
ಹುಳಿಯಾರು: ಹುಳಿಯಾರು ಹೋಬಳಿಯ ತಿಮ್ಲಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಗುರುವಾರ ವಿಶೇಷ ಪ್ರಗತಿ ಪರಿಶೀಲನೆ ಹಾಗೂ ಸಾಲ ವಿತರಣಾ ಸಮಾರಂಭದಲ್ಲಿ ಅರ್ಹ ಫಲಾನುಭವಿ ರೈತರಿಗೆ ಹಾಗೂ ಸದಸ್ಯರಿಗೆ ಆರ್ಥಿಕ ನೆರವು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನ ಸಾಲ ಸೌಲಭ್ಯದ ಅಂಗವಾಗಿ ಒಟ್ಟು ೬೧ ಜನ ಸದಸ್ಯರಿಗೆ ೨೦ ಲಕ್ಷ ೫ ಸಾವಿರ ರೂಪಾಯಿಗಳ ಸಾಲದ ಪತ್ರ ಹಾಗೂ ಸೌಲಭ್ಯವನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಾಲ ವಿತರಣೆ ನೆರವೇರಿಸಿ ಮಾತನಾಡಿದ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸಿಂಗದಹಳ್ಳಿ ರಾಜಕುಮಾರ್ ಅವರು, ಸಹಕಾರ ಸಂಘಗಳು ಗ್ರಾಮೀಣ ಭಾಗದ ಆರ್ಥಿಕ ಬೆನ್ನೆಲುಬಾಗಿವೆ. ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಲೇವಾದೇವಿಗಾರರನ್ನೇ ಅವಲಂಬಿಸುವುದನ್ನು ತಪ್ಪಿಸಲು ಈ ಸಂಘಗಳು ನಿರಂತರ ಶ್ರಮಿಸುತ್ತಿವೆ. ತಿಮ್ಲಾಪುರ ಕೃಷಿ ಪತ್ತಿನ ಸಹಕಾರ ಸಂಘವು ಈ ನಿಟ್ಟಿನಲ್ಲಿ ಅತ್ಯುತ್ತಮ ಸಾಧನೆ ತೋರಿದೆ. ಸಂಘದ ವತಿಯಿಂದ ಇದುವರೆಗೆ ಒಟ್ಟು ೬೮೬ ಸದಸ್ಯರಿಗೆ ೨ ಕೋಟಿ ೧೯ ಲಕ್ಷ ೫ ಸಾವಿರ ರೂಪಾಯಿಗಳ ಸಾಲ ಸೌಲಭ್ಯವನ್ನು ಯಶಸ್ವಿಯಾಗಿ ತಲುಪಿಸಲಾಗಿದೆ ಎಂದು ಶ್ಲಾಘಿಸಿದರು.
ಸ್ವಂತ ಕಟ್ಟಡ ಹಾಗೂ ಸುರಕ್ಷಿತ ಟ್ರೆಜರಿ ವ್ಯವಸ್ಥೆಯ ಭರವಸೆ: ಪ್ರಸ್ತುತ ಸಹಕಾರ ಸಂಘವು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರಣ ಎದುರಾಗುತ್ತಿರುವ ತೊಂದರೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರಲ್ಲದೆ ಸಂಘಕ್ಕೆ ಸುಸಜ್ಜಿತವಾದ ಸ್ವಂತ ಕಟ್ಟಡವನ್ನು ನಿರ್ಮಿಸಲು ಡಿಸಿಸಿ ಬ್ಯಾಂಕ್ ವತಿಯಿಂದ ಅಗತ್ಯ ಧನಸಹಾಯವನ್ನು ಮಂಜೂರು ಮಾಡಿಕೊಡಲಾಗುವುದು. ಇದರೊಂದಿಗೆ ಗ್ರಾಹಕರ ಒಡವೆ ಹಾಗೂ ಪ್ರಮುಖ ದಾಖಲೆಗಳ ಸುರಕ್ಷತೆಗಾಗಿ ಸಂಘದಲ್ಲಿ ನೂತನ ಟ್ರೆಜರಿ/ಲಾಕರ್ ಸೌಲಭ್ಯವನ್ನು ಜಾರಿಗೆ ತರಲಾಗುವುದು. ಮುಂದಿನ ದಿನಗಳಲ್ಲಿ ಹೊಸದಾಗಿ ನೋಂದಣಿಯಾಗುವ ಪ್ರತಿಯೊಬ್ಬ ಅರ್ಹ ರೈತರಿಗೂ ಹೊಸ ರೆಕಾರ್ಡ್ಗಳ ಆಧಾರದ ಮೇಲೆ ಆದ್ಯತೆಯ ಮೇರೆಗೆ ಸಾಲ ಸೌಲಭ್ಯ ನೀಡÀಲಾಗುವುದು ಎಂದು ಅವರು ಪ್ರಕಟಿಸಿದರು.
ಆರೋಗ್ಯ ರಕ್ಷಣೆಗೆ ಯಶಸ್ವಿನಿ ಯೋಜನೆ: ರೈತ ಸಮುದಾಯದ ಆರೋಗ್ಯ ಹಿತದೃಷ್ಟಿಯಿಂದ ಜಾರಿಯಲ್ಲಿದ್ದ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯ ಮಹತ್ವವನ್ನು ವಿವರಿಸಿದ ಅವರು, ಸಂಘದ ವ್ಯಾಪ್ತಿಯಲ್ಲಿ ಈಗಾಗಲೇ ಒಟ್ಟು ೮೧ ಜನ ಸದಸ್ಯರಿಗೆ ಯಶಸ್ವಿನಿ ಕಾರ್ಡ್ಗಳನ್ನು ಮಾಡಿಸಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಬರುವ ಇಂತಹ ಎಲ್ಲಾ ಜನಪರ ಹಾಗೂ ಆರೋಗ್ಯ ರಕ್ಷಣಾ ಯೋಜನೆಗಳನ್ನು ರೈತರು ಮರುನವೀಕರಣ ಮಾಡಿಕೊಂಡು ಪೂರ್ಣ ಪ್ರಮಾಣದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ವರದರಾಜು ವಹಿಸಿದ್ದರು. ಮೇಲ್ವಿಚಾರಕರಾದ ರಂಗಸ್ವಾಮಿ, ಸಂಘದ ಉಪಾಧ್ಯಕ್ಷರಾದ ಈಶ್ವರಪ್ಪ, ನಿರ್ದೇಶಕರುಗಳಾದ ಈರಣ್ಣ, ಪ್ರತಿಭಾ, ಗೀತಾ, ಮಂಜುನಾಥ್, ಕಾರ್ಯದರ್ಶಿ ರಮೇಶ್ ಸೇರಿದಂತೆ ಸಂಘದ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸ್ಥಳೀಯ ರೈತ ಬಾಂಧವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


