ತುಮಕೂರು: ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳು, ದ್ವೀತಿಯ ದರ್ಜೆ ಸಹಾಯಕರಿಗೆ ಪ್ರಥಮ ದರ್ಜೆ ಸಹಾಯಕರಾಗಿ ಹಾಗೂ ರಾಜಸ್ವ ನಿರೀಕ್ಷಕರಾಗಿ ಬಡ್ತಿ ನೀಡಬೇಕು ಎಂದು ರಾಜ್ಯ ಸರ್ಕಾರ ಆದೇಶಿ ಸಿದ್ದರೂ ತುಮಕೂರು ಜಿಲ್ಲೆಯಲ್ಲಿ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ.
ಜಿಲ್ಲೆಯಲ್ಲಿ ೭೦೦ಕ್ಕೂ ಹೆಚ್ಚು ಗ್ರಾಮ ಆಡಳಿತ ಅಧಿಕಾರಿಗಳು ಬಡ್ತಿಗಾಗಿ ಚಾತಕ ಪಯಂತೆ ಕಾಯುತ್ತಿದ್ದು ಉದ್ದೇಶಪೂರ್ವಕವಾಗಿ ಬಡ್ತಿ ಪ್ರಕ್ರಿಯೆಯನ್ನು ಜಿಲ್ಲಾಡಳಿತ ತಡಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಜಿಲ್ಲಾಧಿಕಾರಿ ಶುಭಕಲ್ಯಾಣ್ ವಿರುದ್ಧ ಇತ್ತೀಚೆಗೆ ವಿಎಒಗಳು “ತೊಲಗಲಿ ತೊಲಗಲಿ’ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದು ಬಡ್ತಿ ಪ್ರಕ್ರಿಯೆ ತಡವಾಗಲು ನೆಪವಾಗಿದೆ ಎಂಬ ಆರೋಪ ಕೇಳಿಬಂದಿದೆ.
ತುಮಕೂರು ಜಿಲ್ಲೆಯ ಕಂದಾಯ ಘಟಕದ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ದ್ವೀತಿಯ ದರ್ಜೆ ಸಹಾಯಕ ವೃಂದದ ಅಂತಿಮ ಸಂಯುಕ್ತ ಜೇಷ್ಟತಾ ಪಟ್ಟಿಯಲ್ಲಿ ೭೦೦ಕ್ಕೂ ಹೆಚ್ಚು ಸಿಬ್ಬಂದಿಗಳಿದ್ದು ೭೫ ಖಾಲಿ ಹುದ್ದೆಗಳಿಗೆ ಬಡ್ತಿ ನೀಡಲು ಅವಕಾಶವಿದೆ. ಜಿಲ್ಲೆಯಲ್ಲಿ ಬಡ್ತಿ ತಡ ಮಾಡುವುದರಿಂದ ಆರ್‌ಐ ಮೇಲ್ಪಟ್ಟ ಮುಂಬಡ್ತಿಯಲ್ಲಿ ವಿಭಾಗ ಮಟ್ಟದ ಸೇವಾ ಹಿರಿತನ ಕಳೆದುಕೊಂಡು ಭವಿಷ್ಯದ ಮುಂಬಡ್ತಿಯಲ್ಲಿ ಜಿಲ್ಲೆಯ ಅಧಿಕಾರಿಗಳು ಅನ್ಯಾಯ ಅನುಭವಿಸಲಿದ್ದಾರೆ.
