ಹುಳಿಯಾರು: ಹುಳಿಯಾರಿನ ಪಶು ಆಸ್ಪತ್ರೆ ಮುಂಭಾಗ ನಡೆಯುತ್ತಿರುವ ವಾರದ ಸಂತೆ ಸ್ಥಳಾಂತರ ಸೇರಿದಂತೆ ನೀರು, ಶೌಚಾಲಯ, ನೆರಳು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಒತ್ತಾಯಿಸಿ ರಾಜ್ಯ ರೈತ ಸಂಘ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಮಂಗಳವಾರಕ್ಕೆ ೬ ದಿನಕ್ಕೆ ಕಾಲಿಟ್ಟಿದೆ.
ರೈತ ಮುಖಂಡ ಸೋಮಜ್ಜನಪಾಳ್ಯದ ಬೀರಲಿಂಗಯ್ಯ ಮಾತನಾಡಿ ರೈತ ಈ ದೇಶದ ಆಸ್ತಿ ಅನ್ನುತ್ತಾರೆ. ಆದರೆ ದೇಶಕ್ಕೆ ಅನ್ನಕೊಡುವ ರೈತ ೬ ದಿನಗಳಿಂದ ಬೀದಿಯಲ್ಲಿ ಕುಳಿತು ಧರಣಿ ಮಾಡುತ್ತಿದ್ದರೂ ಸ್ಪಂಧಿಸುವ ಸೌಜನ್ಯ ಅಧಿಕಾರಿಗಳಿಗೆ ಇಲ್ಲದಂತಾಗಿದೆ. ರೈತನ ಕೂಗು ಅಧಿಕಾರಿಗಳಿಗೆ ಕೇಳದಂತಾಗಿದೆ. ರೈತ ನಿಮ್ಮ ಹಣ, ಆಸ್ತಿ, ಅಧಿಕಾರ ಕೇಳುತ್ತಿಲ್ಲ. ಕಷ್ಟಪಟ್ಟು ಬೆಳೆದ ಉತ್ಪನ್ನಗಳನ್ನು ನೆಮ್ಮದಿಯಾಗಿ ಮಾರುವ ವಾತವರಣ ನಿರ್ಮಾಣ ಮಾಡಿ ಎನ್ನುತ್ತಿದ್ದಾರೆ. ಅದೂ ಇಷ್ಟು ವರ್ಷ ನಾವು ಕಟ್ಟಿರುವ ತೆರಿಗೆ ಹಣದಲ್ಲಿ ಮಾಡಿ ಎಂದು ಕೇಳುತ್ತಿದ್ದಾನೆ ಅಷ್ಟೆ ಎಂದರು.
ಈಗಿರುವ ಸಂತೆ ರಸ್ತೆಯ ಇಕ್ಕೆಲದಲ್ಲಿದೆ. ಮಳೆಗಾಳಿ ಬಂದರ0ತೂ ರೈತ ಕಷ್ಟಪಟ್ಟು ಬೆಳೆದು ತಂದಿದ್ದ ಹೂವು, ಸೊಪ್ಪು, ತರಕಾರಿ, ಹಣ್ಣು ಮಣ್ಣುಪಾಲಾಗುತ್ತದೆ. ಬೇಸಿಗೆ ಕಾಲದಲ್ಲಂತೂ ಬಿಸಿಲಿನ ಝಳಕ್ಕೆ ಕಳೆಗುಂದಿ ಬೆಲೆಯೇ ಇಲ್ಲದಂತಾಗುತ್ತದೆ. ಹಾಗಾಗಿ ಸಾಲಸೂಲ ಮಾಡಿ ಬಿತ್ತಿ, ಬಿಸಿಲುಮಳೆ ಲೆಕ್ಕಿಸದೆ ಸರತಿಸಾಲಿನಲ್ಲಿ ನಿಂತು ಗೊಬ್ಬರ ತಂದು ಬೆಳೆದು ತರುವ ಉತ್ಪನ್ನಗಳು ಹಾಳಾಗಿ ರೈತ ಬೀದಿಪಾಲಾಗುವುದನ್ನು ತಪ್ಪಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂದು ಕೇಳುತ್ತಿದ್ದೇವೆ. ಈ ಬೇಡಿಕೆಗೂ ಸ್ಪಂಧಿಸದಿರುವುದ ನೀವು ರೈತನಿಗೆ ಮಾಡುತ್ತಿರುವ ದ್ರೋಹ ಎಂದರು.
ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ, ತಾಲೂಕು ಕಾರ್ಯಾಧ್ಯಕ್ಷ ಕರಿಯಪ್ಪ, ಹುಳಿಯಾರು ಹೋಬಳಿ ಅಧ್ಯಕ್ಷ ಕೆಂಕೆರೆ ಬಸವರಾಜು, ಟಿ.ಎಸ್.ಪ್ರಶಾಂತ್, ನೀರಾ ಈರಣ್ಣ, ಮೆಕಾನಿಕ್ ಜಗದೀಶ್, ರಮೇಶ್, ಮಂಜುನಾಥ್, ರೇವಣ್ಣ, ನಿಂಗಪ್ಪ, ಹನುಮಂತರಾಜ್ ಅರಸ್, ಪೆದ್ದಾಬೋವಿ, ಬಸವರಾಜು, ಮಂಜನಾಯ್ಕ, ಲಕ್ಷö್ಮಮ್ಮ, ಯಶೋದಮ್ಮ, ಆಶಾ ಮತ್ತಿತರರು ಇದ್ದರು.

ಸಂತೆ ಸ್ಥಳ ಗುರುತಿಸಲು ತಹಸೀಲ್ದಾರ್ ಬರಲಿಲ್ಲ: ಎಪಿಎಂಸಿ ಡಿಡಿ ರಾಜಣ್ಣ ಅವರು ಹುಳಿಯಾರು ಎಪಿಎಂಸಿಯಲ್ಲಿ ಸಂತೆ ಮಾಡಲು ಸ್ಥಳವಿಲ್ಲ ಎಂದಿದ್ದರು. ರೈತರು ಸ್ಥಳವಿದೆ ಬನ್ನಿ ತೋರಿಸುತ್ತೇವೆ ಎಂದಿದ್ದರು. ಹಾಗಾಗಿ ತಹಸೀಲ್ದಾರ್ ಕೆ.ಪುರಂದರ ಅವರು ಭಾನುವಾರ ರಾತ್ರಿ ಧರಣಿ ಸ್ಥಳಕ್ಕೆ ಆಗಮಿಸಿ ಮಂಗಳವಾರ ಬರುತ್ತೇನೆ. ಎಪಿಎಂಸಿಯಲ್ಲಿ ಸಂತೆ ಜಾಗ ಗುರುತಿಸಿ ಎಸಿಗೆ ವರದಿ ಸಲ್ಲಿಸುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಮಂಗಳವಾರ ಸಂಜೆಯಾದರೂ ತಹಸೀಲ್ದಾರ್ ಮಾತ್ರ ಬರಲಿಲ್ಲ.

(Visited 1 times, 1 visits today)