ಹುಳಿಯಾರು: ಪಟ್ಟಣದ ಹೃದಯಭಾಗದಲ್ಲಿರುವ ಬಸ್ ನಿಲ್ದಾಣದ ನೂತನ ಸಾರ್ವಜನಿಕ ಶೌಚಾಲಯಕ್ಕೆ ಕಳೆದ ೧ ವಾರದಿಂದ ಬೀಗ ಜಡಿಯಲಾಗಿದ್ದು, ಪ್ರಯಾಣಿಕರು ಮತ್ತು ವ್ಯಾಪಾರಿಗಳು ಶೌಚಕ್ಕಾಗಿ ಅಲೆದಾಡುವಂತಾಗಿದೆ. ಆದರೂ ಪಟ್ಟಣ ಪಂಚಾಯಿತಿ ಗಮನ ಹರಿಸದೆ ನಿರ್ಲಕ್ಷಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಬಯಲು ಶೌಚಾಲಯವಾದ ಬಸ್ ನಿಲ್ದಾಣ!: ಶೌಚಾಲಯಕ್ಕೆ ಬೀಗ ಬಿದ್ದಿರುವ ಪರಿಣಾಮವಾಗಿ ಬಸ್ ನಿಲ್ದಾಣದ ಆವರಣದಲ್ಲಿ ಮತ್ತೆ ಬಯಲು ಶೌಚದ ಪಿಡುಗು ಆರಂಭವಾಗಿದೆ. ಹೊರ ಊರುಗಳಿಂದ ಬರುವ ಪ್ರಯಾಣಿಕರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಶೌಚಾಲಯವಿಲ್ಲದೆ ತೀವ್ರ ಮುಜುಗರ ಮತ್ತು ತೊಂದರೆ ಅನುಭವಿಸುತ್ತಿದ್ದಾರೆ. ಬಸ್ ನಿಲ್ದಾಣದ ಸುತ್ತಮುತ್ತಲಿರುವ ನೂರಾರು ಫುಟ್ಬಾತ್ ಅಂಗಡಿಯವರು ಹಾಗೂ ಪಟ್ಟಣ ಪಂಚಾಯಿತಿಯ ವಾಣಿಜ್ಯ ಮಳಿಗೆಗಳ ಬಾಡಿಗೆದಾರರು ಶೌಚಕ್ಕಾಗಿ ಪರ್ಯಾಯ ವ್ಯವಸ್ಥೆ ಇಲ್ಲದೆ ಕಂಗಾಲಾಗಿದ್ದಾರೆ.
ಮಹಿಳೆಯರ ಪಾಡು ಹೇಳತೀರದು: ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯಕ್ಕೆ ಬೀಗ ಹಾಕಿರುವುದು ಮಹಿಳಾ ಪ್ರಯಾಣಿಕರಿಗೆ, ಮಹಿಳಾ ಕಂಡಕ್ಟರ್‌ಗಳಿಗೆ ಶಾಪವಾಗಿ ಪರಿಣಮಿಸಿದೆ. ತುರ್ತು ಸಂದರ್ಭಗಳಲ್ಲಿ ಶೌಚಾಲಯ ಸಿಗದೆ ಮಹಿಳೆಯರು ಪಡುತ್ತಿರುವ ಸಂಕಷ್ಟ ನೋಡುವವರೂ ಇಲ್ಲದಂತಾಗಿದೆ. ಕೆರೆ ಅಂಗಳದಲ್ಲಿ ಒಬ್ಬರು ಕಾವಲಿಗೆ ನಿಂತು ಮತ್ತೊಬ್ಬರು ಶೌಚಕ್ಕೆ ಹೋಗುವ ದುಸ್ಥಿತಿ ನಿರ್ಮಾಣವಾಗಿದೆ.
ಹುಳಿಯಾರು ಶೌಚಾಲಯದ ನಿರ್ವಹಣೆಗೆ ಗುತ್ತಿಗೆ ನೀಡಲಾಗಿದ್ದು ಇವರು ಶೌಚಾಲಯ ಲೋಕಾರ್ಪಣೆಗೊಂಡ ದಿನದಿಂದಲೂ ನಿರ್ವಹಣೆಯಲ್ಲಿ ವಿಫಲವಾಗಿದ್ದಾರೆ. ಹತ್ತದಿನೈದು ದಿನ ಬಾಗಿಲು ತೆರೆದರೆ ವಾರಗಟ್ಟಲೆ ಬಾಗಿಲು ಹಾಕಿರುತ್ತಾರೆ. ಅಲ್ಲದೆ ಬಾಗಿಲು ತೆರೆಯುವ ಸಮಯವೂ ನಿಗದಿಯಿಲ್ಲದೆ ಎಂಟೊಭತ್ತು ಗಂಟೆಗೆ ತೆರೆಯುತ್ತಾರೆ. ಹಾಗಾಗಿ ಪಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಶೌಚಾಲಯದ ಬೀಗ ತೆಗೆಸುವ ಮೂಲಕ ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ.
(Visited 1 times, 1 visits today)



