
ತುಮಕೂರು: ಜಿಲ್ಲಾಡಳಿತ ಮತ್ತು ಕುಣಿಗಲ್ ತಾಲ್ಲೂಕು ಆಡಳಿತದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವತಿಯಿಂದ ಸೋಮವಾರ ಕುಣಿಗಲ್ ತಾಲ್ಲೂಕು, ಕೊತ್ತಗೆರೆ ಹೋಬಳಿ, ಭಕ್ತರಹಳ್ಳಿ ಗ್ರಾಮದಲ್ಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಎಲ್. ರಾಮಣ್ಣ ರವರ ಅಧ್ಯಕ್ಷತೆಯಲ್ಲಿ ಹಾಗೂ ಭಕ್ತರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಲೀಲಾವತಿ ಹೊನ್ನೇಗೌಡ ರವರ ಉಪಸ್ಥಿತಿಯಲ್ಲಿ ಆಹಾರ ಅದಾಲತ್ ಕಾರ್ಯಕ್ರಮವನ್ನು ನಡೆಸಲಾಯಿತು.
ಜಂಟಿನಿರ್ದೇಶಕರು, ಆಹಾರ ಇಲಾಖೆ ಮತ್ತು ಮಾನ್ಯ ತಹಶೀಲ್ದಾರ್ ಕುಣಿಗಲ್ ತಾಲ್ಲೂಕುರವರುಗಳ ಅನುಪಸ್ಥಿತಿಯಲ್ಲಿ ಸದರಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆಹಾರ ಶಿರಸ್ತೇದಾರರಾದ ಶ್ರೀಹರ್ಷ ಬಿ.ಎಸ್. ರವರು ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಜಿಲ್ಲೆಯ ಪ್ರತಿ ತಾಲ್ಲೂಕಿನ ಹೋಬಳಿ ಮಟ್ಟದಲ್ಲಿ ಆಹಾರ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪಡಿತರ ಚೀಟಿದಾರರು ಜಿಲ್ಲಾ/ ತಾಲ್ಲೂಕು ಕೇಂದ್ರಕ್ಕೆ ಬರುವುದನ್ನು ತಪ್ಪಿಸಲು ಹೋಬಳಿ ಮಟ್ಟದಲ್ಲಿ ಆಹಾರ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಅನರ್ಹರು ಪಿಹೆಚ್‌ಹೆಚ್(ಬಿಪಿಎಲ್) ಪಡಿತರ ಚೀಟಿ ಹೊಂದಿದ್ದಲ್ಲಿ ತಾವಾಗಿಯೇ ಎನ್‌ಪಿಹೆಚ್‌ಹೆಚ್ (ಎಪಿಎಲ್) ಪಡಿತರ ಚೀಟಿಗಳನ್ನಾಗಿ ಬದಲಾಯಿಸಿಕೊಳ್ಳಲು ಸಲಹೆ ನೀಡಿದರು ಹಾಗೂ ತಿಳುವಳಿಕೆಯಿಲ್ಲದೇ ಪಡಿತರ ಚೀಟಿ ಹೊಂದಿಲ್ಲದೇ ಇರುವ ಅರ್ಹ ಬಡವರಿಗೆ ಪಡಿತರ ಚೀಟಿ ಹೊಂದಲು ಸಹಾಯ ಮಾಡುವ ಮೂಲಕ ಅಸಮಾನತೆಯನ್ನು ಹೋಗಲಾಡಿಸಲು ಸಹಕರಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದರು. ಹಾಗೂ ವಯೋವೃದ್ದರಿಗೆ, ಹಾಸಿಗೆ ಹಿಡಿದಿರುವ ಪಡಿತರ ಚೀಟಿದಾರರಿಗೆ ಬಯೋಮೆಟ್ರಿಕ್‌ನಿಂದ ವಿನಾಯಿತಿ ನೀಡಬಹುದಾಗಿದ್ದು, ಇದರ ಸದುಪಯೋಗ ಪಡೆಯಲು ತಿಳಿಸಿದರು.
