
ತುಮಕೂರು: ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆಗಳಂತಹ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ. ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಮಂಗಳವಾರ ಹಮ್ಮಿಕೊಂಡಿದ್ದ ಸ್ನಾತಕೋತರ ವಿಭಾಗಗಳ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ನಾಲ್ಕು ಗೋಡೆಗಳಿಗೆ ಮಾತ್ರ ಸೀಮಿತವಾಗಿರದೆ ಕ್ರೀಡೆಯಂತಹ ಪಠ್ಯೇತರ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳುವಂತಿರಬೇಕು. ಕ್ರೀಡೆಯು ಪ್ರತಿಯೊಬ್ಬರ ಜೀವನದಲ್ಲಿ ಅತ್ಯವಶ್ಯಕವಾದ ದೈಹಿಕ ಚಟುವಟಿಕೆಯಾಗಿದ್ದು ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಈಗಿನ ಯುವಜನತೆಯಲ್ಲಿ ಧೈರ್ಯದ ಮನೋಭಾವ ಕಡಿಮೆಯಾಗಿದ್ದು, ಇಂತಹ ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮನ್ನು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು. ಯಾವುದಕ್ಕೂ ಎದೆಗುಂದದೆ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಮೋಜು-ಮಸ್ತಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ದಿಕ್ಕು ತಪ್ಪುತ್ತಿರುವ ಯುವ ಸಮೂಹ ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಅಧ್ಯಕ್ಷ ಪ್ರೊ. ಪರಶುರಾಮ ಕೆ. ಜಿ., ವಾಣಿಜ್ಯಶಾಸ್ತç ವಿಭಾಗದ ಅಧ್ಯಕ್ಷ ಪ್ರೊ. ಬಿ. ಶೇಖರ್, ಹಿರಿಯ ಪ್ರಾಧ್ಯಾಪಕ ಪ್ರೊ. ಸುದರ್ಶನ್ ರೆಡ್ಡಿ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕ ಡಾ. ಸುದೀಪ್ ಕುಮಾರ್ ಆರ್. ಉಪಸ್ಥಿತರಿದ್ದರು. ಡಾ. ಸಿ. ಎಂ. ರವಿ ಸ್ವಾಗತಿಸಿದರು. ಡಾ. ಪೃಥ್ವಿರಾಜ ಟಿ. ವಂದಿಸಿದರು. ಡಾ. ಸಿಬಂತಿ ಪದ್ಮನಾಭ ನಿರೂಪಿಸಿದರು. ಅಂತರವಿಭಾಗ ಮಟ್ಟದ ವಿವಿಧ ಕ್ರೀಡಾಸ್ಪರ್ಧೆಗಳು ನಡೆದವು.