
ಹುಳಿಯಾರು: ಸರ್ಕಾರದ ಮಹತ್ವಾಕಾಂಕ್ಷೆಯ ‘ಇಂಧನ ಉಳಿತಾಯ’ದ ಘೋಷಣೆಗಳು ಒಂದು ಕಡೆಯಾದರೆ, ಹುಳಿಯಾರು ಪಟ್ಟಣದ ನಿವಾಸಿಗಳು ಇಂಧನ ಖರೀಧಿಗೆ ಇಂಧನ ಸುಡಬೇಕಾದ ಅನಿವಾರ್ಯ ಸ್ಥಿತಿ ಎದುರಿಸುತ್ತಿದ್ದಾರೆ. ಪಟ್ಟಣದ ಕನಕ ಸರ್ಕಲ್ ಪೆಟ್ರೋಲ್ ಬಂಕ್ ಕಳೆದ ಆರು-ಏಳು ತಿಂಗಳುಗಳಿAದ ಸಂಪೂರ್ಣವಾಗಿ ಸ್ಥಗಿತಗೊಂಡಿರುವುದು, ಎಪಿಎಂಸಿ ಬಂಕ್‌ನಲ್ಲಿ ಸದಾಕಾಲ ನೋ ಸ್ಟಾಕ್ ಬೋರ್ಡ್ ಹಾಕಿರುವುದು ಈ ಸಮಸ್ಯೆಗೆ ಕಾರಣವಾಗಿದೆ.
ಪೆಟ್ರೋಲ್ ಖರೀಧಿಗೆ ಮರ‍್ನಲ್ಕು ಕಿ.ಮೀ ಹೋಗಬೇಕು: ಪಟ್ಟಣದಲ್ಲಿ ಪೆಟ್ರೋಲ್ ಇಲ್ಲದ ಕಾರಣ, ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೈತರು ಮತ್ತು ದಿನನಿತ್ಯದ ಉದ್ಯೋಗಿಗಳಿಗೆ ಇಂಧನ ತುಂಬಿಸಿಕೊಳ್ಳಲು ಕನಿಷ್ಠ ೩ ರಿಂದ ೪ ಕಿಲೋಮೀಟರ್ ದೂರದವರೆಗೆ ತೆರಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಅಷ್ಟೊಂದು ದೂರ ಪ್ರಯಾಣಿಸಿ ಹೋದರೂ, ಇಂಧನವಿಲ್ಲದಿದ್ದರೆ ಸವಾರರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.
ಟೌನ್‌ನಲ್ಲಿ ಓಡಾಡುವವರಿಗೆ ಆರ್ಥಿಕ ಹೊರೆ: ಹೊಸದುರ್ಗ, ತಿಪಟೂರು, ಚಿಕ್ಕನಾಯಕನಹಳ್ಳಿ, ಶಿರಾ, ಹಿರಿಯೂರು ಮಾರ್ಗದ ಕಡೆ ಓಡಾಡುವವರು ಆ ಭಾಗದಲ್ಲಿ ಸಿಗುವ ಬಂಕ್‌ಗಳಲ್ಲಿ ಇಂಧನ ಹಾಕಿಸಿಕೊಂಡು ಹೋಗಬಹುದು. ಆದರೆ ನಂದಿಹಳ್ಳಿ ಮಾರ್ಗವಾಗಿ ಅಣೆಕಟ್ಟೆ ಕಡೆ ಓಡಾಡುವವರು ಅನಿವಾರ್ಯವಾಗಿ ಮತ್ತೊಂದು ದಿಕ್ಕಿಗೆ ಹೋಗಿ ಇಂಧನ ಹಾಕಿಸಿಕೊಳ್ಳಬೇಕು. ಇನ್ನು ಪಟ್ಟಣದಲ್ಲಿ ಓಡಾಡುವವರು ಊರಿಂದ ಹೊರಗೆ ಹೋಗಿ ಹಾಕಿಸಿಕೊಳ್ಳಬೇಕು. ಪೇಪರ್, ಹಾಲು, ಸೊಪ್ಪು ಸೇರಿದಂತೆ ಇತರೆ ವ್ಯಾಪಾರಿಗಳಿಗೆ ಇದು ಆರ್ಥಿಕ ಹೊರೆಯಾಗಿದೆ.
