ತುಮಕೂರು: ಮಣ್ಣಿನಿಂದ ಬಂದಕಾಯ ಮಣ್ಣ ಸೇರುವವರೆಗೂ ಪ್ರಕೃತಿಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಮನಸ್ಸು ತನ್ನಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರ ಹಾಕಲು ಇಂತಹ ಕಲಾ ತರಬೇತಿಗಳು ಸಹಕಾರಿಯಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಡಾ: ಬಿ.ಆರ್.ಅಂಬೇಡ್ಕರ್ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಘಟಕ ಯೋಜನೆಯಡಿ ಹಮ್ಮಿಕೊಂಡಿದ್ದ ಕಲಾ ತರಬೇತಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಓದಿನ ಜೊತೆಗೆ ನಮ್ಮಲ್ಲಿ ಅಡಕವಾಗಿರುವ ಕಲೆಗಳನ್ನು ತಿದ್ದಿ-ತೀಡುವ ಕೆಲಸವನ್ನು ಇಂತಹ ಶಿಬಿರಗಳು ಮಾಡಲಿವೆ. ಇವುಗಳ ಉಪಯೋಗವನ್ನು ಪಡೆದು ಯಶಸ್ಸಿನತ್ತ ಮುನ್ನೆಡೆಯಬೇಕೆಂದರು.
ಬಾಲದಲ್ಲಿ ಶಿಕ್ಷಣ ಮುಖ್ಯ. ಶಿಕ್ಷಣದ ಜೊತೆ ಜೊತೆಗೆ ಇಂತಹ ಸಾಂಸ್ಕೃತಿಕ ಚಟುವಟಿಕೆಗಳಿಗೆ ಗಮನಹರಿಸಬೇಕು. ಪಠ್ಯೇತರ ಚಟುವಟಿಕೆಗಳು ನಿಮ್ಮಲ್ಲಿರುವ ಭಯವನ್ನು ಹೋಗಲಾಡಿಸಿ, ನಾಲ್ಕು ಜನರ ಜೊತೆಗೆ ಬೆರೆತು-ಕಲೆತು ಬದುಕುವುದನ್ನು ಕಲಿಸುತ್ತವೆ. ಹಾಗಾಗಿ ಇಂತಹ ಕಲೆಗಳನ್ನು ನೀವುಗಳು ತೊಡಗಿಸಿಕೊಂಡರೆ ಮುಂದೊAದು ದಿನ ಒಳ್ಳೆಯ ಅಧಿಕಾರಿಯಾಗಿ, ಜನರ ಸಮಸ್ಯೆಗಳನ್ನು ಬಗೆಹರಿಸುವ ಚೈತನ್ಯವನ್ನು ಪಡೆಯುತ್ತೀರಿ. ಮೊಬೈಲ್‌ನಿಂದ ದೂರವಿದ್ದು, ಒಳ್ಳೆಯ ಗುರಿಯೊಂದಿಗೆ ಅಭ್ಯಾಸ ಮಾಡಿದರೆ, ನಿಮ್ಮ ತಂದೆ, ತಾಯಿ ಮೆಚ್ಚುವಂತಹ, ಸಮಾಜ ಹೆಮ್ಮೆ ಪಡುವಂತಹ ವ್ಯಕ್ತಿಗಳಾಗುತ್ತೀರಿ. ಹಾಗಾಗಿ ಎಲ್ಲರೂ ಓದಿನತ್ತ ಗಮನಹರಿಸಿ. ನಿಮ್ಮ ಮುಂದಿರುವ ಅವಕಾಶಗಳನ್ನು ಬಳಸಿಕೊಂಡು ಮೇಲ್ಮುಖವಾಗಿ ಬೆಳೆಯಿರಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಉಗಮ ಶ್ರೀನಿವಾಸ್ ಮಾತನಾಡಿ, ಕಲೆಗಳು ಆರೋಗ್ಯಕರ ಸಮಾಜವನ್ನು ಸೃಷ್ಟಿಸಲು ಸಹಕಾರಿಯಾಗಿವೆ. ಚಿಕ್ಕ ಮಕ್ಕಳಿಗೆ ಕಲಾ ತರಬೇತಿ ನೀಡುತ್ತಿರುವುದು ಒಳ್ಳೆಯ ವಿಚಾರ. ಮನುಷ್ಯನ ಒಳಗಿನ ಅಂತಃಕರಣ ತೆರೆದುಕೊಳ್ಳಲು ಕಲೆ ಸಹಕಾರಿಯಾಗಿದೆ. ಆರು ತಿಂಗಳ ತರಬೇತಿ ನಂತರ ನಿಮ್ಮಲ್ಲಿಯೂ ಓರ್ವ ಒಳ್ಳೆಯ ಗಾಯಕ ಜಗತ್ತಿಗೆ ಪರಿಚಯವಾಗಲಿ ಎಂದು ಶುಭ ಹಾರೈಸಿದರು.
