
ಹುಳಿಯಾರು: ಕಷ್ಟಕಾಲಕ್ಕೆ ನೆರವಾಗಲಿ ಎಂದು ತಾವು ಬೆವರಿಸಿ ದುಡಿದ ಹಣವನ್ನು ಸಹಕಾರ ಸಂಘದಲ್ಲಿ ಇಟ್ಟಿದ್ದ ಬಡ ಜನರು, ಇಂದು ಅದೇ ಹಣಕ್ಕಾಗಿ ಬೀದಿ ಪಾಲಾಗಿರುವ ಕರುಣಾಜನಕ ಘಟನೆ ಹುಳಿಯಾರಿನಲ್ಲಿ ನಡೆದಿದೆ. ಹುಳಿಯಾರಿನ ದೇವರಾಜ ಅರಸು ಮುತ್ತಿನ ಸಹಕಾರ ಸಂಘದಲ್ಲಿ ಪಿಗ್ಮಿ ಹಣ ಕಳೆದುಕೊಂಡ ಸಂತ್ರಸ್ತರು ಶಾಸಕ ಸಿ.ಬಿ.ಸುರೇಶ್ ಬಾಬು ಅವರನ್ನು ಭೇಟಿ ಮಾಡಿ ತಮ್ಮ ಅಳಲನ್ನು ತೋಡಿಕೊಂಡರು.
ಕನಸು ನುಚ್ಚುನೂರು: ವಿಷದ ಬಾಟಲಿ ಹಿಡಿದು ಪ್ರತಿಭಟನೆ ಸಂತೃಸ್ತರು ಶಾಸಕರ ಮುಂದೆ ಅಕ್ಷರಶಃ ಕಣ್ಣೀರು ಹಾಕಿದರು. “ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಹೆಣ್ಣು ಮಕ್ಕಳ ಮದುವೆಗೆ ಮತ್ತು ಸ್ವಂತ ಮನೆಯ ಕನಸು ನನಸು ಮಾಡಿಕೊಳ್ಳಲು ನಾವು ಹೊಟ್ಟೆ ಕಟ್ಟಿ ಈ ಸಂಘದಲ್ಲಿ ಹಣ ಉಳಿತಾಯ ಮಾಡಿದ್ದೆವು. ಆದರೆ ಈಗ ನಮಗೆ ನಮ್ಮ ಹಣವೂ ಇಲ್ಲ, ಇತ್ತ ಕೇಳುವವರೂ ಇಲ್ಲದಂತಾಗಿದೆ” ಎಂದು ಗೋಳಾಡಿದರು.
ಮನವಿ ಸಲ್ಲಿಸುವ ವೇಳೆ ತೀವ್ರ ಹತಾಶೆಗೊಂಡ ಕೆಲ ಸಂತ್ರಸ್ತರು, “ಹಣ ಸಿಗದಿದ್ದರೆ ನಮಗೆ ಸಾವೊಂದೇ ದಾರಿ” ಎಂದು ತಾವು ತಂದಿದ್ದ ವಿಷದ ಬಾಟಲಿಗಳನ್ನು ತೆಗೆದು ಕುಡಿಯಲು ಯತ್ನಿಸಿದರು. ಈ ಸಂದರ್ಭದಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಶಾಸಕರು ಮತ್ತು ಅಲ್ಲಿದ್ದವರು ಸಂತ್ರಸ್ತರ ಕೈಯಲ್ಲಿದ್ದ ವಿಷದ ಬಾಟಲಿಯನ್ನು ಕಿತ್ತುಕೊಂಡು ಅನಾಹುತವನ್ನು ತಪ್ಪಿಸಿದರು.
ಸಂಘದ ಅವಾಂತರಗಳು ಸಂಘದ ಪಿಗ್ಮಿ ಸಂಗ್ರಹಗಾರರಾಗಿದ್ದ ದಿವಾಕರ್ ಇತ್ತೀಚೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಸಂತ್ರಸ್ತರ ಆತಂಕವನ್ನು ಇಮ್ಮಡಿಗೊಳಿಸಿದೆ. ಜೊತೆಗೆ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಕಚೇರಿಗೆ ಬೀಗ ಜಡಿದು ತಲೆಮರೆಸಿಕೊಂಡಿದ್ದು, ಬಡವರ ಹಣಕ್ಕೆ ಯಾವುದೇ ಭರವಸೆ ಸಿಗದಂತಾಗಿದೆ. ಹಾಗಾಗಿ ಸಹಕಾರ ಸಂಘದ ಮೇಲಧಿಕಾರಿಗಳಿಗೆ ತನಿಖೆ ನಡೆಸಿ ನ್ಯಾಯ ದೊರಕಿಸಿ ಕೊಡುವಂತೆ ಪಿಗ್ಮಿ ತಂತ್ರಸ್ಥರು ಅಂಗಲಾಚಿದರು.
ಶಾಸಕರ ಭರವಸೆ ಮತ್ತು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ: ಸಂತ್ರಸ್ತರ ಪರಿಸ್ಥಿತಿಯನ್ನು ಕಂಡು ಮನನೊಂದ ಶಾಸಕ ಸಿ.ಬಿ. ಸುರೇಶ್ ಬಾಬು, ಸ್ಥಳದಲ್ಲೇ ಸಹಕಾರ ಸಂಘಗಳ ಉಪನಿಬಂಧಕರಿಗೆ ದೂರವಾಣಿ ಕರೆ ಮಾಡಿ ಗಂಭೀರ ತರಾಟೆಗೆ ತೆಗೆದುಕೊಂಡರು.
“ಬಡವರು ಕಷ್ಟಪಟ್ಟು ಉಳಿಸಿದ ಹಣವನ್ನು ಗುಳುಂ ಮಾಡಿದವರನ್ನು ಸುಮ್ಮನೆ ಬಿಡಬಾರದು. ತಕ್ಷಣವೇ ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಹಣ ದುರ್ಬಳಕೆ ಮಾಡಿಕೊಂಡಿರುವ ಪದಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ. ಯಾವುದೇ ಕಾರಣಕ್ಕೂ ಬಡವರ ಹಣ ಪೋಲಾಗದಂತೆ ನೋಡಿಕೊಳ್ಳಬೇಕು ಮತ್ತು ಅವರಿಗೆ ಆದಷ್ಟು ಬೇಗ ಹಣ ಮರಳಿಸುವ ವ್ಯವಸ್ಥೆ ಮಾಡಬೇಕು,” ಎಂದು ಶಾಸಕರು ಕಟ್ಟುನಿಟ್ಟಿನ ಆದೇಶ ನೀಡಿದರು.
ಅಲ್ಲದೆ ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಮುಂದಾಗಬೇಡಿ, ನಿಮ್ಮ ಪರವಾಗಿ ನಾನಿದ್ದೇನೆ ಎಂದು ಶಾಸಕರು ಸಂತ್ರಸ್ತರಿಗೆ ಧೈರ್ಯ ತುಂಬಿದರು.