ದಾವಣಗೆರೆ, ಉತ್ತರ ಕನ್ನಡ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಿಎಒಗಳಿಗೆ ಬಡ್ತಿ ನೀಡಲಾಗಿದ್ದು ಕಂದಾಯ ಖಾತೆಯನ್ನು ಹೊಂದಿರುವ ಡಿಸಿಎಂ ಡಾ.ಜಿ.ಪರಮೇಶ್ವರ ಸ್ವಂತ ಜಿಲ್ಲೆ ತುಮಕೂರಿನಲ್ಲಿ ಬಡ್ತಿ ತಡಮಾಡಿರುವುದು ಆಚ್ಚರಿಗೆ ಕಾರಣವಾಗಿದೆ. ರಾಜ್ಯ ಸರ್ಕಾರದ ಕಂದಾಯ ಸೇವೆಗಳ ವೃಂದ ಮತ್ತು ನೇಮಕಾತಿ ನಿಯಮ&೨೦೨೬ರಂತೆ ಜಿಲ್ಲೆಯಲ್ಲಿ ಮುಂಬಡ್ತಿಗೆ ಮೀನಾಮೇಷ ಎಣಿಸುತ್ತಿರುವುದು ಕಂದಾಯ ಇಲಾಖೆಯಲ್ಲಿ ಮತ್ತೊಂದು ಸುತ್ತಿನ ಜಿದ್ದಾಜಿದ್ದಿಗೆ ವೇದಿಕೆಯಾಗುತ್ತಿದೆ.
ಇತ್ತೀಚೆಗೆ ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ವಿಎಒಗಳು ನಡೆಸಿದ್ದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಡಿಸಿಎಂ ಡಾ.ಜಿ.ಪರಮೇಶ್ವರ ಕೂಡ ಶ್ರೀದಲ್ಲಿಯೇ ಬಡ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿ ತಿಂಗಳಾದರೂ ಜಿಲ್ಲಾಡಳಿತ ಸಿಬ್ಬಂದಿ ಮುಂಬಡ್ತಿಗೆ ಹಿಂದೇಟು ಹಾಕಿರುವುದು ವಿಎಒಗಳ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರತಿಭಟನೆ ನಡೆಸಿದ್ದವರ ವಿರುದ್ಧ ಡಿಸಿ ಸಿಟ್ಟು: ಜಿಲ್ಲೆಯಲ್ಲಿ ಕಂದಾಯ ವಿಎಒ, ಎಸ್‌ಡಿಒ ಮುಂಬಡ್ತಿ ತಡಮಾಡುತ್ತಿರುವ ವಿಷಯ ತರಹೇವಾರಿ ಚರ್ಚೆಗೆ ಕಾರಣವಾಗುತ್ತಿದೆ. ಜಿಲ್ಲೆಯ ಇತಿಹಾಸದಲ್ಲಿಯೇ ಎಐಎಸ್ ಅಧಿಕಾರಿಯೊಬ್ಬರ ವಿರುದ್ಧ ಇಲಾಖೆಯ ಕೆಳ ಹಂತದ ಸಿಬ್ಬಂದಿ ಪ್ರತಿಭಟನೆ ನಡೆಸಿ, ಘೋಷಣೆಗಳನ್ನು ಕೂಗಿದ್ದನ್ನು ಜಿಲ್ಲಾಧಿಕಾರಿ ಶುಭಕಲ್ಯಾಣ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ ಎಂಬ ಅನುಮಾನ ಮೂಡಲಾರಂಭಿಸಿದೆ. ವಿಎಒ ಭುವನಾ ಅಪಘಾತದ ನಂತರ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆಯಿಂದ ಕಂದಾಯ ಇಲಾಖೆಯಲ್ಲಿ ಮೇಲಾಧಿಕಾರಿಗಳು ಹಾಗೂ ಕೆಳಹಂತದ ಅಧಿಕಾರಿಗಳ ನಡುವೆ ಸಮನ್ವಯತೆಯ ಕೊರತೆ ಉಂಟಾಗಿದ್ದು ಎಸ್‌ಐಆರ್ ಪ್ರಕ್ರಿಯೆಗೆ ಮಾತ್ರ ಆದ್ಯತೆ ನೀಡಿ ಕೆಲಸ ಮಾಡುತ್ತಿದ್ದಾರೆ. ಕಂದಾಯ ಇಲಾಖೆಯ ಇನ್ಯಾವುದೇ ಕೆಲಸಗಳು ಸಕಾಲದಲ್ಲಿ ಪೂರ್ಣವಾಗದೆ ನೆನೆಗುದಿಗೆ ಬಿದ್ದಿವೆ.

(Visited 1 times, 1 visits today)