
ಹುಳಿಯಾರು: ಸಣ್ಣಪುಟ್ಟ ವಿಚಾರಗಳಿಗೂ ಗಂಟೆಗಟ್ಟಲೆ ವಾಗ್ವಾದ, ಸದಸ್ಯರ ನಡುವಿನ ಮಾತಿನ ಚಕಮಕಿ ಹಾಗೂ ಮಧ್ಯರಾತ್ರಿಯವರೆಗೂ ನಡೆದರೂ ತೀರ್ಮಾನವಾಗದೆ ಸಭೆ ಮುಂದೂಡಿಕೆಯಾಗುತ್ತಿದ್ದ ಹುಳಿಯಾರು ಪಟ್ಟಣ ಪಂಚಾಯಿತಿಯಲ್ಲಿ ಈ ಬಾರಿ ಅಚ್ಚರಿಯ ಬದಲಾವಣೆ ಕಂಡುಬ0ದಿದೆ. ಶಾಸಕ ಸಿ.ಬಿ.ಸುರೇಶ್‌ಬಾಬು ಅವರ ಸಮ್ಮುಖದಲ್ಲಿ ಹಾಗೂ ಅಧ್ಯಕ್ಷೆ ಪ್ರೀತಿ ರಾಘವೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯು ಕೇವಲ ೬೦ ರಿಂದ ೭೦ ನಿಮಿಷಗಳಲ್ಲಿ ಮುಕ್ತಾಯಗೊಂಡು ಹೊಸ ದಾಖಲೆ ಬರೆದಿದೆ.
ಅಜೆಂಡಾದಲ್ಲಿದ್ದ ೬೦ ವಿಷಯಗಳಿಗೂ ಸರ್ವಾನುಮತದ ಅಂಗೀಕಾರ: ಸಾಮಾನ್ಯವಾಗಿ ಗಂಭೀರ ಚರ್ಚೆ ಬಯಸುವ ಸುಮಾರು ೩೦ ಕ್ಕೂ ಹೆಚ್ಚು ವಿಷಯಗಳು ಅಜೆಂಡಾದಲ್ಲಿದ್ದರೂ, ಈ ಬಾರಿ ಯಾವುದೇ ಪ್ರತಿರೋಧವಿಲ್ಲದೆ ಎಲ್ಲವೂ ಸುಗಮವಾಗಿ ‘ಪಾಸ್’ ಆಗಿವೆ. ಇದ್ದು ಅಚ್ಚರಿಗೆ ಕಾರಣವಾಗಿದೆ.
ಹಲವು ವರ್ಷಗಳಿಂದ ಬಾಕಿ ಇದ್ದ ಕಾಮಗಾರಿ ಬಿಲ್ ಪಾವತಿ, ಕಂದಾಯ ಮತ್ತು ನೀರಿನ ಸುಂಕ ಹೆಚ್ಚಳ, ಬಸ್ ನಿಲ್ದಾಣ ಆ ಧುನೀಕರಣ ಹಾಗೂ ಶಿಶುವಿಹಾರದ ಬಳಿ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಸಭೆ ಹಸಿರು ನಿಶಾನೆ ತೋರಿದೆ.
ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಹಕ್ಕು ಪತ್ರ ನೀಡುವ ಮತ್ತು ಒಂಬತ್ತನೇ ವಾರ್ಡ್ನ ೫ ಗುಂಟೆ ಜಾಗಕ್ಕೆ ಏಕ ನಿವೇಶನ ವಿನ್ಯಾಸ ನಕ್ಷೆ ಮಂಜೂರಾತಿಯ0ತಹ ನಿರ್ಧಾರಗಳನ್ನು ಕ್ಷಣ ಮಾತ್ರದಲ್ಲಿ ತೆಗೆದುಕೊಳ್ಳಲಾಗಿದೆ.
