
ಮಧುಗಿರಿ: ಉತ್ತಮವಾದ ಶಿಕ್ಷಣದ ಜೊತೆಗೆ ಶಿಕ್ಷಣದ ಮೌಲ್ಯವನ್ನು ಇಂದಿಗೂ ಈ ಕಾಲೇಜು ಕಾಪಾಡಿಕೊಂಡಿದ್ದು ಸಾವಿರಾರು ಮಕ್ಕಳ ಭವಿಷ್ಯವನ್ನು ರೂಪಿಸಿದೆ ಎಂದು ನಿವೃತ್ತ ಪ್ರಾಂಶುಪಾಲ ಟಿ.ಜಿ.ಗೋವಿಂದರಾಜು ತಿಳಿಸಿದರು.
ಪಟ್ಟಣದ ಗೌತಮಬುದ್ಧ ಪದವಿಪೂರ್ವ ಕಾಲೇಜಿನಲ್ಲಿ ೨೦೦೨-೦೪ನೇ ಸಾಲಿನ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಕಾಲೇಜಿನಲ್ಲಿ ಉತ್ತಮ ಶಿಕ್ಷಣದ ವಾತಾವರಣವಿದ್ದು ಇಂದಿಗೂ ಕೂಡ ಸಾವಿರಾರು ಮಕ್ಕಳು ಉತ್ತಮ ಭವಿಷ್ಯವನ್ನು ಕಂಡುಕೊ0ಡಿದ್ದಾರೆ. ಗುಣಮಟ್ಟದ ಭೋದನಾ ವ್ಯವಸ್ಥೆಯಿದ್ದು ಇಂದಿಗೂ ಇಲ್ಲಿ ಕಲಿತ ಮಕ್ಕಳು ಸಮಾಜದ ಉತ್ತಮ ಪ್ರಜೆಗಳಾ ಗಿದ್ದಾರೆ ಎಂದರು.
ಅರ್ಥಶಾಸ್ತ್ರದ ಉಪನ್ಯಾಸಕ ಕೃಷ್ಣಾರೆಡ್ಡಿ ಮಾತನಾಡಿ, ತಾಯಿ ಮೊದಲ ಗುರುವಾದರೆ ಅಕ್ಷರ ಕಲಿಸಿದ ಗುರು ಎರಡನೇ ತಾಯಿ. ಭೂ ಮಂಡಲವನ್ನು ಹಾಳೆಯಾಗಿಸಿ ಸಮಸ್ತ ಅರಣ್ಯವನ್ನು ಕುಂಚವಾಗಿಸಿ ಸಪ್ತ ಸಮುದ್ರವನ್ನು ಶಾಹಿಯಾಗಿಸಿ ಬರೆದರೂ ಗುರುಗಳ ಮೌಲ್ಯವನ್ನು ಬರೆಯಲು ಸಾಧ್ಯವಿಲ್ಲ. ಸತ್ಯಕ್ಕಾಗಿ ಏನನ್ನು ಬೇಕಾದರೂ ತ್ಯಾಗ ಮಾಡಿ ಆದರೆ ಸತ್ಯವನ್ನು ಯಾವುದಕ್ಕೂ ತ್ಯಾಗ ಮಾಡಬಾರದು. ಮಗು ಜನಿಸಿದರೆ ತಾಯಿ ಗರ್ವ ಪಡಬೇಕು. ಮಗ ಬೆಳೆದರೆ ತಂದೆ ಗರ್ವ ಪಡೆಯಬೇಕು. ಬದುಕಿದರೆ ಸಮಾಜ ಮೆಚ್ಚಬೇಕು. ಸತ್ತರೆ ಶತ್ರುಗಳು ಕಣ್ಣೀರಿಡಬೇಕು. ಇಂತಹ ನಾಣ್ಣುಡಿಗಳ ಅರ್ಥದಂತೆ ನಮ್ಮ ಬದುಕಿರಬೇಕು. ಅಂತಹ ಜೀವನ ನಿಮ್ಮದಾದರೆ ನಾವು ಕಲಿಸಿದ ಶಿಕ್ಷಣ ಸಾರ್ಥಕ ಎಂದರು.
