
ತುಮಕೂರು: ಈಗಿನ ಮಕ್ಕಳಿಗೆ ಮೊಬೈಲ್ ಬಳಕೆಗೆ ದಾಸರಾಗದೆ ಓದುವ ಹವ್ಯಾಸ ಬೆಳೆಸುವುದು ಅಗತ್ಯವಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ಮಂಗಳವಾರ ಗಾಜಿನ ಮನೆಯ ಸಭಾಂಗಣದಲ್ಲಿ 17 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸನ್ಮಾನ ಮತ್ತು ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳು ಅತಿಯಾದ ಮೊಬೈಲ್ ಬಳಕೆಯಿಂದ ಕೇವಲ ತಾಂತ್ರಿಕ ಜ್ಞಾನ ಬೆಳಸಿಕೊಳ್ಳಬಹುದೇ ಹೊರತು ಮಾನವೀಯ ಸಂಬAಧ ಹಾಗೂ ನೈತಿಕ ಮೌಲ್ಯಗಳಿಂದ ದೂರವಾಗುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಹಿಂದಿನ ದಿನಗಳಲ್ಲಿ ಬಸ್ಸಿನಲ್ಲಿ ಪ್ರಯಾಣಿಸುವಾಗ ಅಕ್ಕಪಕ್ಕದವರನ್ನು ಪರಿಚಯ ಮಾಡಿಕೊಂಡು ಅನುಭವಗಳನ್ನು ಹಂಚಿಕೊಳ್ಳುವ ಸಂಸ್ಕೃತಿ ಇತ್ತು. ಆದರೆ ಇಂದು ಮೊಬೈಲ್ ಬಳಕೆಯಿಂದಾಗಿ ಮನುಷ್ಯ ಮನುಷ್ಯರ ನಡುವಿನ ಬಾಂಧವ್ಯ ಕ್ಷೀಣಿಸುತ್ತಿದೆ. ಅತಿಯಾದ ಮೊಬೈಲ್ ಬಳಕೆ ಯುವ ಪೀಳಿಗೆಯಲ್ಲಿ ಮಾನಸಿಕ ಮತ್ತು ಸಾಮಾಜಿಕ ಅನಾಹುತಗಳನ್ನು ಸೃಷ್ಟಿಸುತ್ತಿದೆ ಎಂದರು.
ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಓದು ಅನಿವಾರ್ಯ. ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸದಿದ್ದರೆ ಭಾಷೆಯ ಉಳಿವು ಕಷ್ಟ ಎಂದರಲ್ಲದೇ, ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆದಾಗ ಮಾತ್ರ ಭಾಷೆಯ ಮೇಲೆ ಹಿಡಿತ ಮತ್ತು ಸಾಹಿತ್ಯ ಸಂಸ್ಕೃತಿ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಹಿಂದೆ ಪ್ರಪಂಚದ ಜ್ಞಾನ ಪಡೆಯಲು ಪತ್ರಿಕೆಗಳನ್ನು ಓದುವ ಸಂಸ್ಕೃತಿ ಇತ್ತು. ಪತ್ರಿಕೆಗಳಲ್ಲಿನ ಲೇಖನಗಳು ಸಮಾಜಮುಖಿ ಸಲಹೆಗಳನ್ನು ಮತ್ತು ಜೀವನಕ್ಕೆ ಅಗತ್ಯವಾದ ಮಾರ್ಗದರ್ಶನಗಳನ್ನು ನೀಡುತ್ತವೆ. ಇಂದಿನ ಪೀಳಿಗೆಯಲ್ಲಿ ಈ ಹವ್ಯಾಸ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದರು.