ಒಟ್ಟಾರೆಯಾಗಿ, ಜಹೀರ್ ಸಾಬ್, ದಸ್ತಗಿರಿ ಸಾಬ್ ಸೇರಿದಂತೆ ಕೆಲ ಸದಸ್ಯರ ಅನುಪಸ್ಥಿತಿಯ ನಡುವೆಯೂ ನಡೆದ ಈ ಸಭೆಯು, ಹುಳಿಯಾರು ಪಟ್ಟಣ ಪಂಚಾಯಿತಿಯ ಇತಿಹಾಸದಲ್ಲಿ ಅತ್ಯಂತ “ವೇಗದ ಮತ್ತು ಸಹಮತದ ಸಭೆ” ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
“ಕಾರು ಬೇಡ” ಎಂದ ಮುಖ್ಯಾಧಿಕಾರಿ: ಮಿತವ್ಯಯದ ಪಾಠ: ಸಭೆಯ ಮತ್ತೊಂದು ವಿಶೇಷವೆಂದರೆ ಮುಖ್ಯಾಧಿಕಾರಿ ಮಂಜುನಾಥ್ ಅವರ ನಡೆ. ಪಂಚಾಯಿತಿ ವತಿಯಿಂದ ತಮಗೆ ಕಾರು ಖರೀದಿಸುವ ಪ್ರಸ್ತಾಪವನ್ನು ಅವರು ನಯವಾಗಿ ತಿರಸ್ಕರಿಸಿದರು. “ಅಧ್ಯಕ್ಷರಿಗೆ ಕಾರಿನ ಅಗತ್ಯವಿದೆ” ಎಂಬ ಸದಸ್ಯರ ಒತ್ತಾಯಕ್ಕೆ ಉತ್ತರಿಸಿದ ಅವರು, “ಅಧ್ಯಕ್ಷರಿಗಾಗಿ ಕಾರು ಖರೀದಿಸಲು ಕಾನೂನಿನಲ್ಲಿ ಅವಕಾಶವಿಲ್ಲ” ಎಂದು ತಿಳಿಸುವ ಮೂಲಕ ಲಕ್ಷಾಂತರ ರೂಪಾಯಿಗಳ ಸಾರ್ವಜನಿಕ ಹಣ ಪೋಲಾಗುವುದನ್ನು ತಪ್ಪಿಸಿ ಗಮನ ಸೆಳೆದರು.
ಪಟ್ಟಣಕ್ಕೆ ಸಿಸಿ ಕ್ಯಾಮೆರಾ ಕಣ್ಗಾವಲು: ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು ಸೇರಿದಂತೆ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಹುಳಿಯಾರು ಪಟ್ಟಣಕ್ಕೆ ಸಿಸಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಪೊಲೀಸ್ ಇಲಾಖೆಯಿಂದ ಅಳವಡಿಸಿದ್ದ ಕ್ಯಾಮೆರಾಗಳು ನಿರ್ವಹಣೆಯಿಲ್ಲದೆ ಸ್ಥಗಿತಗೊಂಡಿದ್ದವು. ಹಾಗಾಗಿ ಪಂಚಾಯ್ತಿಯಿ0ದಲೇ ಕ್ಯಾಮರ ಅಳವಡಿಸಿ ಕ್ಯಾಮೆರಾಗಳ ನಿರ್ವಹ ಣೆಯನ್ನು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲು ತೀರ್ಮಾನಿಸಿದ್ದು, ಪಟ್ಟಣದ ನಾಗರಿಕರಲ್ಲಿ ಒಳ್ಳೆಯ ಸುದ್ದಿಯಾಗಿದೆ.
ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸಿದ್ದಿಕ್ ಅವಿರೋಧ ಆಯ್ಕೆ: ದಿವಂಗತ ಚಂದ್ರಶೇಖರ್ ಅವರ ನಿಧನದಿಂದ ತೆರವಾಗಿದ್ದ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸದಸ್ಯ ಸಿದ್ದಿಕ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಒಂದು ಸ್ಥಾನ ಖಾಲಿ ಇದ್ದ ಸಮಿತಿಯ ಸದಸ್ಯ ಸ್ಥಾನಕ್ಕೆ ದಯಾನಂದ್ ಅವರನ್ನು ನೇಮಿಸಲಾಯಿತು. ಮರುಕ್ಷಣವೇ ಸಿದ್ಧಿಕ್ ಅವರನ್ನು ಆಯ್ಕೆ ಮಾಡಿ ನೂತನ ಅಧ್ಯಕ್ಷರಿಗೆ ಸಭೆಯಲ್ಲಿಯೇ ಗೌರವ ಸಲ್ಲಿಸಿ, ವಿಶೇಷ ಆಸನ ನೀಡಿ ಸತ್ಕರಿಸಲಾಯಿತು. ಫಟಾಫಟ್ ನಿರ್ಣಯವಾಗುತ್ತಿದ್ದ ಸಭೆಯಲ್ಲಿ ಸ್ಥಾಮಿ ಸಮಿತಿ ಅಧ್ಯಕ್ಷರ ಆಯ್ಕೆಯೂ ಸರ‍್ಪಡೆಗೊಂಡಿತು.