ಸಾರ್ವಜನಿಕರಿಂದ ಅಹವಾಲು ಸ್ವೀಕಾರ: ಪಡಿತರಚೀಟಿದಾರರಿಂದ/ಸಾರ್ವಜನಿಕರಿ0ದ ಅರ್ಜಿಗಳನ್ನು ಸ್ವೀಕರಿಸಿ ಕೆಲವು ಅರ್ಜಿದಾರರಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲಾಯಿತು ಹಾಗೂ ಸ್ವೀಕರಿಸಿರುವ ಎಲ್ಲಾ ಅರ್ಜಿಗಳನ್ನು ತುರ್ತಾಗಿ ಪರಿಶೀಲಿಸಿ ವಿಲೇವಾರಿ ಮಾಡಲು ಆಹಾರ ನಿರೀಕ್ಷಕರಾದ ಶ್ರೀಮತಿ ಚನ್ನಮ್ಮ ಎನ್.ಟಿರವರಿಗೆ ಸೂಚಿಸಿದರು.
ಹೊಸ ಪಡಿತರ ಚೀಟಿ ವಿತರಣೆ: ವೈದ್ಯಕೀಯ ಕಾರಣದಡಿ ಅರ್ಜಿ ಸಲ್ಲಿಸಿ ಬಡತನ ರೇಖೆಗಿಂತ ಕೆಳಗಿರುವ ಅರ್ಹ ಫಲಾನುಭವಿಗಳಾದ ೦೩ ಪಡಿತರ ಚೀಟಿದಾರರಿಗೆ ಸ್ಥಳದಲ್ಲಿಯೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಭಕ್ತರಹಳ್ಳಿ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಭಕ್ತರಹಳ್ಳಿ ರವರು ಹೊಸ ಪಡಿತರ ಚೀಟಿಗಳನ್ನು ವಿತರಿಸಿದರು.
ಅನ್ನಸುವಿಧ ಯೋಜನೆಯಡಿ ಪಡಿತರ ವಿತರಣೆ: ಪಿ.ಹೆಚ್.ಹೆಚ್ ಪಡಿತರ ಚೀಟಿ ಹೊಂದಿರುವ ೭೫ ವರ್ಷದ ಮೇಲ್ಪಟ್ಟ ಏಕ ಸದಸ್ಯರಿರುವ ವಯೋವೃದ್ದರಿಗೆ ಅವರ ಮನೆ ಬಾಗಿಲಿಗೆ ಪಡಿತರ ವಿತರಿಸಲು ಸರಕಾರ ಹೊಸದಾಗಿ ಅನ್ನ ಸುವಿಧ ಯೋಜನೆ ಜಾರಿಗೆ ತಂದಿದ್ದು, ಅರ್ಹ ಫಲಾನುಭವಿಗಳು ತಮ್ಮ ನ್ಯಾಯಬೆಲೆ ಅಂಗಡಿಗಳಲ್ಲಿ ತಮ್ಮ ಹೆಸರನ್ನು ನಿಗಧಿತ ಅವಧಿಯಲ್ಲಿ ನೊಂದಾಯಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು. ಭಕ್ತರಹಳ್ಳಿ ಗ್ರಾಮದ ಗೌರಮ್ಮ ಮತ್ತು ವೆಂಕಟಮ್ಮ ಎಂಬುವವರ ಮನೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಭಕ್ತರಹಳ್ಳಿ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಭಕ್ತರಹಳ್ಳಿ ರವರೊಂದಿಗೆ ತೆರಳಿ ಅನ್ನಸುವಿಧ ಯೋಜನೆಯಡಿ ಪಡಿತರ ಧಾನ್ಯ ವಿತರಿಸಿದರು ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಧಾನ್ಯಗಳ ಗುಣಮಟ್ಟ ಪರಿಶೀಲಿಸಿದರು.
ಸದರಿ ಕಾರ್ಯಕ್ರಮದಲ್ಲಿ ಕುಣಿಗಲ್ ತಾಲ್ಲೂಕಿನ ಆಹಾರ ಶಿರಸ್ತೇದಾರರಾದ ಶ್ರೀಹರ್ಷ ಬಿ.ಎಸ್., ಆಹಾರ ನಿರೀಕ್ಷಕರಾದ ಚನ್ನಮ್ಮ ಎನ್.ಟಿ, ಭಕ್ತರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಲೀಲಾವತಿಹೊನ್ನೇಗೌಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ರಾಮಣ್ಣ, ಜಾಗೃತ ಸಮಿತಿ ಸದಸ್ಯರಾದ ಪದ್ಮಮ್ಮ, ಭಕ್ತರಹಳ್ಳಿ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಪಡಿತರ ಚೀಟಿದಾರರು, ನ್ಯಾಯಬೆಲೆ ಅಂಗಡಿಗಳ ಮಾಲೀಕರು/ಕಾರ್ಯದರ್ಶಿಗಳು ಹಾಜರಿದ್ದರು.