ಹಿರಿಯ ಸಾಹಿತಿ ಡಾ. ಹಿ.ಚಿ ಬೋರಲಿಂಗಯ್ಯ ಮಾತನಾಡಿ, ಭಾರತದಲ್ಲಿ ಅಳಿದು ಹೋಗುತ್ತಿರುವ ಭಾಷೆಗಳ ಪಟ್ಟಿಯಲ್ಲಿ ನಮ್ಮ ಕನ್ನಡವೂ ಸೇರಿರುವುದೇ ಕಳವಳಕಾರಿ ಸಂಗತಿ. ಜನ ಸಾಮಾನ್ಯರು ಇತರ ಸಮಸ್ಯೆಗಳ ಬಗ್ಗೆ ಎಷ್ಟರ ಮಟ್ಟಿಗೆ ಚಿಂತಿಸುತ್ತಾರೋ, ಅದೇ ರೀತಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಅಳಿವಿನ ಭೀತಿಯ ವಿಷಯದಲ್ಲೂ ಗಮನಹರಿಸಿ, ಕನ್ನಡವನ್ನು ಬಳಸಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಕನ್ನಡವನ್ನು ಉಳಿಸಿ ಬೆಳೆಸಲು ಸರ್ಕಾರಿ ಶಾಲೆಗಳನ್ನೂ ಮತ್ತಷ್ಟು ಸಬಲಗೊಳಿಸುವುದು ಅಗತ್ಯ ಎಂದರು.
ಇ0ದು ಯುವ ಪೀಳಿಗೆ ಮೊಬೈಲ್ ಆಕರ್ಷಣೆಯಿಂದ ದೂರ ಸರಿದು, ಅದರ ಬಳಕೆಯನ್ನು ಮಿತಿಗೊಳಿಸಿ ಹೆಚ್ಚಾಗಿ ಪುಸ್ತಕ ಓದು, ಬರವಣಿಗೆ ಹಾಗೂ ಸಾಹಿತ್ಯ-ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ಅವಶ್ಯ. ತುಮಕೂರು ಜಿಲ್ಲೆ ಸಾಹಿತ್ಯ ಮತ್ತು ಸಂಸ್ಕೃತಿಯ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ದಿ ಕಾಣಬೇಕಿದೆ. ಇತ್ತೀಚಿನ ದಿನಗಳಲ್ಲಿ ‘ಅಕ್ಷರ’ ಅಹಂಕಾರದ ಸಂಕೇತವಾಗಿ, ‘ಜ್ಞಾನ’ ವಿನಯದ ಸಂಕೇತವಾಗಿ ಪರಿವರ್ತಿತವಾಗಿರುವ ಪರಿಸ್ಥಿತಿಯನ್ನು ಬದಲಿಸಿ, ಅಹಂಕಾರವನ್ನು ತೊರೆದು ಜ್ಞಾನದ ನಿಜವಾದ ಮೌಲ್ಯವನ್ನು ಕಾಪಾಡುವುದು ಇಂದಿನ ಯುವಪೀಳಿಗೆಯ ಮಹತ್ವದ ಜವಾಬ್ದಾರಿಯಾಗಿದೆ ಎಂದರು.
ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ, ಈಗಿನ ಮಕ್ಕಳು ಮೊಬೈಲ್ ಮಾಯೆಯಲ್ಲೇ ಮುಳುಗಿರುವ ಪೀಳಿಗೆಯ ಕಾರಣದಿಂದ ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ, ಕಲೆ, ಬರವಣಿಗೆ ಮತ್ತು ಓದುವ ಸಂಸ್ಕೃತಿ ಮಾಯವಾಗಬಹುದೆಂಬ ಆತಂಕ ಉಂಟಾಗಿದೆ. ಆದರೆ, ಯುವಪೀಳಿಗೆ ಮೊಬೈಲ್ ಬಳಕೆಯನ್ನು ಮಿತಿಗೊಳಿಸಿ, ಕನ್ನಡ ಪುಸ್ತಕ ಓದು, ಬರವಣಿಗೆ, ನಾಟಕ, ಕಾವ್ಯ, ಕಲೆಗಳತ್ತ ಆಸಕ್ತಿ ತೋರಿಸಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಕನ್ನಡದ ವೈಭವ ಉಳಿದು ಮುಂದಿನ ತಲೆಮಾರಿಗೆ ಸಮೃದ್ಧಿಯಾಗಿ ತಲುಪಲಿದೆ ಎಂದರು.
ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರು ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶ್ರೀ ನಿಶ್ಚಲಾನಂದ ಮಹಾಸ್ವಾಮೀಜಿ, ಲೇಖಕ ಕರೀಗೌಡ ಬೀಚನಹಳ್ಳಿ, ಕೈಗಾರಿಕೋದ್ಯಮಿ ಹೆಚ್.ಜಿ ಚಂದ್ರಶೇಖರ್, ಸೇರಿದಂತೆ ಕನ್ನಡ ಸೇನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹದಿನೇಳನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳು
• ವಿದ್ಯಾರ್ಥಿಗಳ ಕೊರತೆಯಿಂದ ನಡೆಯುತ್ತಿರುವ ಕನ್ನಡ ಶಾಲೆಗಳನ್ನು ಮುಚ್ಚದೆ, ಅವುಗಳನ್ನು ಬಲಪಡಿಸಲು ಕ್ರಮ ಕೈಗೊಳ್ಳಬೇಕು.
• ತುಮಕೂರು ಜಿಲ್ಲೆ ಜಾನಪದ ಕಣಜ ಎಂದೇ ಪ್ರಸಿದ್ದಿಯಾಗಿದೆ. ಜಾಗತೀಕರಣದ ಭರಾಟೆಯಲ್ಲಿ ಆ ಸಂಸ್ಕೃತಿ ನಶಿಸಿಹೋಗುತ್ತಿದೆ. ಆದ್ದರಿಂದ ಅಳಿದುಳಿದ ಜಾನಪದ ವಸ್ತುಗಳನ್ನೆಲ್ಲಾ ಸಂಗ್ರಹಿಸಿ ತುಮಕೂರು ಬಳಿ ಜಾನಪದ ಲೋಕ ಸಂಗ್ರಹಾಲಯದ ನಿರ್ಮಾಣವಾಗಬೇಕು ಮತ್ತು ತುಮಕೂರಿನ ಬಳಿ ಕಲಾಗ್ರಾಮದ ನಿರ್ಮಾಣಕ್ಕೆ ಐದು ಎಕರೆ ಭೂಮಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡುವುದು.
• ಕರ್ನಾಟಕ ರಾಜ್ಯ ಸರ್ಕಾರದ ಗ್ರಂಥಾಲಯ ಇಲಾಖೆ ಆಯಾಯ ವರ್ಷ ಪ್ರಕಟವಾಗುವ ಪುಸ್ತಕಗಳನ್ನು ಆಯಾ ವರ್ಷವೇ ಖರೀದಿಸಿ ಲೇಖಕರಿಗೆ, ಪ್ರಕಾಶಕರಿಗೆ ಹಣ ಬಿಡುಗಡೆ ಮಾಡುವ ಮೂಲಕ ಪುಸ್ತಕ ಸಂಸ್ಕೃತಿಯನ್ನು ಪ್ರೋತ್ಸಾಹಿಸಬೇಕು.
• ತುಮಕೂರು ಜಿಲ್ಲೆ ಕೋಟೆ ಕೊತ್ತಲಗಳ ನಾಡು, ಸ್ಮಾರಕಗಳ ಬೀಡು. ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸವನ್ನು ಸಾರುವ ಸ್ಮಾರಕಗಳ ರಕ್ಷಣೆ ಮಾಡಬೇಕು. ಆ ಎಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮೂರ್ತಿಶಿಲ್ಪ, ಸ್ಮಾರಕ ಶಿಲ್ಪಗಳನ್ನು ಒಂದೆಡೆ ಸಂಗ್ರಹಿಸಿ ವಸ್ತು ಸಂಗ್ರಹಾಲಯ ನಿರ್ಮಿಸಬೇಕು.