ಪಟ್ಟಣದ ಗೂಡಂಗಡಿಗಳಿಗೆ ಮೊರೆ: ಹುಳಿಯಾರಿನಿಂದ ಯಾವ ದಿಕ್ಕಿಗೆ ಹೋದರೂ ಮರ‍್ನಲ್ಕು ಕಿ.ಮೀ ಹೋಗಿ ಬರಲೇಬೇಕು. ಅದರ ಬದಲು ಪಟ್ಟಣದ ಗೂಡಂಗಡಿಗಳಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳುವುದೇ ಒಳಿತು ಎಂದು ಹೆಚ್ಚಿನ ಬೆಲೆ ನೀಡಿ ಪೆಟ್ರೋಲ್ ಖರೀದಿಸುತ್ತಿದ್ದಾರೆ. ಆದರೆ ಡಿಸೆಲ್ ಬೇಕಿರುವವರು ಬೈಕ್, ಕಾರಿನಲ್ಲಿ ಮರ‍್ನಲ್ಕು ಕಿಮೀ ಹೋಗಿ ಡಿಸೆಲ್ ಖರೀದಿಸುವುದು ಅನಿವಾರ್ಯವಾಗಿದೆ. ಇಂಧನ ಬೆಲೆ ಏರಿಕೆಯ ನಡುವೆ, ದೂರದ ಬಂಕ್‌ಗಳಿಗೆ ಅಲೆದಾಡುವುದು ಮತ್ತು ಗೂಡಂಗಡಿಯಲ್ಲಿ ದುಬಾರಿ ಬೆಲೆಗೆ ಪೆಟ್ರೋಲ್ ಖರೀದಿಸುವುದು ಬಡ ಹಾಗೂ ಮಧ್ಯಮ ವರ್ಗದವರ ಜೇಬಿಗೆ ಕತ್ತರಿ ಹಾಕುತ್ತಿದೆ.
ಇಂಧನ ಉಳಿತಾಯಕ್ಕೆ ತಾನೇ ಅಡ್ಡಿಯಾದ ವ್ಯವಸ್ಥೆ: ಪ್ರಧಾನಿ ನರೇಂದ್ರ ಮೋದಿಯವರ ಇಂಧನ ಉಳಿತಾಯದ ಕರೆಯು ದೇಶದ ಸಂಪನ್ಮೂಲವನ್ನು ಕಾಪಾಡುವ ಉದ್ದೇಶ ಹೊಂದಿದೆ. ಆದರೆ, ಹುಳಿಯಾರಿನಲ್ಲಿನ ಈ ವ್ಯವಸ್ಥೆಯ ವೈಫಲ್ಯದಿಂದಾಗಿ, ನಾಗರಿಕರು ಇಂಧನ ಪಡೆಯಲು ವಾಹನಗಳನ್ನು ಅನಗತ್ಯವಾಗಿ ದೂರದವರೆಗೆ ಓಡಿಸಿ, ಇಂಧನವನ್ನು ವ್ಯರ್ಥ ಮಾಡುವಂತಾಗಿದೆ. ಇದು ಒಂದು ವಿಪರ್ಯಾಸವೇ ಸರಿ. ಸ್ಥಗಿತಗೊಂಡಿರುವ ಪೆಟ್ರೋಲ್ ಬಂಕ್‌ಗಳ ಮರುಪ್ರಾರಂಭಕ್ಕೆ ಹಾಗೂ ಸದಾಕಾಲ ಇಂಧನ ಸ್ಟಾಕ್ ಇಡುವಂತೆ ಸಂಬ0ಧಪಟ್ಟ ಅಧಿಕಾರಿಗಳು ಅಥವಾ ಮಾಲೀಕರು ಏಕೆ ಗಮನ ಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.


