ತುರುವೇಕೆರೆ: ಕಳೆದ ಐವತ್ತಕ್ಕೂ ಹೆಚ್ಚು ವರ್ಷದಿಂದ ತಮ್ಮ ಅನುಭವದಲ್ಲಿರುವ ಜಮೀನಿನ ದಾಖಲೆಗಳನ್ನು ಕೆಲವು ವ್ಯಕ್ತಿಗಳು ಕಂದಾಯ ಇಲಾಖೆಗೆ ತಪ್ಪು ಮಾಹಿತಿ ನೀಡಿ ಬೇರೆಯವರ ಹೆಸರಿಗೆ ಮಾಡಿಸಿಕೊಂಡು ನಮ್ಮನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದ್ದಾರೆಂದು ಆರೋಪಿಸಿ ಕರಡಗೆರೆ ಗ್ರಾಮದ ಶಿವಪ್ಪನವರ ಕುಟುಂಬದ ಸದಸ್ಯರು ಗ್ರಾಮಸ್ಥರೊಡನೆ ಇಲ್ಲಿಯ ಪೊಲೀಸ್ ಠಾಣೆ ಮುಂಭಾಗ ಕೆಲ ಕಾಲ ಪ್ರತಿಭಟನೆ ಮಾಡಿದ ಘಟನೆ ನಡೆಯಿತು.
ಕರಡಗೆರೆಯಲ್ಲಿ ಕಳೆದ ಐವತ್ತು ವರ್ಷಗಳಿಗೂ ಹಿಂದೆ ಪೂಜಾರ್ ಹುಚ್ಚಪ್ಪ ಎಂಬುವವರು ಶಿವಪ್ಪ ಎಂಬುವವರ ಕುಟುಂಬಕ್ಕೆ ಕೆಲ ಜಮೀನನ್ನು ಮಾರಾಟ ಮಾಡಿದ್ದರು. ನಂತರ ಶಿವಪ್ಪನವರ ಕುಟುಂಬ ಆ ಜಮೀನಿನ ಅಭಿವೃದ್ಧಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡಿಕೊಂಡಿದ್ದರು. ಈಗ ಅದೇ ಗ್ರಾಮದ ಹನುಮಂತಯ್ಯ ಎಂಬುವವರ ಕುಟುಂಬದ ಸದಸ್ಯರು ಸದರಿ ಜಮೀನು ತಮಗೆ ಸೇರಿದ್ದು ಎಂದು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ತಮ್ಮ ಜಮೀನನ್ನು ಅವರ ಹೆಸರಿಗೆ ಮಾಡಿಕೊಂಡು ತಮಗೆ ವಂಚಿಸಿದ್ದಾರೆ0ದು ಶಿವಪ್ಪನವರ ಕುಟುಂಬದ ಸದಸ್ಯರು ದೂರಿದ್ದಾರೆ.
ಮಂಗಳವಾರ ಶಿವಪ್ಪನವರ ಜಮೀನಿನ ಬಳಿ ಬಂದ ಕೆಲವು ಮಂದಿ ಜಮೀನನ್ನು ವಶಪಡಿಸಿಕೊಳ್ಳಲು ಮುಂದಾದರು. ಈ ವೇಳೆ ಶಿವಪ್ಪನವರ ಕುಟುಂಬದ ಪರವಾಗಿ ಗ್ರಾಮದ ಬಹುತೇಕ ಮಂದಿ ಮಾತನಾಡಿದರು. ಈ ವೇಳೆ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ವಿಷಯ ಅರಿತ ಜಾಗೃತ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಈ ವೇಳೆ ಪೊಲೀಸ್ ಠಾಣೆಯಲ್ಲಿದ್ದ ಕಿರಿಯ ಅಧಿಕಾರಿಗಳು ಸದ್ಯ ಹಿರಿಯ ಅಧಿಕಾರಿಗಳು ರಾಷ್ಟ್ರಪತಿಯವರ ಆಗಮನ ಭದ್ರತೆಗಾಗಿ ತೆರಳಿರುವುದರಿಂದ ಈ ಸಮಸ್ಯೆಯನ್ನು ಸದ್ಯ ಬಗೆಹರಿಸಲು ಸಾಧ್ಯವಿಲ್ಲ. ಹಿರಿಯ ಅಧಿಕಾರಿಗಳು ಬರುವ ತನಕ ಯಾವುದೇ ಗೊಂದಲಕ್ಕೆ ಆಸ್ಪದ ನೀಡಬೇಡಿ ಎಂದು ಎರಡೂ ಕಡೆಯವರನ್ನು ಸಮಾಧಾನಪಡಿಸಿ ಪೊಲೀಸರು ಕಳಿಸಿದರು.

(Visited 1 times, 1 visits today)