
ತುಮಕೂರು: ನಡೆ ನುಡಿಯಲ್ಲಿ ಒಂದಾಗಿದ್ದ ಜಿ.ಎಸ್.ಸಿದ್ದಲಿಂಗಯ್ಯನವರು ತ್ರಿಕರಣ ಶುದ್ಧಿ ಏನು ಅನ್ನುವುದನ್ನು ಅವರ ಬದುಕಿನಿಂದ ಕಲಿಯಬಹುದು. ಮಾತಿನಲ್ಲಾಗಲೀ, ನಡತೆಯಲ್ಲಾಗಲೀ ಎಂದೂ ಅಶೌಚಕ್ಕೆ ಆಸ್ಪದ ಕೊಟ್ಟವರಲ್ಲ. ಬಹಳ ವರ್ಷಗಳಿಂದ ಅವರು ಸ್ವತಂತ್ರವಾಗಿ ನಡೆಯಲಾರದ ಸ್ಥಿತಿಯಲ್ಲಿದ್ದವರು. ೯೫ ವರ್ಷಗಳ ಸಾರ್ಥಕ ಬದುಕನ್ನು ಸವೆಸಿದ ಜಿ.ಎಸ್.ಸಿದ್ದಲಿಂಗಯ್ಯನವರು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಅಗಲುವಿಕೆ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ನಾಡಿನ ಪ್ರಸಿದ್ಧ ಸಾಹಿತಿ ಡಾ. ಎಸ್.ಪಿ.ಪದ್ಮಪ್ರಸಾದ್ ನುಡಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಜಿ.ಎಸ್.ಸಿದ್ದಲಿಂಗಯ್ಯನವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ಕಸಾಪ ಸಂಚಾಲಕರಾದ ಕೆ.ಎಸ್.ಉಮಾಮಹೇಶ್ ಮಾತನಾಡಿ ಮಧುಗಿರಿಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದರೂ ಅವರಿಗೆ ಅಖಿಲ ಭಾರತ ಮಟ್ಟದ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪದವಿ ಒದಗಿ ಬರದೆ ಇದ್ದುದು ವಿಷಾದನೀಯ ಸಂಗತಿ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಂ.ಜಿ.ಸಿದ್ಧರಾಮಯ್ಯ ಮಾತನಾಡಿ ಜಿ.ಎಸ್.ಸಿದ್ದಲಿಂಗಯ್ಯನವರು ಸಿದ್ಧಗಂಗಾ ಮಠದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು, ಅನೇಕ ದಿನಗಳ ಕಾಲ ಶೂನ್ಯ ಸಂಪಾದನೆ ಕೃತಿಯ ಉಪನ್ಯಾಸ ಮಾಡಿದ್ದನ್ನು ಸ್ಮರಿಸಿದರು.
ಕಾರ್ಯದರ್ಶಿ ಡಾ. ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ, ಸೃಜನಶೀಲ ಬರಹಗಾರರಾಗಿದ್ದ ಜಿ.ಎಸ್.ಸಿದ್ದಲಿಂಗಯ್ಯ ಉತ್ತಮ ಅಧ್ಯಾಪಕರಾಗಿದ್ದು ಕಾಲೇಜು ಅಧ್ಯಾಪಕರಾಗಿ ೩೦ ವರ್ಷಗಳ ಸೇವೆ ಸಲ್ಲಿಸಿ ೮೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯ ವಲಯದ ಯಾವುದೇ ಗುಂಪಿಗೆ ಸೇರಿದ ಅವರನ್ನು ಸಾಹಿತ್ಯ ಕ್ಷೇತ್ರದ ಒಂಟಿಸಲಗ ಎಂದೇ ಕರೆಯಲಾಗುತ್ತಿತ್ತು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷರಾದ ಕೆ.ಎಸ್.ಸಿದ್ಧಲಿಂಗಪ್ಪನವರು ಮಾತನಾಡಿ ನನ್ನ ಕಾಲೇಜು ಗುರುಗಳಾದ ಜಿ.ಎಸ್.ಸಿದ್ದಲಿಂಗಯ್ಯ ಶುದ್ಧಹಸ್ತರು. ಅವರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮಾಡಿದ ಸೇವೆ ಅನನ್ಯವಾದುದು. ಜಿಲ್ಲಾ ಕಸಾಪದೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಅವರು ಸಾಹಿತ್ಯ ಪರಿಷತ್ತಿಗೆ ಗೂಳೂರು ಸಿದ್ಧವೀರಣ್ಣೊಡೆಯರ ಬಗ್ಗೆ ಕೃತಿಯನ್ನು ರಚಿಸಿಕೊಟ್ಟಿದ್ದಾರೆ. ಅವರು ನಮ್ಮ ಜಿಲ್ಲೆಯ ಬೆಳ್ಳಾವಿಯವರಾಗಿದ್ದು ಅವರ ಮರಣದಿಂದ ಸಾಹಿತ್ಯ ಕ್ಷೇತ್ರದ ವಿದ್ವತ್ತಿನ ಕೊಂಡಿ ಕಳಚಿದಂತಾಗಿದೆ ಎಂದರು.
ಸಭೆಯಲ್ಲಿ ಜಿ.ಹೆಚ್.ಮಹದೇವಪ್ಪ, ತೇಜಸ್ವಿ, ರಾಜಶೇಖರ್, ಅಬ್ಬಿನಹೊಳೆ ಸುರೇಶ್, ಮಿಮಿಕ್ರಿ ಈಶ್ವರಯ್ಯ, ನಟರಾಜ್ ಇನ್ನೂ ಮುಂತಾದವರಿದ್ದರು.
(Visited 1 times, 1 visits today)