ಕಲಾ ತರಬೇತುದಾರ ಕಾಂತರಾಜು ನಿನಾಸಂ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಒಗ್ಗೂಡಿ ಮಕ್ಕಳಿಗೆ ರಂಗಗೀತೆ ಮತ್ತು ಜನಪದ ಗೀತೆಗಳ ತರಬೇತಿಯನ್ನು ಹಮ್ಮಿಕೊಂಡಿದೆ. ಆರು ತಿಂಗಳ ಕಾಲ ಪ್ರತಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಆಸಕ್ತ ಮಕ್ಕಳಿಗೆ ಪೌರಾಣಿಕ, ಆಧುನಿಕ ಮತ್ತು ಹವ್ಯಾಸಿ ರಂಗಭೂಮಿಯ ಗೀತೆಗಳು ಹಾಗೂ ಮೂಲ ಜನಪದ ಗೀತೆಗಳ ಗಾಯನ ತರಬೇತಿ ನೀಡಲಾಗುವುದು. ಕೃತಕ ಬುದ್ದಿಮತ್ತೆ ಮೇಲುಗೈ ಸಾಧಿಸುತ್ತಿರುವ ಇಂದಿನ ಸನ್ನಿವೇಶದಲ್ಲಿ ಮಕ್ಕಳಿಗೆ ಜನಪದ ಕಲೆಗಳ ತರಬೇತಿ ಮರಳಿ ಮಣ್ಣಿಗೆ ಎಂಬ ಸಾಲುಗಳನ್ನು ನೆನಪಿಗೆ ತರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿ.ಎಸ್.ಶಿವಣ್ಣ ಮಾತನಾಡಿ, ಸರಕಾರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಾ ಬಂದಿದೆ. ಊಟ, ತಿಂಡಿ, ವಾಸ್ತವ್ಯ ವ್ಯವಸ್ಥೆಯ ಜೊತೆಗೆ, ಲೇಖನ ಸಾಮಗ್ರಿಗಳು, ಬಟ್ಟೆ, ಇನ್ನಿತರ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಪಠ್ಯದ ಜೊತೆಗೆ, ಪಠ್ಯೇತರ ಚಟುವಟಿಕೆಯ ಭಾಗವಾಗಿ ಈ ಕಲಾ ತರಬೇತಿ ಆಯೋಜಿಸಿದೆ. ಆಸಕ್ತರು ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ತಮ್ಮಲ್ಲಿರುವ ಕಲೆಯನ್ನು ಚೊಕ್ಕಗೊಳಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಕು ಮರ್ಜಿ, ಮೇಲ್ವಿಚಾಕರಾದ ಸುರೇಶಕುಮಾರ್, ನಿಲಯ ಮೇಲ್ವಿಚಾರಕಿ ವಾಸಂತಿ ಆರ್., ಕಲಾವಿದರಾದ ಕುಮಾರ್ ಡಿ.ಸಿ., ರಾಜುಗೌಡ, ಡಾ: ಬಿ.ಆರ್. ಅಂಬೇಡ್ಕರ್ ಬಾಲಕಿಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.
(Visited 1 times, 1 visits today)