
ಪಾವಗಡ: ತುಮಕೂರಿನಲ್ಲಿ ನಡೆದ ದಿಶಾ ಸಭೆಯಲ್ಲಿ ಸಂಸದ ಗೋವಿಂದ ಕಾರಜೋಳ ಅವರು ಪಾವಗಡ ತಾಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಸಮರ್ಪಕವೆಂದು ತೀವ್ರ ಟೀಕೆ ಮಾಡಿದ ಒಂದು ದಿನದೊಳಗೆ, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಶನಿವಾರ ಪಾವಗಡಕ್ಕೆ ದೌಡಾಯಿಸಿ ಹಲವು ಇಲಾಖೆಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು.
ರೊಪ್ಪ ಗ್ರಾಮದ ಬಳಿಯಿರುವ ಕುಡಿಯುವ ನೀರಿನ ಓವರ್‌ಹೆಡ್ ಟ್ಯಾಂಕ್ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಅಲ್ಲಿ ಕಂಡ ಅಸ್ವಚ್ಛತೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಗ್ರಾಮ ಪಂಚಾಯ್ತಿ ಪಿಡಿಒ ವಿಜಯ್ ಕುಮಾರ್ ಹಾಗೂ ಪುರಸಭೆಯ ಆರೋಗ್ಯ ನಿರೀಕ್ಷಕ ಶಂಸುದ್ದೀನ್ ಅವರನ್ನು ತರಾಟೆ ತೆಗೆದುಕೊಂಡರು.
ನAತರ ಪಟ್ಟಣದ ನಾಗರಕಟ್ಟೆ ಸಮೀಪದ ಹಳೆಯ ಪಂಪ್‌ಹೌಸ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಅಲ್ಲಿ ಬರುತ್ತಿದ್ದ ತುಂಗಭದ್ರ ಕುಡಿಯುವ ನೀರನ್ನು ಸ್ವತಃ ಕುಡಿದು ನೀರಿನ ಗುಣಮಟ್ಟವನ್ನು ಪರಿಶೀಲಿಸಿದರು.
ಆಶ್ರಯ ಬಡಾವಣೆಗೆ ತೆರಳಿ ಮನೆ ಮನೆಗೆ ನೀರು ಸರಬರಾಜು ಮಾಡುವ ಪೈಪ್ಲೈನ್ ವ್ಯವಸ್ಥೆ ಹಾಗೂ ನೀರಿನ ಗುಣಮಟ್ಟದ ಕುರಿತು ನಾಗರಿಕರಿಂದ ನೇರ ಮಾಹಿತಿ ಪಡೆದರು.
ಶಾರದ ವಿದ್ಯಾಪೀಠ ಶಾಲೆಯಲ್ಲಿ ೧೦ನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಪರಿಶೀಲಿಸಿದ ಅವರು, ಪರೀಕ್ಷೆಗೆ ಭಯಪಡದೆ ಗಮನಹರಿಸಿ ಅಧ್ಯಯನ ಮಾಡುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.
ಮುಂದೆ ಕೋಟೆಗುಡ್ಡದ ಕರ್ನಾಟಕ ಪಬ್ಲಿಕ್ ಶಾಲೆಗೆ ಭೇಟಿ ನೀಡಿದಾಗ, ಮುಖ್ಯ ಶಿಕ್ಷಕರು ಮತ್ತು ವಿಜ್ಞಾನ ಶಿಕ್ಷಕರು ಶಾಲೆಗೆ ಗೈರುಹಾಜರಾಗಿರುವುದು ಕಂಡು ಬಿಇಒ ಹಾಗೂ ಎಸಿಗಳಿಗೆ ಜಿಲ್ಲಾಧಿಕಾರಿಗಳು ತೀವ್ರ ಎಚ್ಚರಿಕೆ ನೀಡಿದರು. ಪರೀಕ್ಷಾ ಕಾಲದಲ್ಲಿ ಶಿಕ್ಷಕರು ರಜೆ ತೆಗೆದುಕೊಳ್ಳುವುದು ಗಂಭೀರ ವಿಷಯ ಎಂದು ಅವರು ಕಿಡಿಕಾರಿದ್ದು, ಮಧುಗಿರಿ ಡಿಡಿಪಿಐ ಅವರಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ದೂರವಾಣಿ ಮೂಲಕ ಸೂಚಿಸಿದರು.
ಪಟ್ಟಣದ ಪಿಎಂ ಶ್ರೀ ಆದರ್ಶ ಶಾಲೆಯಲ್ಲಿ ಪಿಎಂ ಶ್ರೀ ಯೋಜನೆಯಡಿ ಖರೀದಿಸಿದ ಲಕ್ಷಾಂತರ ಮೌಲ್ಯದ ಪರಿಕರಗಳು ಸಮರ್ಪಕವಾಗಿ ಬಳಸಲಾಗದಿರುವುದನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡರು. ಮುಖ್ಯಶಿಕ್ಷಕ ವೇಂಕಟೇಶ್ ಅವರಿಗೆ ಪರಿಕರಗಳನ್ನು ವಿದ್ಯಾರ್ಥಿಗಳ ಕಲಿಕೆಗೆ ಪರಿಣಾಮಕಾರಿ ರೀತಿಯಲ್ಲಿ ಬಳಸುವಂತೆ ಸೂಚಿಸಿದರು. ಸ್ಮಾರ್ಟ್ ಕ್ಲಾಸ್ ಸಾಧನಗಳು ಇದ್ದರೂ ತರಗತಿಯಲ್ಲಿ ಬಳಕೆಯಾಗದಿರುವುದು ಸರಿಯಾದ ಕ್ರಮವಲ್ಲ ಎಂದರು.
ಈ ವೇಳೆ ಮದುಗಿರಿಯ ಎಸಿ ಗೋಟುರು ಶಿವಪ್ಪ, ತಹಸಿಲ್ದಾರ್ ವೈ. ರವಿ, ಇಒ ಮಧುಸೂದನ್, ಬಿಇಒ ರೇಣುಕಮ್ಮ, ಬೆಸ್ಕಾಂ ಎಇಇ ಕೃಷ್ಣಮೂರ್ತಿ, ಗ್ರಾಮೀಣ ಕುಡಿಯುವ ನೀರು ವಿಭಾಗದ ಜೆಇ ಬಸವಲಿಂಗಪ್ಪ, ಜೆಇ ಅಂಜಿಬಾಬು, ಹೊಸಕೋಟೆ ಆರ್‌ಐ ಕಿರಣ್ ಕುಮಾರ್, ಸಿಎಓ ಭಾಗ್ಯಮ್ಮ, ಆರೋಗ್ಯ ನಿರೀಕ್ಷಕ ಶಂಸುದ್ದೀನ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಆಅ ಜೊತೆಗಿದ್ದರು.



