ಲೈನ್ ಮೂಲಕ ನೇರವಾಗಿ ಓವರ್ಹೆಡ್ ಟ್ಯಾಂಕ್ಗಳಿಗೆ ನೀರು ಪೂರೈಸುವ ಯೋಜನೆ ರೂಪಿಸಲಾಗಿದ್ದು, ಇದರ ಡಿಪಿಆರ್ ಸಿದ್ಧವಾಗುತ್ತಿದೆ. ಇದಕ್ಕೆ ಅನುಮೋದನೆ ದೊರೆತರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯೇ ಇಲ್ಲದಾಗುತ್ತದೆ ಎಂದರು.
ಪ್ರಕೃತಿಗೆ ಹಾನಿಯಾಗುತ್ತಿರುವುದರಿಂದ ರೋಗರುಜಿನಗಳು ಹೆಚ್ಚುತ್ತಿವೆ. ಪರಿಸರ ಉಳಿಸುವ ನಿಟ್ಟಿನಲ್ಲಿ ತಾಲ್ಲೂಕಿನ ೬ ನೇ ತರಗತಿಯಿಂದ ಪದವಿವರೆಗಿನ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಅವರ ಹೆಸರಿನಲ್ಲೇ ಸಸಿಗಳನ್ನು ನೀಡಿ, ಅವುಗಳನ್ನು ಬೆಳೆಸಲು ಪ್ರೋತ್ಸಾಹಿಸಲಾಗುತ್ತಿದೆ. ಈ ಬಾರಿ ಸುಮಾರು ೨೦ ಸಾವಿರ ಸಸಿಗಳನ್ನು ವಿತರಿಸುವ ಗುರಿ ಹೊಂದಿದ್ದು, ೧೦-೧೫ ವರ್ಷಗಳ ನಂತರ ಆ ಗಿಡಗಳು ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ಜೀವನೋಪಾಯಕ್ಕೂ ಆಧಾರವಾಗುವುದರ ಜೊತೆಗೆ ತಾಲ್ಲೂಕಿನಲ್ಲೂ ಮಲೆನಾಡಿನಂತಹ ಹಸಿರು ವಾತಾವರಣ ನಿರ್ಮಾಣವಾಗಲಿದೆ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಪ್ರಬಾರ ಉಪವಿಭಾಗಾಧಿಕಾರಿ ಶಿವಣ್ಣ, ತಾಲ್ಲೂಕು ದಂಡಾಧಿಕಾರಿ ಜಗನ್ನಾಥ್, ಇಒ ಶಿವರಾಜ್, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜ್ಕುಮಾರ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ಹನುಮಂತಣ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
(Visited 1 times, 1 visits today)