ಇಂಗ್ಲೀಷ್ ಉಪನ್ಯಾಸಕ ದೊಡ್ಡಮಲ್ಲಯ್ಯ ಮಾತನಾಡಿ ಕಳೆದ ೨೨ ವರ್ಷದ ನೆನಪಿನ ಪ್ರತಿಕ್ಷಣವನ್ನು ನೀವು ಇಂದು ಸಂತೋಷದಿAದ ಅನುಭವಿಸಿದ್ದೀರಿ. ನಮ್ಮ ಕಾಲೇಜಿನಲ್ಲಿ ಯಾವ ವಿದ್ಯಾರ್ಥಿಗಳನ್ನು ಹಾಳಾಗಲು ಅವಕಾಶ ನೀಡಲ್ಲ. ಪ್ರತಿಕ್ಷಣ ನಿಮ್ಮ ಬಗ್ಗೆ ಗಮನ ಹರಿಸಿ ಶಿಕ್ಷಣ ನೀಡಿದ್ದೇವೆ. ಕೋಟಿ ಹಣ ಸಂಪಾದನೆ ಮಾಡಬಹುದು ಆದರೆ ನಿಮ್ಮ ಈ ನೆನಪುಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದು ನಿಮ್ಮ ಬದುಕಲ್ಲಿ ಸಂತೋಷ ತರಲಿ. ದೇವರ ಅಣತಿಯಂತೆ ಬದುಕಲು ನಾನು ಹೇಳುವ ೪ ಅಂಶಗಳನ್ನು ಮೈಗೂಡಿಸಿಕೊಳ್ಳಬೇಕು. ಮೊದಲನೆಯದಾಗಿ ನಿಮ್ಮ ನಡತೆ ಬಗ್ಗೆ ಬೇರೆಯವರು ಅನುಮಾನ ಪಡಬಾರದು. ಹಾಗೂ ಯಾವುದೇ ಕೆಟ್ಟ ಅಭ್ಯಾಸ ಕಲಿಯಬಾರದು. ಇತರರ ಹಣಕ್ಕೆ ಆಸೆ ಪಡಬಾರದು. ನಾಲ್ಕನೆಯದಾಗಿ ನಿಮ್ಮ ಯಾವುದೇ ವೃತ್ತಿಯಿರಲಿ ಅದನ್ನು ಗೌರವಿಸಬೇಕು. ಇದನ್ನು ಪಾಲಿಸಿದರೆ ಯಾರನ್ನೂ ನೀವು ಆಶ್ರಯಿಸುವಂತಿಲ್ಲ. ಭಗವಂತನೇ ನಿಮ್ಮ ನೆರವಿಗೆ ಬರುತ್ತಾನೆ ಎಂದರು.
ಹಳೆಯ ವಿದ್ಯಾರ್ಥಿ ಸಂಘದ ವಿದ್ಯಾರ್ಥಿ ವಕೀಲ ತಿಮ್ಮ ರಾಜು ಮಾತನಾಡಿ, ಶಿಕ್ಷಕರ ಜೊತೆಗೆ ಇದ್ದು ಅವರಿಗೆ ಅಡುಗೆ ಮಾಡಿಕೊಂಡು ಶಿಕ್ಷಣ ಮುಗಿಸಿದೆ. ಆ ಸಮಯದಲ್ಲಿ ಅವರು ನೀಡಿದ ಭರವಸೆಯಿಂದ ಈ ವೃತ್ತಿಯಲ್ಲಿದ್ದು ಬದುಕಿಗೆ ಆಸರೆಯಾಗಿದೆ. ಇನ್ನು ರಾಜಕೀಯದಲ್ಲೂ ಸಂತೃಪ್ತನಾಗಿದ್ದು ಅದಕ್ಕೆ ಸ್ಥಳೀಯ ಶಾಸಕ ಕೆ.ಎನ್.ರಾಜಣ್ಣನವರ ಆಸರೆ ದೊರೆಯಿತು. ಇದಕ್ಕೆಲ್ಲ ಕಾರಣ ಈ ಕಾಲೇಜಿನಲ್ಲಿ ನಾನು ಕಲಿತ ಪ್ರಾಮಾಣಿಕತೆ ಹಾಗೂ ಶಿಸ್ತುಬದ್ಧ ಶಿಕ್ಷಣ ಕಾರಣ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಪ್ರಮೀಳ ರೇವಯ್ಯ, ಪ್ರಾಂಶುಪಾಲ ಶ್ರೀನಿವಾಸ್, ನಿವೃತ್ತ ಪ್ರಾಂಶುಪಾಲ ಟಿ.ಜಿ..ಗೋವಿಂದರಾಜು, ನಾಗಪ್ಪ, ಜಿ.ಸಿ.ಕೃಷ್ಣಾರೆಡ್ಡಿ, ಪ್ರಕಾಶ್ ರೆಡ್ಡಿ, ಕಾಲೇಜು ಸಿಬ್ಬಂದಿಗಳು, ಹಳೆಯ ವಿದ್ಯಾರ್ಥಿಗಳಾದ ಅಶೋಕ್, ಮುತ್ತುರಾಜ್, ಮದುಸೂಧನ್, ಹನುಮಂತರಾಜು, ನರಸಿಂಹಮೂರ್ತಿ, ರಂಗರಾಜು, ಸಂತೋಷ್, ಮೋಹನ್, ವೆಂಕಟಲಕ್ಷ್ಮೀ ಅಶೋಕ್ ಹೆಬ್ಬಾರ್, ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದು ಎಲ್ಲರೂ ಗೌರವಯುತವಾಗಿ ಗುರುವಂದನೆ ನೆರವೇರಿಸಿದರು.





